ಬೆಂಗಳೂರು: ಸರ್ಕಾರಿ ಶಾಲೆಗಳಲ್ಲಿ ಒಂದನೇ ತರಗತಿಯಿಂದ ಇಂಗ್ಲಿಷ್ ಮಾಧ್ಯಮ ಆರಂಭಿಸುವ ಸರ್ಕಾರದ ತೀರ್ಮಾನವನ್ನು ಪ್ರಗತಿಪರ ಸಂಘಟನೆಗಳ ಒಕ್ಕೂಟ ಸ್ವಾಗತಿಸಿದೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಲೇಖಕ ನಟರಾಜ್ ಹುಳಿಯಾರ್ ಮಾತನಾಡಿ, ಈಗಾಗಲೇ ರಾಜ್ಯದ ಅರ್ಧ ಭಾಗಕ್ಕಿಂತ ಹೆಚ್ಚು ಮಕ್ಕಳು ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಯುತ್ತಿದ್ದಾರೆ. ಆರ್ಥಿಕವಾಗಿ ಹಿಂದುಳಿದವರು ಹಾಗೂ ಹಳ್ಳಿಗಾಡಿನ ಮಕ್ಕಳು ಕನ್ನಡ ಮಾಧ್ಯಮದಲ್ಲಿ ಕಲಿಯುತ್ತಿದ್ದಾರೆ.
ಇದು ಶೈಕ್ಷಣಿಕ ವಲಯದಲ್ಲಿ ಅಸಮತೋಲನ ಉಂಟು ಮಾಡುತ್ತಿದೆ. ಈ ಅಸಮತೋಲನ ನಿವಾರಿಸಲು ಸರ್ಕಾರ ಸರ್ಕಾರಿ ಶಾಲೆಗಳಲ್ಲಿ ಕನ್ನಡ ಪರಿಸರಕ್ಕೆ ಪೂರಕವಾಗುವಂತೆ ಇಂಗ್ಲಿಷ್ ಮಾಧ್ಯಮ ಜಾರಿಗೊಳಿಸಲು ಮುಂದಾಗಿರುವುದು ಸೂಕ್ತವಾಗಿದೆ ಎಂದು ಹೇಳಿದರು.
ಮೊದಲ ಹಂತವಾಗಿ ಪ್ರತಿ ಹೋಬಳಿಗೆ ಒಂದರಂತೆ ಸರ್ಕಾರಿ ಇಂಗ್ಲಿಷ್ ಮಾಧ್ಯಮದ ಶಾಲೆಗಳನ್ನು ಆರಂಭಿಸಬೇಕು. ಈಗಾಗಲೇ ಆರಂಭಿಸಿರುವ ಹಿರಿಯ ಪ್ರಾಥಮಿಕ ಮಟ್ಟದ ಕುವೆಂಪು ಮಾದರಿ ಶಾಲೆಗಳ ಸಂಖ್ಯೆಯನ್ನು ಹೆಚ್ಚಿಸಬೇಕು. ಇಂಗ್ಲಿಷ್ ಮಾಧ್ಯಮದ ಜಾರಿಯಿಂದ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೆಳೆಯಬಹುದು ಎಂದು ತಿಳಿಸಿದರು.
ಸರ್ಕಾರಿ ಶಾಲೆಗಳಲ್ಲಿ ಈಗ ಕಲಿಸುತ್ತಿರುವ ಇಂಗ್ಲಿಷ್ ಭಾಷಾ ಕಲಿಕೆಯ ಮಟ್ಟವನ್ನು ಇನ್ನಷ್ಟು ಕ್ರಮಬದ್ಧಗೊಳಿಸಿ ಉತ್ತಮಪಡಿಸಬೇಕಿದೆ. ಆ ಕಾರಣಕ್ಕಾಗಿ ಕನ್ನಡ ಹಾಗೂ ಇಂಗ್ಲಿಷ್ ಎರಡು ಭಾಷೆಗಳನ್ನು ಸಮರ್ಥವಾಗಿ ಬೋಧಿಸಬಲ್ಲ ಶಿಕ್ಷಕ ಶಿಕ್ಷಕಿಯರ ತರಬೇತಿಗೆ ಪ್ರತಿವರ್ಷ ಇನ್ನಷ್ಟು ಹೆಚ್ಚಿನ ಅವಧಿ ಮೀಸಲಿಡಬೇಕಿದೆ ಎಂದು ಹೇಳಿದರು.
ಆರ್‌ಟಿಇ ಕಾಯ್ದೆಯ ಪ್ರಕಾರ ಖಾಸಗಿ ಶಾಲೆಗಳಿಗೆ ವೆಚ್ಚ ಮಾಡುತ್ತಿರುವ ಅನುದಾನಕ್ಕೆ ಸಮಾನವಾದ ಅನುದಾನವನ್ನು ಸರ್ಕಾರಿ ಶಾಲೆಗಳ ಕಟ್ಟಡ, ಪೀಠೊಪಕರಣ ಕಲಿಕೆಯಲ್ಲಿ ದೃಶ್ಯ- ಶ್ರವಣ ಮಾಧ್ಯಮಗಳ ಹೆಚ್ಚಿನ ಬಳಕೆಗಾಗಿ ಮೀಸಲಿಡಬೇಕು ಎಂದರು. ದಲಿತ ಸಂಘ ಸಮಿತಿಯ ಸಂಚಾಲಕ ಮಾವಳ್ಳಿ ಶಂಕರ್, ಪ್ರಜಾ ಪರಿವರ್ತನ ವೇದಿಕೆಯ ಬಿ.ಗೋಪಾಲ್, ಸಮತಾ ಸೈನಿಕ ದಳದ ಚನ್ನಕೃಷ್ಣಪ್ಪ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.