ಇತ್ತೀಚೆಗೆ ಅಕ್ಷರದಲ್ಲಿ ಐಕ್ಯರಾದ ಎನ್.ಪಿ.ಶೆಟ್ಟಿ ಅವರು ಓರ್ವ ಸಜ್ಜನ ಸಾಹಿತಿ ಮತ್ತು ಪ್ರಸಂಗಕರ್ತ. ತುಳು ಮತ್ತು ಕನ್ನಡ ಭಾಷೆಗಳ ಅನೇಕ ಕೃತಿಗಳ ವಿಧಾತರಾಗಿರುವ ಶೆಟ್ಟರು ಸಶಕ್ತ ಕವಿ. ಅರ್ಥಧಾರಿ,ಕವಿ, ಪ್ರವಚನಕಾರ ಕುಬೆವೂರು ಮೂಡುಮನೆ ಪುಟ್ಟಣ್ಣ ಶೆಟ್ಟಿ-ಪಾದೂರು ತೆಂಕರಗುತ್ತು ಕಿಟ್ಟಿ ಶೆಟ್ಟಿ ದಂಪತಿ ಪುತ್ರ ನಾರಾಯಣ ಶೆಟ್ಟಿ ಜನಿಸಿದ್ದು ಫೆ. 26, 1947 ರಂದು. ಇವರೊಳಗಿದ್ದ ಅಕ್ಷರ ಸಂಪತ್ತು ತಂದೆಯ ಬಳುವಳಿ.
ಮುಲ್ಕಿ ಸರಕಾರಿ ಶಾಲೆಯಲ್ಲಿ ಪ್ರೌಢಶಿಕ್ಷಣ ಪೂರೈಸಿದ ಶೆಟ್ಟರು ಬದುಕು ಕಟ್ಟಿಕೊಳ್ಳಲು ಮುಂಬಯಿಗೆ ತೆರಳಿ ಸ್ನಾತಕೋತ್ತರ ಪದವೀಧರರಾದರು. ಮುಂದೆ ವಿವಿಧ ಕಾಲೇಜುಗಳಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು. ಅನಂತರ ವಿಜಯಾ ಬ್ಯಾಂಕ್ ಅಧಿಕಾರಿಯಾಗಿ, ಪ್ರಶಿಕ್ಷಣ ಕೇಂದ್ರಗಳಲ್ಲಿ ತರಬೇತುದಾರರಾಗಿ ದುಡಿದು ಸ್ವಯಂ ನಿವೃತ್ತಿ ಪಡೆದರು.
ಮುಂಬಯಿಯಲ್ಲಿ ಕನ್ನಡ ಮತ್ತು ಸಾಂಸ್ಕೃತಿಕ ಸಂಘಟನೆಗಳಲ್ಲಿ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿ ಭಾಷೆ ಮತ್ತು ಸಂಸ್ಕೃತಿಯ ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿದವರು. ಹುಟ್ಟೂರಿಗೆ ಬಂದ ಬಳಿಕವೂ ಸಾಮಾಜಿಕ ಸೇವೆ ಮುಂದುವರಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯ, ವರ್ಧಮಾನ ಪ್ರಶಸ್ತಿ ಸಮಿತಿಯ ಸದಸ್ಯ, ಅಲ್ಲಮಪ್ರಭು ಪೀಠ, ಆಳ್ವಾಸ್ ನುಡಿಸಿರಿ ಸಮಿತಿ ಸದಸ್ಯ, ಮುಲ್ಕಿ ರೋಟರಿ ಕ್ಲಬ್‌ನ ಅಧ್ಯಕ್ಷ, ಮುಲ್ಕಿ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ…ಹೀಗೆ ಹಲವಾರು ಸಂಘ-ಸಂಸ್ಥೆಗಳಲ್ಲಿ ಸಕ್ರಿಯರಾಗಿ ಸೇವೆ ಸಲ್ಲಿಸುತ್ತಿದ್ದ ಕುಬೆವೂರು ನಾರಾಯಣ ಪುಟ್ಟಣ್ಣ ಶೆಟ್ಟರು ಸಮಾಜ ಮತ್ತು ಸಾಹಿತ್ಯ,ಕಲಾ ಸೇವೆಯಲ್ಲಿ ಅಗ್ರಗಣ್ಯರಾಗಿದ್ದರು.
“ಶುಭೋದಯ, “ನಿನಗೆ ನಮನ ಸುಮನ ಮುಂತಾದ ಕವನ ಸಂಕಲನಗಳನ್ನು ಕನ್ನಡದಲ್ಲೂ, “ಬಾಯಿದೊಂಜಿ ಪಾತೆರೊ’ ಎಂಬ ತುಳು ಕವನ ಸಂಕಲನವನ್ನು ತುಳುವಿನಲ್ಲೂ ಹಾಗೂ ಮಹನೀಯರ ವ್ಯಕ್ತಿಚಿತ್ರದ ಹೊತ್ತಗೆಗಳನ್ನೂ ಪ್ರಕಟಿಸಿದ್ದಾರೆ. “ಹನುಮ ವೈಭವ’, “ಶ್ರೀ ವಿದ್ಯಾಮಹಿಮೆ’ ಇವರ ಭಾಮಿನೀ ಷಟ³ದಿಯ ಕನ್ನಡ ಕಾವ್ಯಗಳು, “ತಪ್ಪುಗು ತರೆದಂಡ’ ಮತ್ತು “ಬತ್ತೆ ಕೆತ್ತರೆ ಉತ್ತರೆ’ ಎಂಬ ಎರಡು ತುಳು ಖಂಡಕಾವ್ಯಗಳನ್ನು ಭಾಮಿನೀ ಷಟ³ದಿಯಲ್ಲಿ ಬರೆದ ಎನ್.ಪಿ.ಶೆಟ್ಟರು ತುಳು ಗ್ರಾಮ್ಯಭಾಷೆಯಲ್ಲ ಸುಂದರ ಸಾಂಸ್ಕೃತಿಕ ಭಾಷೆಯೆಂದು ತೋರಿಸಿ ಕೊಟ್ಟಿದ್ದಾರೆ. ಕುಮಾರವ್ಯಾಸನ ಭಾರತದಿಂದ “ಕೀಚಕವಧೆ’ ಮತ್ತು “ಉತ್ತರನ ಪೌರುಷ’ದ ಭಾಗವನ್ನು ತನ್ನ ಕಾವ್ಯಕ್ಕೆ ವಸ್ತುವಾಗಿ ಆಯ್ದು ತುಳುವಿಗೆ ಅನುವಾದಗೊಳಿಸಿದ ಈ ಎರಡೂ ಕೃತಿಗಳಲ್ಲಿ ಅನುವಾದಕನಿಗಿರಬೇಕಾದ ಭಾಷಾಪ್ರಭುತ್ವ, ಭಾವದ ಗ್ರಹಿಕೆ, ಸಂಸ್ಕೃತಿಯ ದಟ್ಟ ಅರಿವು ಎದ್ದು ತೋರುತ್ತದೆ.”ಬಾಲಯತಿ ಶಂಕರ’ ಮತ್ತು “ಶಿಮಂತೂರು ಕ್ಷೇತ್ರ ಮಹಾತ್ಮೆ’ ಎಂಬ ಎರಡು ಯಕ್ಷಗಾನ ಪ್ರಸಂಗಗಳನ್ನು ಬರೆದ ಶೆಟ್ಟರು ಛಂದೋಬದ್ಧವಾದ ಪಾರಂಪರಿಕ ಮಟ್ಟುಗಳ ಸೊಗಸಾದ ಹಾಡುಗಳನ್ನು ಕೃತಿಯುದ್ದಕ್ಕೂ ಹೊಸೆದಿದ್ದಾರೆ. “ಯೋಗ ಮತ್ತು ಮೌಲ್ಯಚಿಂತನ’ ಯೋಗದ ಕುರಿತಾದ ಇವರ ಕೃತಿ.”ತಪ್ಪುಗು ತರೆದಂಡ’ ಕೃತಿಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅತ್ಯುತ್ತಮ ಕಾವ್ಯ ಪ್ರಶಸ್ತಿ ನೀಡಿ ಗೌರವಿಸಿದೆ. ಹಲವಾರು ಸಂಘ-ಸಂಸ್ಥೆಗಳ ಸಮ್ಮಾನ ಗೌರವಕ್ಕೆ ಪಾತ್ರರಾದ ಎನ್.ಪಿ.ಶೆಟ್ಟರು ನಿಸ್ಪೃಹತೆಯಿಂದ ಸಾಹಿತ್ಯದ ಆರಾಧನೆ ಮಾಡಿದವರು. ಸರಸ್ವತಿಯ ಸೇವೆ ಮಾಡುತ್ತಿದ್ದ ಕವಿ, ಸಾಹಿತಿ, ಸಜ್ಜನ ಎನ್.ಪಿ.ಶೆಟ್ಟರು ಇನ್ನಿಲ್ಲವೆಂದರೆ ಆಘಾತವಲ್ಲದೆ ಮತ್ತೇನು? ಅದೂ ಕೂಡಾ ಆಗಸದಲ್ಲಿ ಶೋಭಿಸುತ್ತಿದ್ದ ನಕ್ಷತ್ರ ಉಲ್ಕೆಯಾಗಿ ಉರುಳಿದಂತೆ! ಕ್ರೂರ ವಿಧಿಯ ಮುಂದೆ ನಾವೆಲ್ಲರೂ ಅಸಹಾಯಕರಲ್ಲವೆ?
ತಾರಾನಾಥ ವರ್ಕಾಡಿ