ಚಂದ್ರವಂಶದ ಪರಂಪರೆಯಲ್ಲಿ ಸಂವರಣ ಎಂಬವನಿದ್ದ. ಋಕ್ಷರಾಜನ ಮಗನಾದ ಆತ ಸೂರ್ಯದೇವನ ಪರಮ ಭಕ್ತನಾಗಿದ್ದ. ರಾಜಕಾರ್ಯಗಳಿಂದ ಬಿಡುವು ಪಡೆಯುವುದಕ್ಕಾಗಿ ಸಂವರಣ ಒಮ್ಮೆ ಬೇಟೆಗೆಂದು ಕಾಡಿನತ್ತ ತೆರಳುತ್ತಾನೆ. ಉತ್ಸಾಹದಿಂದ ಬೇಟೆಯಾಡುತ್ತ ಆಡುತ್ತ ಬೆಟ್ಟವೊಂದರ ಮೇಲೆ ತೆರಳುವಾಗ ಆತನ ಕುದುರೆ ದಣಿವಿನಿಂದ ಪ್ರಜ್ಞೆತಪ್ಪಿ ಧರೆಗುರುಳಿತ್ತದೆ. ತನ್ನ ರಾಜ್ಯದಿಂದ ಬಹುದೂರ ಬಂದಿದ್ದ ಸಂವರಣನಿಗೆ ಮರಳುವ ದಾರಿ ತೋಚಲಿಲ್ಲ. ಅಲ್ಲದೆ, ಹಸಿವೆ-ಬಾಯಾರಿಕೆಗಳಿಂದ ಆತ ದಣಿದಿದ್ದ.
ನೀರಿಗಾಗಿ ಆ ಪರ್ವತದಲ್ಲಿ ಅಡ್ಡಾಡುತ್ತಿದ್ದಾಗ ದೂರದಲ್ಲಿ ಅಪ್ರತಿಮ ಸುಂದರಿಯೊಬ್ಬಳು ನಿಂತಿರುವುದನ್ನು ನೋಡಿ ತನ್ನ ಕಣ್ಣನ್ನೇ ನಂಬದಾದ. ಸೌಂದರ್ಯಕ್ಕೆ ಮಾರುಹೋದ ಆತ, ಆಕೆಯ ಬಳಿ ಸಾರಿ, ಆಕೆಯ ಹೆಸರು, ಊರುಗಳ ಬಗ್ಗೆ ವಿಚಾರಿಸಿದ. ಆದರೆ, ಆಕೆ ಯಾವುದೇ ಉತ್ತರ ನೀಡಲಿಲ್ಲ. ಸುಮ್ಮನೇ ಆತನನ್ನು ದಿಟ್ಟಿಸಿ ಅಲ್ಲಿಂದ ಮಾಯವಾದಳು.
ಆಕೆಯನ್ನು ನೋಡಿದ್ದೇ ಹಸಿವು-ನೀರಡಿಕೆ-ಬಳಲಿಕೆಗಳ ನಡುವೆ ಯೂ ಅವಳಲ್ಲಿ ಅನುರಕ್ತಿ ಮೂಡಿತು. ಏನು ಮಾಡೋಣ! ಅವಳು ಅಲ್ಲಿಲ್ಲ. ಆತ ಚಿಂತಿತನಾದ. ದುಃಖದಿಂದ ಅಲ್ಲಿಯೇ ಕುಸಿದು ಬಿದ್ದ.
ಎಷ್ಟೋ ಹೊತ್ತಿನ ಬಳಿಕ ತಿಳಿಗಾಳಿ ಬೀಸಿದಾಗ ರಾಜನಿಗೆ ಎಚ್ಚರವಾಯಿತು. ಆತನ ಬಳಿ ಆ ಸುಂದರಿ ನಿಂತಿದ್ದಳು. ಆಕೆಯೇ ಮಾತನಾಡಿದಳು, “ರಾಜನೇ, ನಾನು ಸೂರ್ಯ ಕುಮಾರಿ. ಹೆಸರು ತಪತಿ ಎಂದು. ತಂದೆಯ ವಶದಲ್ಲಿರುವ ಕನ್ಯೆ’
ಸಂವರಣ ಅವಳನ್ನು ಮದುವೆಯಾಗುವ ಬಯಕೆಯನ್ನು ತೋಡಿಕೊಂಡ. “ನನ್ನ ತಂದೆ ಒಪ್ಪಿದಲ್ಲಿ ನಮ್ಮ ಮದುವೆಯಾಗಬಹುದು. ಆದ್ದರಿಂದ ನೀನು ನನ್ನ ತಂದೆಯೊಡನೆಯೇ ಮಾತನಾಡು’ ಎಂದು ಸೂಚಿಸಿ ತಪತಿ ಮಾಯವಾದಳು.
ಆಕೆಯ ಮಾತು ಕೇಳಿ ರೋಮಾಂಚಿತನಾದ ಸಂವರಣ ಶುಚಿಭೂìತನಾಗಿ ಸೂರ್ಯಮುಖೀಯಾಗಿ ತಪಸ್ಸಿಗೆ ನಿಂತ. ಅತ್ತ ಗುರುಗಳಾದ ವಸಿಷ್ಠರಿಗೂ ಈ ವಿಷಯ ತಿಳಿಯಿತು. ಅವರು ಸೂರ್ಯದೇವನ ಬಳಿಗೆ ತೆರಳಿ, ತಪತಿ ಮತ್ತು ಸಂವರಣನ ನಡುವೆ ಪ್ರೇಮಾಂಕುರ ಆಗಿರುವ ಕುರಿತು ವಿವರಿಸಿದರು.
ಚಂದ್ರವಂಶದ ಅರಸ ತನ್ನ ಮಗಳನ್ನು ವಿವಾಹವಾಗುತ್ತೇನೆ ಎನ್ನುವಾಗ ಸೂರ್ಯ ಬೇಡವೆನ್ನುತ್ತಾನೆಯೆ? ಇಬ್ಬರ ಮದುವೆಗೆ ಏರ್ಪಾಟು ಮಾಡಿದ. ಈ ದಂಪತಿಗೆ ಕುರು ಎಂಬ ಮಗ ಹುಟ್ಟುತ್ತಾನೆ. ಅವನಿಂದಾಗಿಯೇ ಕುರುವಂಶ ಎಂಬ ಖ್ಯಾತಿ ಬರುತ್ತದೆ. ತಪತಿಯ ವಂಶಸ್ಥರಾದ್ದರಿಂದ ಪಾಂಡವರಿಗೆ ತಾಪತ್ಯರು ಎಂಬ ಹೆಸರೂ ಇದೆ.