ಬೆಳಗಾವಿ: ಹತ್ತು ವರ್ಷ ಮೇಲ್ಪಟ್ಟು ಸೇವೆ ಸಲ್ಲಿಸಿದ ಗುತ್ತಿಗೆ ಆಧಾರಿತ ಆಯುಷ್ ವೈದ್ಯಾಧಿಕಾರಿಗಳಿಗೆ ವರ್ಷಕ್ಕೆ ಒಂದು ಅಂಕದ ವೈಟೇಜ್ ಜತೆಗೆ 10 ವರ್ಷ ವಯೋಮಿತಿ ಸಡಿಲಿಕೆ ಮಾಡಿ ವಿಶೇಷ ನೇಮಕಾತಿ ನೀತಿಯಂತೆ ನೇಮಕ ಮಾಡಿಕೊಳ್ಳಲಾಗುತ್ತಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ| ಕೆ.ಸುಧಾಕರ್ ಹೇಳಿದರು.
ವಿಧಾನಸಭೆಯಲ್ಲಿ ಜೆಡಿಎಸ್‌ನ ಎ.ಟಿ.ರಾಮಸ್ವಾಮಿ ಪ್ರಶ್ನೆಗೆ ಉತ್ತರಿಸಿ, ಆಯುಷ್ ಇಲಾಖೆಯಲ್ಲಿ ಆಯುರ್ವೇದ, ಯುನಾನಿ, ಹೋಮಿಯೋಪಥಿ, ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಪದ್ಧತಿಯಡಿ ಒಟ್ಟು 903 ಮಂಜೂರಾದ ಹುದ್ದೆಗಳಿದ್ದು, 694 ಹುದ್ದೆ ಭರ್ತಿಯಾಗಿದೆ. 44 ವೈದ್ಯರನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗಿದೆ. ಎನ್‌ಎಚ್‌ಎಂ ಹಾಗೂ ಎನ್‌ಎಎಂ ಯೋಜನೆಯಡಿ ಗುತ್ತಿಗೆ ಆಧಾರದಲ್ಲೂ ನೇಮಕ ಮಾಡಿಕೊಳ್ಳಲಾಗಿದೆ. ವಿಶೇಷ ನೇಮಕಾತಿ ನೀತಿಯಡಿ ಪ್ರತಿ ವರ್ಷಕ್ಕೆ 2 ಅಂಕದಂತೆ 10 ವರ್ಷ ಮೇಲ್ಪಟ್ಟವರಿಗೆ 20 ಅಂಕ ನೀಡಿ ಖಾಯಂಗೊಳಿಸಲಾಗಿದೆ. ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸಿದ ಆಯುಷ್ ವೈದ್ಯಾಧಿಕಾರಿಗಳನ್ನು 10 ವರ್ಷ ಮೇಲ್ಪಟ್ಟು ಒಂದು ವರ್ಷಕ್ಕೆ ಒಂದು ಅಂಕ ನೀಡಿ ಖಾಯಂಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ರೆಫರಲ್ ಇಲ್ಲದೆಯೂ ಚಿಕಿತ್ಸೆ ನೀಡಲು ಅವಕಾಶ:
ತುರ್ತು ಚಿಕಿತ್ಸೆ ಅಗತ್ಯವಿರುವಾಗ ರೆಫರಲ್ ಇಲ್ಲದೆಯೂ ಯಾವುದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಅವಕಾಶವಿದೆ. ಚಿಕಿತ್ಸೆ ನೀಡಿಕೆ ಸಂಬಂಧ ನೋಂದಣಿ ಮಾಡಿಕೊಳ್ಳದ ಆಸ್ಪತ್ರೆಗಳ ವಿರುದ್ಧ ಕ್ರಮಕ್ಕೂ ಸರಕಾರ ಸಿದ್ಧವಿದೆ ಎಂದು ಆರೋಗ್ಯ ಸಚಿವ ಡಾ| ಕೆ.ಸುಧಾಕರ್ ಎಚ್ಚರಿಕೆ ನೀಡಿದರು.
ಬಿಜೆಪಿಯ ಹರತಾಳು ಹಾಲಪ್ಪ ಪ್ರಶ್ನೆಗೆ ಉತ್ತರಿಸಿದ ಸಚಿವರು, ಆಯುಷ್ಮಾನ್ ಭಾರತ್- ಆರೋಗ್ಯ ಕರ್ನಾಟಕ ಯೋಜನೆಯಡಿ ಲಭ್ಯವಿರುವ ಒಟ್ಟು 1650 ಚಿಕಿತ್ಸಾ ಪ್ಯಾಕೇಜ್‌ಗಳಲ್ಲಿ 171 ತುರ್ತು ಚಿಕಿತ್ಸಾ ವಿಧಾನವಿದ್ದು, ತುರ್ತು ಸಂದರ್ಭದಲ್ಲಿ ನೋಂದಾಯಿತ ಸರಕಾರಿ ಅಥವಾ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬುಹುದು ಎಂದರು.