ಖಾನಾಪುರ: ತಾಲೂಕಿನಲ್ಲಿ ಶುಕ್ರವಾರ ಮಳೆ ಆರಂಭವಾಗಿದ್ದು ಶನಿವಾರ ಕೂಡ ಮಳೆ ಬಿಡದೇ ಸುರಿಯುತ್ತಿದೆ.
ಇದರಿಂದ ತಾಲೂಕಿನ ರೈತರು ಗದ್ದೆಗಳಲ್ಲಿ ಕೃಷಿ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಜೂನ್ ತಿಂಗಳಲ್ಲಿ ಮುಂಗಾರು ಮಳೆ ಕೈಕೊಟ್ಟಿದ್ದು ರೈತರನ್ನು ಇನ್ನಷ್ಟು ಆತಂಕದಲ್ಲಿ ದೂಡಿತ್ತು. ಇದ್ದಕ್ಕಿದ್ದಂತೆ ವರುಣ ಕೃಪೆ ತೋರಿದ್ದು ರೈತರ ಆತಂಕ ತಕ್ಕ ಮಟ್ಟಿಗೆ ಶಮನವಾಗಿದೆ. ಪಟ್ಟಣದ ಮಲಪ್ರಭಾ ನದಿಗೆ ಕಣಕುಂಬಿ ಕಡೆಯಿಂದ ಶುಕ್ರವಾರ ರಾತ್ರಿ ನೀರು ಹರಿದು ಬಂದಿದ್ದು ಬರಿದಾಗಿದ್ದ ಮಲಪ್ರಭಾ ನದಿ ಮತ್ತೆ ಒಡಲು ತುಂಬಿಕೊಳ್ಳುತ್ತಿದೆ. ಮಳೆ ಇಲ್ಲದೇ ಪಟ್ಟಣದ ಜನರು ನೀರಿನ ಸಮಸ್ಯೆ ಎದುರಿಸುತ್ತಿದ್ದು ನೀರು ಬಂದು ಪರದಾಡುವುದು ತಪ್ಪಿತು ಎನ್ನುವ ಸಮಾಧಾನವಾಗಿದೆ.
ಮಳೆ ಇಲ್ಲದೇ ಪರಿಸ್ಥಿತಿ ಹೀಗೇ ಮುಂದುವರೆದರೆ ಕುಡಿಯುವ ನೀರಿಗೂ ಪರದಾಡ ಬೇಕಿತ್ತು. ಹಳ್ಳಿಗಳಲ್ಲಿ ದನಕರುಗಳಿಗೆ ನೀರು ಮೇವಿಲ್ಲದೇ ಆಗಲೇ ಬಿಸಿ ತಟ್ಟಿತ್ತು. ಇನ್ನೇನು ಪೂರ್ತಿ ಬರಗಾಲ ಸ್ಥಿತಿ ಉಂಟಾಗುವ ಸಾಧ್ಯತೆ ಇದೆ ಎಂದುಕೊಳ್ಳುತ್ತಿರುವಾಗಲೇ ಮಳೆರಾಯ ಕೃಪೆ ತೋರಿ ಜನರ ಆತಂಕ ದೂರ ಮಾಡಿದ್ದಾನೆ. ಜೂನ ಕೊನೆಯಲ್ಲಿ ಮಳೆ ಆರಂಭವಾಗಿದ್ದು ಸಂಭ್ರಮಕ್ಕೆ ಕಾರಣವಾಗಿದೆ.
ಎರಡು ದಿನಗಳ ಮಳೆಯಿಂದ ಜನ ಮತ್ತೆ ಮಳೆರಾಯನ ಅರ್ಭಟಕ್ಕೆ ಖುಷಿಯಾಗಿದ್ದಾರೆ. ರೈತರು ಬೆಳೆಗಳು ಬದುಕಿದವು ಎನ್ನುವ ಸಮಾಧಾನದ ಉಸಿರು ಬಿಟ್ಟಿದ್ದಾರೆ. ತಾಲೂಕಿನ ಕಣಕುಂಬಿ ಮತ್ತು ಜಾಮಗಾಂವ ಅರಣ್ಯ ಪ್ರದೇಶದಲ್ಲಿ ಮಳೆ ಸತತವಾಗಿ ಬಿಳುತ್ತಿದ್ದು ಜನರಿಗೆ ದೈನಂದಿನ ಕೆಲಸಗಳಿಗೆ ಅಡಚಣೆಯಾಗಿದೆ. ಶುಕ್ರವಾರ ಖಾನಾಪುರ ಪಟ್ಟಣದಲ್ಲಿ 20.8 ಮಿಮೀ ಮಳೆಯಾದರೆ ಕಣಕುಂಬಿಯಲ್ಲಿ 103.4 ಮಿಮೀ ಮಳೆಯಾಗಿದೆ. ನಾಗರಗಾಳಿ 22.2, ಬೀಡಿ 11.8, ಕಕ್ಕೇರಿ 9.6, ಅಸೋಗಾ 27.0, ಲೋಂಡಾ ರೇಲ್ವೆ ಸ್ಟೇಶನ್ 28.0, ಲೋಂಡಾ ಪಿಡ್ಲೂಡಿ 35.0, ಜಾಂಬೋಟಿ 46.0 ಮಿಮೀ ಮಳೆಯಾದ ವರದಿ ಇದೆ. ಶನಿವಾರ ಮಳೆ ಸತತವಾಗಿ ಹಿಡಿದಿದ್ದು ಶಾಲಾ ಮಕ್ಕಳಿಗೆ ನಿತ್ಯ ಓಡಾಡುವ ಪ್ರವಾಸಿಗರಿಗೆ ತೊಂದರೆಯಾಯಿತು.
ಮಳೆಯ ಅಭಾವದಿಂದ ಕೊಳವೆ ಬಾವಿ ಮತ್ತು ಬಾವಿಗಳಲ್ಲಿ ನೀರಿನ ಅಭಾವ ಎದ್ದು ಕಾಣಿಸುತ್ತಿತ್ತು. ಜಾಂಬೋಟಿ ಲೋಂಡಾ ನಾಗರಗಾಳಿಯಲ್ಲಿ ಮಳೆ ಗದ್ದೆ ಕೆಲಸಗಳಿಗೆ ಅಡ್ಡಿಯಾಗಿದೆ. ಅರಣ್ಯ ಪ್ರದೇಶದಲ್ಲಿ ಜನರು ಮಳೆಯಿಂದ ಹೊರಗೆ ಓಡಾಡುವದು ಕಷ್ಟವಾಗಿದೆ. ಮಳೆರಾಯನ ಅರ್ಭಟ ಜನರ ಮೊಗದಲ್ಲಿ ಸಂತಸ ಮೂಡಿಸಿದ್ದು ಮಳೆ ಹೀಗೆ ಮುಂದುರೆಯಲಿ ಎನ್ನುವುದು ಜನರ ಪ್ರಾರ್ಥನೆಯಾಗಿದೆ.