ಹುಬ್ಬಳ್ಳಿ: ಮಾಜಿ ಸಚಿವ ಡಿ.ಕೆ. ಶಿವಕುಮಾರ ಅವರಿಗೆ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಬೃಹತ್ ಸೇಬು ಹಣ್ಣಿನ ಹಾಗೂ ಹೂವಿನ ಹಾರ ಹಾಕಿ ಅದ್ಧೂರಿ ಸ್ವಾಗತ ಕೋರಿದರು.
ಗುರುವಾರ ಇಲ್ಲಿನ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಶಿವಕುಮಾರ ಅವರನ್ನು ನೂರಾರು ಕಾಂಗ್ರೆಸ್ ಕಾರ್ಯಕರ್ತರು ಸ್ವಾಗತಿಸಿದರು. ನಂತರ ತೆರೆದ ವಾಹನದಲ್ಲಿ ಗೋಕುಲ ಗಾರ್ಡನ್ ವರೆಗೂ ಕರೆತರಲಾಯಿತು. ವಿಮಾನ ನಿಲ್ದಾಣ ಪ್ರವೇಶ ದ್ವಾರದಲ್ಲಿ ಸುಮಾರು 20 ಅಡಿ ಎತ್ತರದ ಸೇವಂತಿಗೆ ಹಾರವನ್ನು ಕ್ರೇನ್ ಮೂಲಕ ಹಾಕಿ ಸ್ವಾಗತ ಕೋರಲಾಯಿತು. ಇನ್ನೂ ನೆಹರು ನಗರ ನೀರಿನ ಟ್ಯಾಂಕ್ ಬಳಿ ಬೃಹತ್ ಗುಲಾಬಿ ಹೂವಿನ ಹಾರ ಹಾಕಿದರು.
ಮಂಜುನಾಥ ನಗರ ವೃತ್ತದಲ್ಲಿ ಸೇಬು ಹಣ್ಣಿನ ಹಾರ ಹಾಕಿ ಸ್ವಾಗತ ಕೋರಿದ್ದು ವಿಶೇಷವಾಗಿತ್ತು. ಸೇಬು ಹಣ್ಣಿಗಾಗಿ ಹರಸಾಹಸ: ಸೇಬು ಹಣ್ಣಿನ ಹಾರ ಹಾಕುತ್ತಿದ್ದಂತೆ ಡಿ.ಕೆ. ಶಿವಕುಮಾರ ಹಾರದಿಂದ ಒಂದು ಹಣ್ಣು ಕಿತ್ತು ಸವಿದರು. ಮುಖಂಡರಿದ್ದ ವಾಹನ ಮುಂದೆ ಹೋಗುತ್ತಿದ್ದಂತೆ ಕಾರ್ಯರ್ತರು ಹಾರದಿಂದ ಸೇಬು ಹಣ್ಣು ಕೀಳಲು ಮುಂದಾದರು. ಒಂದಿಷ್ಟು ಹಣ್ಣು ಕಾರ್ಯಕರ್ತರ ಪಾಲಾಗುತ್ತಿದ್ದಂತೆ ಎಚ್ಚೆತ್ತ ಕ್ರೇನ್ ಚಾಲಕ ಹಣ್ಣಿನ ಹಾರವನ್ನು ಮೇಲೆತ್ತಿದರು. ಇಷ್ಟಕ್ಕೂ ಬಿಡದ ಜನರು ಕೋಲು, ಕಟ್ಟಿಗೆ ಮೂಲಕ ಕೀಳುವ ವ್ಯರ್ಥ ಪ್ರಯತ್ನ ನಡೆಸಿದರು.
ಮಂಜುನಾಥ ನಗರ ವೃತ್ತದಲ್ಲಿ ಬೆಂಬಲಿಗರನ್ನುದ್ದೇಶಿಸಿ ಮಾತನಾಡಿದ ಡಿಕೆಶಿ, ನಾನು ಬಂಧನದಲ್ಲಿದ್ದಾಗ ಈ ಭಾಗದ ಜನರು ತೋರಿಸಿದ ಪ್ರೀತಿ, ಕಾಳಜಿ ದೊಡ್ಡದು. ನಿಮ್ಮ ಪ್ರೀತಿಯ ಮುಂದೆ ನನ್ನ ಅಧಿಕಾರ, ಆಸ್ತಿ ಎಲ್ಲವೂ ಗೌಣ. ನಿಮ್ಮೆಲ್ಲರ ಪ್ರಾರ್ಥನೆ, ಹೋರಾಟದಿಂದ ಮತ್ತೆ ನಿಮ್ಮ ಸೇವೆಗೆ ಬಂದಿದ್ದೇನೆ. ನಿಮ್ಮ ಸೇವೆ ಮಾಡುವ ಮೂಲಕ ಋಣ ತೀರಿಸುವುದಾಗಿ ಹೇಳಿದರು.
ಶಾಸಕ ಪ್ರಸಾದ ಅಬ್ಬಯ್ಯ, ವಿಧಾನಪರಿಷತ್ ಸದಸ್ಯ ಶ್ರೀನಿವಾಸ ಮಾನೆ, ಮುಖಂಡರಾದ ಅನಿಲಕುಮಾರ ಪಾಟೀಲ, ಅಲ್ತಾಫ್ ಹಳ್ಳೂರು, ಸತೀಶ ಮೆಹರವಾಡೆ ಇನ್ನಿತರರಿದ್ದರು. ಮೆರವಣಿಗೆ ಹಿನ್ನೆಲೆಯಲ್ಲಿ ಗೋಕುಲ ರಸ್ತೆಯ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಅದನ್ನು ಸರಿಪಡಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.