ಬೆಂಗಳೂರು: ಸಮಾಜ ಘಾತುಕ ಶಕ್ತಿಗಳಿಗೆ ಬೆಂಬಲ ನೀಡಿದ ಆರೋಪಕ್ಕೆ ಸಿಲುಕಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯ್ (ಪಿಎಫ್ಐ) ಹಾಗೂ ಎಸ್‌ಡಿಪಿಐ ಸಂಘಟನೆಗಳ ಮೇಲೆ ನಿಷೇಧ ಹೇರಲು ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮವನ್ನು ಸಂಸದ ತೇಜಸ್ವಿ ಸೂರ್ಯ ಸ್ವಾಗತಿಸಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ನಿವಾಸಕ್ಕೆ ಶನಿವಾರ ಬೆಳಗ್ಗೆ ಭೇಟಿ ನೀಡಿದ ತೇಜಸ್ವಿ ಸೂರ್ಯ, ಪಿಎಫ್ಐ ಹಾಗೂ ಎಸ್‌ಡಿಪಿಐ ಸಂಘಟನೆಗಳನ್ನು ನಿಷೇಧಿಸಲು ಮುಂದಾಗಿರುವ ಮುಖ್ಯಮಂತ್ರಿ ಯವರಿಗೆ ಅಭಿನಂದನೆ ಸಲ್ಲಿಸಿದರು.
ಪಿಎಫ್ಐ ಹಾಗೂ ಎಸ್‌ಡಿಪಿಐ ಸಂಘಟನೆಗಳು ಸಮಾಜಘಾತುಕ ಮತ್ತು ಕೆಲವು ಭಯೋತ್ಪಾದಕ ಸಂಘಟನೆಗಳಿಗೆ ನೇರವಾಗಿಯೇ ಕುಮ್ಮಕ್ಕು ನೀಡುತ್ತಿದ್ದ ಆರೋಪ ಮೊದಲಿ ನಿಂದಲೂ ಕೇಳಿ ಬರುತ್ತಿತ್ತು. ಸಿಎಎ ಮತ್ತು ಎನ್‌ಆರ್‌ಸಿ ಬೆಂಬಲಿಸಿ ಹೋರಾಟ ಮಾಡುತ್ತಿರುವವರನ್ನು ಗುರಿಯಾಗಿಟ್ಟುಕೊಂಡು ಹತ್ಯೆಗೈಯ್ಯಲು ಸಂಚು ರೂಪಿಸಿರುವುದು ಪೊಲೀಸರ ತನಿಖೆಯಿಂದ ದೃಢಪಟ್ಟಿದೆ.
ಕೊನೆಗೂ ಸರ್ಕಾರ ಈ ಸಂಘಟನೆಗಳ ಮೇಲೆ ನಿಷೇಧ ಹೇರಲು ಮುಂದಾಗಿರುವ ಕ್ರಮ ಸರಿಯಾಗಿದೆ ಎಂದರು. ಉತ್ತರ ಪ್ರದೇಶದಲ್ಲಿ ಈಗಾಗಲೇ ಈ ಸಂಘಟನೆಗಳ ಮೇಲೆ ನಿಷೇಧ ಹೇರುವಂತೆ ಕೇಂದ್ರ ಗೃಹ ಇಲಾಖೆಗೆ ಶಿಫಾರಸು ಮಾಡಿದೆ. ರಾಜ್ಯ ಸರ್ಕಾರವೂ ಇದೇ ಕ್ರಮ ಅನುಸರಿಸುವುದು ಸರಿಯಾದ ತೀರ್ಮಾನ ವಾಗಿದೆ ಎಂದು ಅಭಿನಂದನೆ ಸಲ್ಲಿಸಿದರು.
ಪೌರತ್ವ ತಿದ್ದುಪಡಿ ಕಾಯ್ದೆಯ ಪರ-ವಿರೋಧವಾಗಿ ಯಾರೇ ಹೋರಾಟ ನಡೆಸಿದರೂ ನಮ್ಮದೇನು ಅಭ್ಯಂತರವಿಲ್ಲ. ಶಾಂತಿಯುತ ಪ್ರತಿಭಟನೆಗೆ ಅವಕಾಶವಿದೆ. ಆದರೆ ಕಾಯ್ದೆ ಪರವಾಗಿ ಹೋರಾಟ ಮಾಡುವವರ ಹತ್ಯೆಗೆ ಮುಂದಾಗುವುದು ಎಷ್ಟುಸರಿ ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ಐಸಿಸ್ ಉಗ್ರರಿಗೂ ಈ ಸಂಘಟನೆಗಳು ಕುಮ್ಮಕ್ಕು ನೀಡಿವೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಇವರ ಮೇಲೆ ದಾಖಲಾಗಿದ್ದ ಪ್ರಕರಣಗಳನ್ನು ಕೈಬಿಟ್ಟಿದ್ದರಿಂದಲೇ ಇವರಿಗೆ ಇನ್ನಷ್ಟು ಕುಮ್ಮಕ್ಕು ದೊರೆಯಿತು. ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದ್ದು ಸಂಘಟನೆಗಳನ್ನು ಬುಡಸಮೇತ ಕಿತ್ತು ಹಾಕಬೇಕು ಎಂದು ಹೇಳಿದರು.