Advertisement

ಸುಮಲತಾ ರಾಜಕೀಯ ಪ್ರವೇಶಿಸಿದರೆ ಸ್ವಾಗತ: ದಿನೇಶ್‌

07:10 AM Feb 05, 2019 | Team Udayavani |

ಮಂಡ್ಯ/ಮದ್ದೂರು: ಸುಮಲತಾ ರಾಜಕೀಯಕ್ಕೆ ಬಂದರೆ ಸ್ವಾಗತ ಮಾಡುತ್ತೇವೆ. ಆದರೆ, ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುವ ಕುರಿತಂತೆ ಯಾವುದೇ ಅಧಿಕೃತ ಮಾಹಿತಿ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಸ್ಪಷ್ಟಪಡಿಸಿದರು.

Advertisement

ಮೈಸೂರಿನ ಸುತ್ತೂರು ಮಠಕ್ಕೆ ತೆರಳುತ್ತಿದ್ದ ವೇಳೆ ಪಟ್ಟಣದ ಹೊರವಲಯದ ಶಿವಪುರದಲ್ಲಿ ಬ್ಲಾಕ್‌ ಕಾಂಗ್ರೆಸ್‌ ವತಿಯಿಂದ ಅಭಿನಂದನೆ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿ ಪಕ್ಷದಲ್ಲಿ ಸ್ಥಾನ ಹೊಂದಾಣಿಕೆಯೇ ಆಗಿಲ್ಲ. ಯಾರಿಗೆ ಯಾವ ಕ್ಷೇತ್ರವನ್ನು ಬಿಟ್ಟುಕೊಡಬೇಕೆಂಬ ಬಗ್ಗೆ ತೀರ್ಮಾನವಾಗಿಲ್ಲ. ಕ್ಷೇತ್ರಗಳು ನಿರ್ಧಾರವಾದ ಬಳಿಕವಷ್ಟೇ ಅಭ್ಯರ್ಥಿಗಳು ಯಾರು ಎಂಬ ಬಗ್ಗೆ ಅಂತಿಮಗೊಳಿಸಲಾಗುವುದು ಎಂದು ತಿಳಿಸಿದರು.

ಅಭ್ಯರ್ಥಿಗಳ ಆಯ್ಕೆ ಆಗಿಲ್ಲ: ಅಂಬರೀಶ್‌ ನಮ್ಮ ಪಕ್ಷದ ಹಿರಿಯ ನಾಯಕರಾಗಿದ್ದವರು. ಕೇಂದ್ರ, ರಾಜ್ಯ ಸಚಿವರಾಗಿ, ಶಾಸಕರಾಗಿ ಬಹಳಷ್ಟು ಕೆಲಸ ಮಾಡಿದ್ದಾರೆ. ಸುಮಲತಾ ಅವರು ರಾಜಕಾರಣ ಪ್ರವೇಶಿಸುವುದರಲ್ಲಿ ತಪ್ಪಿಲ್ಲ. ಅವರನ್ನು ಸ್ವಾಗತಿಸು ತ್ತೇನೆ. ಅಂಬಿ ಕುಟುಂಬಕ್ಕೆ ಪಕ್ಷದಿಂದ ಎಲ್ಲ ರೀತಿಯ ರಾಜಕೀಯ ಸಹಕಾರ ನೀಡುತ್ತೇವೆ.

ಸದಾಕಾಲ ನಾವು ಅವರ ಜೊತೆಗಿದ್ದೇವೆ. ಟಿಕೆಟ್ ಹಂಚಿಕೆ ವಿಚಾರವಾಗಿ ತೆಗೆದುಕೊಳ್ಳುವ ಹೆಜ್ಜೆಗಳನ್ನು ಈಗಲೇ ಹೇಳಲಾಗುವುದಿಲ್ಲ. ಏಕೆಂದರೆ, ಅಭ್ಯರ್ಥಿಗಳ ಆಯ್ಕೆ ಬಗ್ಗೆ ಇನ್ನೂ ತೀರ್ಮಾನವಾಗಿಲ್ಲ. ಫೆ.10ರ ಬಳಿಕ ಸೀಟುಗಳ ಹಂಚಿಕೆ ಕುರಿತು ಮೈತ್ರಿ ಪಕ್ಷಗಳ ನಡುವೆ ಚರ್ಚೆ ನಡೆಯಲಿದ್ದು, ಕ್ಷೇತ್ರಗಳ ಹಂಚಿಕೆ ಆಧರಿಸಿ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗುವುದು.

ಎರಡೂ ಪಕ್ಷಗಳ ಗುರಿ: ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಮುಂದುವರಿಯಲಿದೆ. ಒಟ್ಟಿಗೆ ಚುನಾವಣೆ ಎದುರಿಸುವ ಬಗ್ಗೆ ಈಗಾಗಲೇ ನಿರ್ಧಾರವಾಗಿದೆ. ಬಿಜೆಪಿಗೆ ಕಡಿಮೆ ಸ್ಥಾನ ಬರುವಂತೆ ಮಾಡುವುದು ಎರಡೂ ಪಕ್ಷಗಳ ಗುರಿಯಾಗಿದೆ ಎಂದು ಹೇಳಿದರು.

Advertisement

ನಿಖೀಲ್‌ ಕುಮಾರಸ್ವಾಮಿ ಸ್ಪರ್ಧೆಗೆ ಬೇಡಿಕೆ ಇಟ್ಟಿರುವುದರಲ್ಲಿ ಜೆಡಿಎಸ್‌ ತಪ್ಪಿಲ್ಲ. ಕಾಂಗ್ರೆಸ್‌ನೊಳಗೆ ಸುಮಲತಾ ಸ್ಪರ್ಧೆ ಬೇಡಿಕೆ ಕೇಳಿಬಂದಿರುವಂತೆ ಆ ಪಕ್ಷದ ಕಾರ್ಯಕರ್ತರು ನಿಖೀಲ್‌ಗೆ ಅವಕಾಶ ನೀಡುವಂತೆ ಒತ್ತಡ ಹೇರುತ್ತಿದ್ದಾರೆ. ಅಂತಿಮವಾಗಿ ಹೈಕಮಾಂಡ್‌ ನಾಯಕರು ತೀರ್ಮಾನ ಮಾಡಲಿದ್ದಾರೆ ಎಂದರು.

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಸಿ.ಡಿ. ಗಂಗಾಧರ್‌, ಪ್ರಧಾನ ಕಾರ್ಯದರ್ಶಿ ಸಿ.ಎಂ. ದ್ಯಾವಪ್ಪ, ಕಾರ್ಯದರ್ಶಿ ಅಜ್ಜಹಳ್ಳಿ ರಾಮಕೃಷ್ಣ, ಖಜಾಂಚಿ ಅಶೋಕ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕದಲೂರು ರಾಮಕೃಷ್ಣ, ಕಿಸಾನ್‌ ಘಟಕದ ಜಿಲ್ಲಾಧ್ಯಕ್ಷ ದೇಶಹಳ್ಳಿ ಮೋಹನ್‌ಕುಮಾರ್‌, ಜಿಪಂ ಸದಸ್ಯ ರಾಜೀವ್‌, ಮುಖಂಡರಾದ ಬೊಮ್ಮೇಗೌಡ, ಎಂ.ಪಿ.ಅಮರ್‌ಬಾಬು ಇತರರಿದ್ದರು.

ಕಾರ್ಯಕರ್ತರಿಗೆ ಸಮಾಧಾನ: ಹಾಸನ ಮತ್ತು ಮಂಡ್ಯ ಜಿಲ್ಲೆಯಲ್ಲಿ ಮೈತ್ರಿಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಅಲ್ಲಿನ ಕಾರ್ಯಕರ್ತರಿಗೆ ನೋವಾಗಿದೆ. ಆ ವಿಷಯ ನಮ್ಮ ಗಮನಕ್ಕೂ ಬಂದಿದೆ. ರಾಹುಲ್‌ಗಾಂಧಿ ಅವರನ್ನು ದೇಶದ ಪ್ರಧಾನಿ ಮಾಡುವ ಆಶಯ ನಮ್ಮದಾಗಿದೆ. ಅದಕ್ಕಾಗಿ ಲೋಕಸಭಾ ಚುನಾವಣೆಯಲ್ಲಿ ಸಹಕಾರ ನೀಡುವಂತೆ ಕಾರ್ಯಕರ್ತರಿಗೆ ಮನವಿ ಮಾಡಲಾಗಿದೆ. ಅವರನ್ನು ಸಮಾಧಾನಪಡಿಸುವ ಕೆಲಸ ಮಾಡಲಿದ್ದೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next