Advertisement
ಒಂದು ಸಣ್ಣ ಮೈ ಮರೆವು ಕೂಡ ಕೈಯೊಳಗಿರುವ ಎಂಥದ್ದೇ ಗೆಲುವನ್ನು ತೆಗೆದು ನೆಲಕ್ಕೆ ಎಸೆದುಬಿಡಬಲ್ಲದು! ಅದರಲ್ಲೂ ಇನ್ನೇನು ಜಯವೊಂದು ನಿಮಗೆ ದಕ್ಕೇ ಬಿಟ್ಟಿತು ಅಂತ ಕುಪ್ಪಳಿಸುವ ಹೊತ್ತಿಗೆ ಅದು ಇನ್ಯಾರದೋ ಕೊರಳಲ್ಲಿ ವಿಜೃಂಭಿಸುತ್ತದೆ. ಅನುಮಾನವೇ ಇಲ್ಲ, ನಿಮ್ಮಲ್ಲಿರುವ ಸಾಮರ್ಥ್ಯ, ಪೂರ್ಣ ಗೆಲುವನ್ನು ದಕ್ಕಿಸಿಕೊಡುವಂತದ್ದು. ಅದಕ್ಕೆಂದೇ ಹಗಲು ರಾತ್ರಿ ಲೀಟರುಗಟ್ಟಲೆ ಬೆವರನ್ನು ಆಟದ ಅಂಗಳದಲ್ಲಿ ಮಳೆಯಂತೆ ಸುರಿಸಿರುತ್ತೀರಿ. ಗೆಲ್ಲಲಿಕ್ಕೆಂದೇ ಚೆಂದದ ಪ್ಲಾನ್ ಮಾಡಿರುತ್ತೀರಿ. ಆತ್ಮವಿಶ್ವಾಸವು ಕೂಡ ಬೊಗಸೆ ತುಂಬಿರುತ್ತದೆ.
ಈ ಸ್ಪರ್ಧೆಯಲ್ಲಿ /ಈ ಆಟದಲ್ಲಿ ನೀವಲ್ಲದೆ ಇನ್ಯಾರೂ ಗೆಲ್ಲಲಾಗದು ಅಂತ ಕಂಡ ಕಂಡವರೆಲ್ಲ ಮಾತಾಡಿ ಕೊಂಡಿರುತ್ತಾರೆ. ಆದರೆ, ಕೊನೆಯ ಕ್ಷಣದಲ್ಲಿ ನೀವೇ ಮಾಡಿಕೊಳ್ಳುವ ಸಣ್ಣ ಎಡವಟ್ಟುಗಳು, ಮರೆವುಗಳು ಸೋಲನ್ನು ನಿಮ್ಮ ಒಡಲಿಗೆ ಹಾಕಿ ಹೋಗುತ್ತವೆ. ಎಲ್ಲರಿಗೂ ಕೂಡ ಅದರ ಅನುಭವವಾಗಿರುತ್ತವೆ. ಓದಿನಲ್ಲಿ ಅವರೇ ಮುಂದಿರುತ್ತಾರೆ. ಸಣ್ಣಪುಟ್ಟ ಪರೀಕ್ಷೆಗಳಲ್ಲಿ ಅವರದೇ ದೊಡ್ಡ ಅಂಕ. ತೀರಾ ಪೂರ್ವಸಿದ್ಧತಾ ಪರೀಕ್ಷೆಯಲ್ಲೂ ಯಾರೂ ಅವರ ಮಾರ್ಕ್ಸಿನ ಹತ್ತಿರ ಸುಳಿದಿರುವುದಿಲ್ಲ. ಆದರೆ, ಅಂತಿಮ ಪರೀಕ್ಷೆ ಫಲಿತಾಂಶ ಬರುತ್ತೆ ನೋಡಿ. ರ್‍ಯಾಂಕ್ ಬರಬಹುದು ಎಂದು ಹಲವರಿಂದ ಹೇಳಿಸಿಕೊಂಡವರು ಎರಡನೇ ಸ್ಥಾನದಲ್ಲಿರುತ್ತಾರೆ. ಎರಡನೇ ಅಥವಾ ಐದನೇ ರ್‍ಯಾಂಕ್ ಬರಬಹುದು ಎಂಬು ನಿರೀಕ್ಷೆ ಹುಟ್ಟಿಸಿದಾ, ಫಟಾಫಟ್ ಅಂತ ಮೊದಲ ಸ್ಥಾನಕ್ಕೆ ಹೋಗಿ ಕೂತಿರುತ್ತಾನೆ. ಇದಕ್ಕೆಲ್ಲ ಕಾರಣ ದೇವರು, ಲಕ್ಕು, ಇನ್‌ಪೂÉಯನ್ಸು, ಹಣ ಅಲ್ಲವೇ ಅಲ್ಲ. ಇಂಥದೊಂದು ಆಕಸ್ಮಿಕ ಫಲಿತಾಂಶಕ್ಕೆ ಕಾರಣ ಆಗುವುದು ಮೈಮರೆಸುವ ಆತ್ಮವಿಶ್ವಾಸ. ಯಾರು ತಾನೇ ನನ್ನನ್ನು ಸೋಲಿಸುತ್ತಾರೆ ಅನ್ನುವ ಗುಂಗಿನಲ್ಲಿ ಕೆಲವರು ಉಳಿದು ಹೋಗಿರುತ್ತಾರೆ. ಪ್ರಯತ್ನಗಳಿಗೆ ಒಂದು ವಿಶ್ರಾಂತಿ ಕೊಟ್ಟು ಮೈಚೆಲ್ಲಿರುತ್ತಾರೆ. ಆದರೆ, ಗುರಿಮುಟ್ಟುವವರೆಗೂ ಸತತ ಪ್ರಯತ್ನದಲ್ಲಿರುವವನು ಅದನ್ನು ಕಬಳಿಸಿಕೊಂಡಿರುತ್ತಾನೆ.
Related Articles
Advertisement
ಸುಮ್ಮನೆ ನೀವು ಯೂಟ್ಯೂಬ್‌ನಲ್ಲಿ ಹೋಗಿ ‘Never celebrate too early’ ಅಂತ ಟೈಪಿಸಿ. ಆಗ ತೆರೆದುಕೊಳ್ಳುವ ವೀಡಿಯೊಗಳನ್ನು ನೋಡಿ. ಗೆಲುವು ಇನ್ನೇನು ಕೈಹಿಡಿಯಿತು ಅನ್ನುವ ಹೊತ್ತಿನಲ್ಲಿ ಮರೆವಿನಿಂದ, ಎಡವಟ್ಟಿನಿಂದ ಗೆಲುವೊಂದು ಹೇಗೆ ಕೈಬಿಟ್ಟು ಹೋಗುತ್ತದೆ ಎಂಬುದಕ್ಕೆ ಸಾಕಷ್ಟು ನೈಜ ಉದಾರಣೆಗಳು ನಿಮಗೆ ಅಲ್ಲಿ ನೋಡಲು ಸಿಗುತ್ತವೆ. ಬರುವ ಬಾಲ್ ಅನ್ನು ತಡೆದು ಇನ್ನೇನು ಬಾಲ್ ಬರುವುದಿಲ್ಲ ಬಿಡು ಅಂದುಕೊಂಡು ಗೋಲ್ ಕೀಪರ್ ಸಂಭ್ರಮಿಸಿಕೊಂಡು ಓಡುವಾಗ ಕೆಳಗೆಬಿದ್ದ ಬಾಲ್ ಗೋಲ್ ಚೇಂಬರಿನೊಳಗೆ ನಿಧಾನಕ್ಕೆ ನುಗ್ಗಿ ಗೋಲ್ ಆಗುತ್ತದೆ. ಓಟದಲ್ಲಿ ಇನ್ನೇನು ಗೆಲುವಿನ ಗೆರೆ ಮುಟ್ಟಿದೆ ಅನ್ನುವ ಸಂಭ್ರಮದಲ್ಲಿ, ಗುರಿ ತಲುಪುವ ಮೊದಲೇ ಸಂಭ್ರಮಿಸಲು ಮುಂದಾದಾಗ ಹಿಂದೆ ಇದ್ದವನು ಮಿಂಚಿನಂತೆ, ಗುರಿಯ ಗೆರೆ ದಾಟಿ ಓಡುತ್ತಾನೆ. ಇಂಥವೇ ಅದೆಷ್ಟೋ ಉದಾರಣೆಗಳು! ಗೆಲುವಿಗಿಂತ ಮುಂಚೆ ಸಂಭ್ರಮಿಸುವುದು ಕೇವಲ ಆಟಕ್ಕೆ ಅಷ್ಟೇ ಅನ್ವಯವಾಗುವುದಿಲ್ಲ. ಬಹಳ ಸಾರಿ ಅದು ಬದುಕಿಗೂ ಬೇಕಾಗುತ್ತದೆ.
ಪ್ರಯತ್ನಗಳು ನಿರಂತರವಾಗಿರಲಿ..ಹೌದು, ಹಾಕುವ ಪ್ರಯತ್ನಗಳು ನಿರಂತರವಾಗಿರಲಿ. ಯಾವುದೇ ರಾಜಿ ಇಲ್ಲದೆ ನೂರಕ್ಕೆ ನೂರರಷ್ಟು ಶ್ರಮವಿರಲಿ. ವಿಶ್ರಾಂತಿ, ಸಂಭ್ರಮಗಳು ಮಾಡುವ ಕೆಲಸದ, ಆಟದ ಗುರಿಯ ಮಧ್ಯೆಮಧ್ಯೆ ಅನುಭವಿಸುವಂಥದ್ದಲ್ಲ. ಅದೇನಿದ್ದರೂ ಎಲ್ಲದರ ಕೊನೆಯಲ್ಲಿರಬೇಕು. ಗೆದ್ದಮೇಲೆ, ಗುರಿ ತಲುಪಿದ ಮೇಲೆ ಒಂದಷ್ಟು ಹೊತ್ತು ಸಂಭ್ರಮಿಸಿ, ನಿಮಗೆ ಬೇಕಾದಷ್ಟು ವಿಶ್ರಾಂತಿ ಪಡೆದುಕೊಂಡು ಮತ್ತೂಂದು ಗೆಲುವಿಗೆ ಅಣಿಯಾಗಬೇಕು. ಒಂದು, ಪರೀಕ್ಷೆಯನ್ನೋ, ಸ್ಪರ್ಧೆಯನ್ನೋ ಗೆದ್ದು, ಇಷ್ಟೇ ಸಾಕು ಅಂತ ಮಕಾಡೆ ಮಲಗಿಬಿಟ್ಟರೆ, ನಿಮ್ಮನ್ನು ಜಗತ್ತು ಬಹುಬೇಗ ಮರೆತು ಮುಂದೆ ಹೋಗುತ್ತದೆ. ಮತ್ಯಾರೊ ಸತತ ಗೆಲುವುಗಳಿಗೆ ಕಾದು ಕೂತವನನ್ನು ಜಗತ್ತು ತಬ್ಬಿಕೊಳ್ಳುತ್ತದೆ, ಕೊಂಡಾಡುತ್ತದೆ. ಯಶಸ್ಸಿನ ಬೆನ್ನು ಹತ್ತಿದ ಮೇಲೆ ಮೈಮರೆವು, ಸೋಮಾರಿತನ ಅನ್ನುವುದು ನಿಮ್ಮ ಆಜುಬಾಜಿನಲ್ಲೂ ಸುಳಿಯಬಾರದು. ಅದರ ಕಡೆ ಒಂದೇ ಒಂದು ಸಣ್ಣ ಸಲುಗೆ ಕೊಟ್ಟರೂ ಅದು ನಿಮ್ಮನ್ನು ಆಕ್ರಮಿಸಿಕೊಂಡು ಬಿಡುತ್ತದೆ. ನಿಮ್ಮ ಅಷ್ಟೂ ದಿನದ ಶ್ರಮವನ್ನು, ಪ್ರಯತ್ನಗಳನ್ನು ಹಾಳುಗೆಡವುತ್ತದೆ. ಆಮೆಗೆ ಹೋಲಿಸಿದರೆ ಅದ್ಭುತ ಓಟಗಾರನಂತಿದ್ದ ಮೊಲವು ಸೋತು ಸುಣ್ಣವಾಗಿದ್ದು ಇಂತಹ ಎಡವಟ್ಟಿನ ಕಾರಣಗಳಿಂದಲೇ. ಆಮೆ ಗೆದ್ದಿದ್ದು ತನ್ನ ಪ್ರಯತ್ನವನ್ನು ಗೆಲ್ಲುವವರೆಗೂ ಜಾರಿಯಲ್ಲಿಟ್ಟಿದ್ದಕ್ಕೆ ಮಾತ್ರ. ನೋಡಿ, ಗೆಲುವನ್ನು ದಕ್ಕಿಸಿಕೊಳ್ಳುವ ಮೊದಲೇ ಸಂಭ್ರಮಿಸಲು ಕೂತರೆ ಎಂದೂ ಕೂಡ ನಿಮಗೊಂದು ಜಯ ದಕ್ಕುವುದಿಲ್ಲ. ನೀವು-ಆಮೆಯಾ? ಮೊಲವಾ? ನೀವೇ ನಿರ್ಧರಿಸಿಕೊಳ್ಳಿ. ಸದಾಶಿವ್ ಸೊರಟೂರು