Advertisement

ನೂತನ ಶಾಸಕರಿಗೆ ಸಮಸ್ಯೆಗಳ ಸ್ವಾಗತ

04:25 PM May 27, 2018 | Team Udayavani |

ಲಿಂಗಸುಗೂರು: ಲಿಂಗಸುಗೂರು ಮತಕ್ಷೇತ್ರದಲ್ಲಿ 25 ವರ್ಷಗಳ ನಂತರ ಕಾಂಗ್ರೆಸ್‌ ಗೆಲುವು ದೊರಕಿಸಿಕೊಟ್ಟು ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದ ಡಿ.ಎಸ್‌.ಹೂಲಗೇರಿ ಅವರಿಗೆ ಕ್ಷೇತ್ರದಲ್ಲಿ ಹಳೆಯ ಸಮಸ್ಯೆಗಳೇ ಸವಾಲಾಗಿವೆ. ಕಳೆದ 25 ವರ್ಷಗಳಿಂದ ಕ್ಷೇತ್ರದಲ್ಲಿ ಕಾಂಗ್ರೆಸ್‌ ಸೋಲುತ್ತ ಬಂದಿತ್ತು. ಈ ಬಾರಿ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್‌ ಪಕ್ಷದ ಡಿ.ಎಸ್‌.ಹೂಲಗೇರಿ ಗೆದ್ದು ಶಾಸಕರಾಗಿ ಮೊದಲ ಬಾರಿಗೆ ವಿಧಾನಸಭೆ ಮೆಟ್ಟಿಲು
ಹತ್ತಿದ್ದಾರೆ. ಶಾಸಕರು ಕ್ಷೇತ್ರದ ಅಭಿವೃದ್ಧಿ ಜೊತೆಗೆ ಹಿಂದಿನ ಸಮಸ್ಯೆಗಳಿಗೆ ಪರಿಹಾರ ಒದಗಿಸಲೂ ಆದ್ಯತೆ ನೀಡಬೇಕಿದೆ.

Advertisement

ನಾಲೆಗಳು: ನಾರಾಯಣಪುರ ಬಲದಂಡೆ ನಾಲೆಗಳ ಆಧುನೀಕರಣಕ್ಕೆ ಕಳೆದ ಸರಕಾರದ ಬಜೆಟ್‌ನಲ್ಲಿ ಅನುದಾನ ಮೀಸಲಿಡಲಾಗಿದೆ. ಆ ಕಾಮಗಾರಿಯನ್ನು ಶೀಘ್ರವೇ ಪ್ರಾರಂಭಿಸಬೇಕಿದೆ. 

ಇದಲ್ಲದೇ ರಾಂಪುರ ಏತ ನೀರಾವರಿ ಯೋಜನೆ ನಾಲೆಗಳ ನಿರ್ವಹಣೆ ಇಲ್ಲದೇ ದುಸ್ಥಿತಿಯಲ್ಲಿದ್ದು ಆಧುನೀಕರಣ ಕಾರ್ಯ ಕೈಗೊಳ್ಳುವ ಅಗತ್ಯವಿದೆ. ಈ ಎರಡು ಯೋಜನೆಯ ನಾಲೆಗಳಿಗೆ ನೀರು ಹರಿಸುವ ಗೊಂದಲದಿಂದ ಅಚ್ಚುಕಟ್ಟು ಭಾಗದ ರೈತರು ಪ್ರತಿವರ್ಷ ಬೆಳೆ ನಷ್ಟ ಅನುಭವಿಸುತ್ತಿದ್ದು ಇದನ್ನು ತಪ್ಪಿಸಿ ರೈತರ ಬೇಡಿಕೆಗೆ ತಕ್ಕಂತೆ ನೀರು ಹರಿಸುವ ಜವಾಬ್ದಾರಿ ಹೊರಬೇಕಾಗಿದೆ. ಯರಜಂತಿ ಗ್ರಾಮದ ಬಳಿ 11 ಕೋಟಿ ರೂ. ವೆಚ್ಚದಲ್ಲಿ ಉಪನಾಲೆ ನಿರ್ಮಿಸಿ ಐದಾರು ವರ್ಷ ಕಳೆದರೂ ರೈತರ ಭೂಮಿಗೆ ಇನ್ನೂ ನೀರು ಹರಿಯುತ್ತಿಲ್ಲ, ಜಲದುರ್ಗ ಏತ ನೀರಾವರಿ ಪುನಶ್ಚೇತನಗೊಳಿಸಬೇಕಾಗಿದೆ.

 ದೊಡ್ಡಿಗಳು: ತಾಲೂಕಿನ ಗುರುಗುಂಟಾ, ದೇವರಭೂಪುರ ಹಾಗೂ ಪೈದೊಡ್ಡಿ ಗ್ರಾಪಂ ವ್ಯಾಪ್ತಿಯಲ್ಲಿ 20ಕ್ಕೂ ಹೆಚ್ಚು ದೂಡ್ಡಿಗಳು ಸರಕಾರದ ಸೌಲಭ್ಯಗಳಿಂದ ವಂಚಿತಗೊಂಡಿವೆ. ಇಲ್ಲಿ ನೂರಾರು ಕುಟುಂಬಗಳು ವಾಸ ಮಾಡುತ್ತಿವೆ.
ಗುಡಿಸಲು ಕಟ್ಟಿಕೊಂಡು ಕೃಷಿಯನ್ನೇ ಮೂಲ ಕಸುಬಾಗಿಸಿಕೊಂಡು ಜೀವನ ನಡೆಸುತ್ತಿದ್ದಾರೆ.

ಶಿಕ್ಷಣದಿಂದ ವಂಚಿತರಾಗಿದ್ದಾರೆ. ಕುಡಿಯುವ ನೀರಿನ ಸಮಸ್ಯೆಯಿಂದಾಗಿ ಹಳ್ಳದಲ್ಲಿ ನಿಂತ ನೀರನ್ನೇ ಕುಡಿಯಬೇಕಾದ ಅನಿವಾರ್ಯತೆ ಎದುರಿಸುತ್ತಿದ್ದಾರೆ ಇವರ ಬದುಕಿಗೆ ಸ್ಪಂದನೆ ಅವಶ್ಯಕವಾಗಿದೆ. 

Advertisement

ಕುಡಿಯುವ ನೀರು: ತಾಲೂಕಿನ ಅನೇಕ ಗ್ರಾಮಗಳಲ್ಲಿ ವಿಷಕಾರಿ ಫ್ಲೋರೈಡ್‌ ಅಂಶವಿರುವ ನೀರನ್ನೇ ಜನ ಕುಡಿಯುತ್ತಿದ್ದಾರೆ. ಎಲುವು, ಕೀಲು ನೋವು ಮುಂತಾದ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಈ ಜನರ ಆರೋಗ್ಯದ ದೃಷ್ಟಿಯಿಂದ ಶುದ್ಧ ನೀರು ಪೂರೈಸುವುದು ಅಗತ್ಯವಾಗಿದೆ. ಕಡ್ಡೋಣಿ, ವೀರಾಪುರ, ಪೈದೊಡ್ಡಿ, ಕೋಮನೂರು, ಬೊಮ್ಮನಾಳ, ಹಿರೇಲೆಕ್ಕಿಹಾಳ, ಹುನಕುಂಟಿ, ಯಲಗಟ್ಟ ಸೇರಿದಂತೆ ಇನ್ನೂ ಅನೇಕ ಗ್ರಾಮಗಳಲ್ಲಿ ಬೇಸಿಗೆ ಸಂದರ್ಭದಲ್ಲಿ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. 

ಈ ಗ್ರಾಮಗಳಿಗೆ ಶಾಶ್ವತ ಕುಡಿಯುವ ನೀರು ಪೂರೈಕೆ ಯೋಜನೆಗಳನ್ನು ಜಾರಿಗೆ ತಂದು ಗ್ರಾಮಸ್ಥರ ನೀರಿನ ಬವಣೆ ನೀಗಿಸಬೇಕಾಗಿದೆ. 

ಆಸರೆ: ನೆರೆ ಬಂದ ಸಂದರ್ಭದಲ್ಲಿ ತಾಲೂಕಿನ ಸುಣ್ಣಕಲ್‌ ಹಾಗೂ ಚಿಕ್ಕ ಉಪ್ಪೇರಿ ಗ್ರಾಮದಲ್ಲಿ ನಿರಾಶ್ರಿತರಿಗಾಗಿ ಮನೆಗಳ ನಿರ್ಮಾಣ ಕಾರ್ಯ ಕಳೆದ ಮೂರು ವರ್ಷದಿಂದ ನಡೆಯುತ್ತಿದೆ, ಸುಣ್ಣಕಲ್‌ ಗ್ರಾಮದಲ್ಲಿ ಮನೆಗಳ ನಿರ್ಮಾಣ ಅರೆಬರೆಯಾಗಿದೆ.

ಇನ್ನು ಚಿಕ್ಕ ಉಪ್ಪೇರಿ ಗ್ರಾಮದಲ್ಲಿನ ಮನೆಗಳ ಸ್ಥಿತಿ ಅಯೋಮಯವಾಗಿದೆ. ಸಂತ್ರಸ್ತರು ಇಂದು ನಾಳೆ ತಮಗೆ ಮನೆ ಹಂಚಿಕೆಯಾಗಲಿವೆ ಎಂದು ಚಾತಕಪಕ್ಷಿಯಂತೆ ಕಾಯುತ್ತಿದ್ದಾರೆ. ನೀರಲಕೇರಾ ಗ್ರಾಮದಲ್ಲಿ ಎನ್‌ಆರ್‌ಬಿಸಿ ನಾಲೆಯ ಬಸೀ ನೀರಿನ ಸಮಸ್ಯೆಯಿಂದಾಗಿ ಗ್ರಾಮದ ನೂರಾರು ಮನೆಗಳು ಬೀಳುವ ಹಂತಕ್ಕೆ ತಲುಪಿವೆ. ಈ ಬಾಧಿತ ಮನೆಗಳ ಜನರಿಗೆ ಹೊಸ ಮನೆಗಳನ್ನು ನಿರ್ಮಿಸಿಕೊಡಬೇಕೆಂದು ಗ್ರಾಮಸ್ಥರ ಬಹುವರ್ಷದ ಬೇಡಿಕೆಯಾಗಿದೆ.

2009ರಲ್ಲಿ ಆರಂಭಿಸಲಾದ ತಾಲೂಕು ಕ್ರೀಡಾಂಗಣ ಕಾಮಗಾರಿ ಇನ್ನೂ ಮುಗಿದಿಲ್ಲ. 2010ರಲ್ಲಿ ಆರಂಭಿಸಿದ ಮಿನಿವಿಧಾನಸೌದ ಕಾಮಗಾರಿ ಕೂಡ ಅಪೂರ್ಣವಾಗಿದೆ. ನಾಗರಹಾಳ ಗ್ರಾಮದ ಶಿಕ್ಷಕರ ವಸತಿ ಗೃಹ, ತರಕಾರಿ ಮಾರುಕಟ್ಟೆ, ಶಾಸಕರ ಭವನದ ಕಾಮಗಾರಿ ಅರ್ಧಕ್ಕೆ ನಿಂತಿದೆ. ಲಿಂಗಸುಗೂರು ಪಟ್ಟಣದ ಕೆರೆ ತಟದಲ್ಲಿ ನಿರ್ಮಿಸಿದ ಉದ್ಯಾನ ಎರಡೂಮೂರು ವರ್ಷಗಳಿಂದ ಅಪೂರ್ಣಗೊಂಡು ಪಾಳು ಬಿದ್ದಿದೆ. ಪಟ್ಟಣದಲ್ಲಿ ಐತಿಹಾಸಿಕ ಕರಡಕಲ್‌ ಕೆರೆ ಅಭಿವೃದ್ಧಿ, ಲಿಂಗಸುಗೂರು ಹಾಗೂ ಮುದಗಲ್‌ ಪಟ್ಟಣಕ್ಕೆ 24-7 ಕುಡಿಯುವ ನೀರಿನ ಸೌಲಭ್ಯ, ಮುದಗಲ್‌, ಜಲದುರ್ಗ ಸೇರಿ ಐತಿಹಾಸಿಕ ಕೋಟೆ, ಸ್ಮಾರಕಗಳ ಅಭಿವೃದ್ಧಿ ಆಗಬೇಕಿದೆ. ಸರಕಾರದಿಂದ ಬರುವ ಅನುದಾನವನ್ನು ಅಭಿವೃದ್ಧಿ ಕಾಮಗಾರಿಗಳಿಗೆ ಬಳಕೆ ಮಾಡುವ ಜೊತೆಗೆ ತಾಲೂಕಿಗೆ ವಿಶೇಷವಾದ ಯೋಜನೆಗಳನ್ನು ಜಾರಿಗೆ ತರುವುದು ಮಹತ್ವದ ಕೆಲಸವಾಗಿದೆ. ಇದನ್ನು ಕ್ಷೇತ್ರದ ಜನತೆಯ ನಿರೀಕ್ಷೆಯಾಗಿದೆ. ಶಾಸಕ ಹೂಲಗೇರಿ ಎಷ್ಟರ ಮಟ್ಟಿಗೆ ಸಾಕಾರಗೊಳಿಸುತ್ತಾರೋ ಕಾದು ನೋಡಬೇಕಿದೆ.

ಲಿಂಗಸುಗೂರು ಕ್ಷೇತ್ರದಲ್ಲಿನ ಜನಸಾಮಾನ್ಯರ ಸಮಸ್ಯೆಗೆ ಸ್ಪಂದಿಸುವೆ. ಕ್ಷೇತ್ರದಲ್ಲಿನ ಸಮಸ್ಯೆ ಮತ್ತು ನನೆಗುದಿಗೆ ಬಿದ್ದ ಅಭಿವೃದ್ಧಿ ಕಾಮಗಾರಿಗಳ ಮಾಹಿತಿ ಪಡೆದು ಹಂತ-ಹಂತವಾಗಿ ಪರಿಹರಿಸಲು ಶ್ರಮಿಸುವೆ.
 ಡಿ.ಎಸ್‌. ಹೂಲಗೇರಿ, ಶಾಸಕರು.

„ಶಿವರಾಜ ಕೆಂಭಾವಿ

Advertisement

Udayavani is now on Telegram. Click here to join our channel and stay updated with the latest news.

Next