Advertisement

ತವರಿಗೆ ಸುಸ್ವಾಗತ; ಏರ್‌ಲಿಫ್ಟ್ 2,500ಕ್ಕೂ ಅಧಿಕ ಮಂದಿ ಇಂದು ತಾಯ್ನಾಡಿಗೆ

08:28 AM May 08, 2020 | Sriram |

ಹೈದರಾಬಾದ್‌/ ಕೊಚ್ಚಿ/ ಹೊಸದಿಲ್ಲಿ: ವಿದೇಶದಿಂದ ಆಗಮಿಸಲಿರುವ 2,500ಕ್ಕೂ ಅಧಿಕ ಮನೆಮಕ್ಕಳನ್ನು ಸ್ವದೇಶವು ಗುರುವಾರ ಸ್ವಾಗತಿಸಲಿದೆ. ವಿಶ್ವದ ಅತಿದೊಡ್ಡ ಏರ್‌ಲಿಫ್ಟ್ ಗೆ ಭಾರತ ಭಾಷ್ಯ ಬರೆಯಲಿದ್ದು, ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಸಕಲ ವ್ಯವಸ್ಥೆ ಸಂಪೂರ್ಣವಾಗಿದೆ.

Advertisement

ಮುತ್ತಿನ ನಗರಿಗೆ 2,350 ಮಂದಿ
ಆರು ದೇಶಗಳಿಂದ ಬರುವ ಏಳು ವಿಶೇಷ ವಿಮಾನಗಳು ಹೈದರಾಬಾದ್‌ ಏರ್‌ಪೋರ್ಟ್‌ನಲ್ಲಿ ಇಳಿಯಲಿದ್ದು, 2,350 ಜನರ ಸ್ವಾಗತಕ್ಕೆ ವ್ಯವಸ್ಥೆಯಾಗಿದೆ. ಹೈದರಾಬಾದಿನ ಹೊಟೇಲ್‌ಗ‌ಳಲ್ಲಿ ವಿವಿಧ ಶ್ರೇಣಿಯ ಪ್ರಯಾಣಿಕರಿಗೆ ಪ್ರತ್ಯೇಕ ಬಜೆಟ್‌ಗಳಲ್ಲಿ 14 ದಿನಗಳ ಕ್ವಾರಂಟೈನ್‌ಗೆ ಅನುವು ಮಾಡಿಕೊಡಲಾಗಿದೆ. ಅಗತ್ಯ ವೈದ್ಯಕೀಯ ತಂಡಗಳೂ ಅಲ್ಲಿ ಬೀಡುಬಿಡಲಿವೆ.

ಕೊಚ್ಚಿ ಏರ್‌ಪೋರ್ಟ್‌, ಬಂದರಿನಲ್ಲೂ ಸಿದ್ಧತೆ
ಕೊಲ್ಲಿ ರಾಷ್ಟ್ರಗಳಿಂದ ಹೊರಡಲಿರುವ ಮೂರು ವಿಮಾನ ಗಳ ಪೈಕಿ ಒಂದು ಗುರುವಾರ ಕೊಚ್ಚಿ ಏರ್‌ಪೋರ್ಟ್‌ನಲ್ಲಿ ಇಳಿಯಲಿದೆ. ಅಬುಧಾಬಿಯಿಂದ ಇದು ಹೊರಡಲಿದ್ದು, ರಾತ್ರಿ 9.45ಕ್ಕೆ ಕೊಚ್ಚಿ ತಲುಪಲಿದೆ. ಇದರಲ್ಲಿ ಆಗಮಿಸುವ 200 ಭಾರತೀಯರ ಕ್ವಾರಂಟೈನ್‌ಗೆ ಸಿದ್ಧತೆ ಮುಗಿದಿದೆ. ಮುಂದಿನ ಒಂದು ವಾರದಲ್ಲಿ 2,700 ಮಂದಿಯನ್ನು ಕೇರಳ ಸ್ವಾಗತಿಸಲಿದೆ. ಇನ್ನೊಂದೆಡೆ ಮಾಲ್ಡೀವ್ಸ್‌, ಯುಎಇ ಕಡೆ ಯಿಂದ ಹಡಗುಗಳಲ್ಲಿಯೂ ಸಹಸ್ರಾರು ಮಂದಿ ಆಗಮಿಸಲಿ ದ್ದಾರೆ. ಕೊಚ್ಚಿ ಏರ್‌ಪೋರ್ಟ್‌, ಬಂದರುಗಳಲ್ಲಿ ಸಕಲ ವ್ಯವಸ್ಥೆಯನ್ನು ಎರ್ನಾಕುಳಂ ಜಿಲ್ಲಾಡಳಿತ ಪರಿಶೀಲಿಸಿದೆ.ತಿರುವನಂತಪುರದಲ್ಲಿ ಮೇ 9, 10ರಂದು ತಲಾ 200 ಪ್ರಯಾಣಿಕರ ಎರಡು ವಿಮಾನಗಳು ಇಳಿಯಲಿದ್ದು, ಅಲ್ಲೂ ಭರದ ಸಿದ್ಧತೆಯಾಗಿದೆ.

ದಿಲ್ಲಿಯೂ ಸಿದ್ಧ
ಆಗಮಿಸುವವರನ್ನು ಕಡ್ಡಾಯ ತಪಾಸಣೆಗೆ ಒಳಪಡಿಸಲು ದಿಲ್ಲಿ ಸರಕಾರ ಕೂಡ ಮಾರ್ಗಸೂಚಿ ಹೊರಡಿಸಿದೆ. ಕ್ವಾರಂಟೈನ್‌ ಕೇಂದ್ರಗಳ ಪರಿಶೀಲನೆ ನಡೆಸುತ್ತಿದೆ.

ಲಗ್ಗೆ ಇರಿಸಿದ ಜನ:
ವೆಬ್‌ಸೈಟ್‌ ಕ್ರ್ಯಾಶ್‌
ಹೊರದೇಶಗಳಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಭಾರತೀಯರನ್ನು ಕರೆತರುವ ಯೋಜನೆಗೆ ಚಾಲನೆ ನೀಡುತ್ತಿದ್ದಂತೆ ನಾಗರಿಕ ವಿಮಾನಯಾನ ಸಚಿವಾಲಯದ ವೆಬ್‌ಸೈಟ್‌ ಕ್ರ್ಯಾಶ್‌ ಆಗಿದೆ. ಭಾರೀ ಸಂಖ್ಯೆಯ ಜನ ಒಂದೇ ಸಮನೆ ವೆಬ್‌ಸೈಟ್‌ ಪ್ರವೇಶಿಸಿದ್ದರಿಂದ ಹೀಗಾಗಿದೆ ಎಂದು ಸಚಿವಾಲಯ ದೃಢಪಡಿಸಿದೆ. ಈ ತಾಂತ್ರಿಕ ದೋಷವನ್ನು ಸರಿಪಡಿಸಲಾಗಿದ್ದು, ಪ್ರಯಾಣದ ಎಲ್ಲ ವಿವರ ಏರ್‌ ಇಂಡಿಯಾ ವೆಬ್‌ಸೈಟ್‌ನಲ್ಲಿ ಲಭ್ಯವಿರುವಂತೆ ನೋಡಿಕೊಳ್ಳಲಾಗಿದೆ.

Advertisement

ಹೊರಡುವ ಮುನ್ನ ಖಡಕ್‌ ಸೂಚನೆ
ಸಂಯುಕ್ತ ಅರಬ್‌ ರಾಷ್ಟ್ರಗಳಿಂದ ನಿರ್ಗಮಿಸುವ ಪ್ರತೀ ಭಾರತೀಯ ಪ್ರಯಾಣಿಕನನ್ನೂ ಕಡ್ಡಾಯ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ವಿಮಾನ ನಿಲ್ದಾಣದಲ್ಲಿಯೇ ವೈದ್ಯಕೀಯ ತಪಾಸಣೆ, ಐಜಿಎಂ/ ಐಜಿಜಿ ಪರೀಕ್ಷೆ ನಡೆಸಲಾಗುತ್ತದೆ ಎಂದು ಅಬುಧಾಬಿಯ ಭಾರತೀಯ ರಾಯಭಾರ ಕಚೇರಿ ಹೇಳಿದೆ. ಭಾರತದಲ್ಲಿ ಇಳಿದ ಕೂಡಲೇ ಕ್ವಾರಂಟೈನ್‌ಗೆ ಒಳಪಡುವ, ಅದರ ವೆಚ್ಚವನ್ನು ಪ್ರಯಾಣಿಕರೇ ಭರಿಸುವ ಒಪ್ಪಂದಕ್ಕೂ ಸಹಿ ಹಾಕಿಸಿಕೊಳ್ಳಲಾಗುತ್ತಿದೆ. ಬೋರ್ಡಿಂಗ್‌ ಸಮಯದಲ್ಲಿ ಪ್ರತಿಯೊಬ್ಬನಿಗೂ ಮಾಸ್ಕ್, 2 ಜೋಡಿ ಕೈಗವಸು, ಸೂಚನಾಪತ್ರ ಹೊಂದಿರುವ ಬ್ಯಾಗ್‌, ಸ್ಯಾನಿಟೈಸರ್‌ ಒಳಗೊಂಡ ಸುರಕ್ಷಾ ಕಿಟ್‌ ನೀಡಲಾಗುತ್ತಿದೆ. ಪ್ರಯಾಣದ ವೇಳೆ ಭಾರತದ ನಾಗರಿಕ ವಿಮಾನಯಾನ ಸಚಿವಾಲಯ ಸೂಚಿಸಿರುವ ಆರೋಗ್ಯ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ರಾಯಭಾರ ಕಚೇರಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next