Advertisement

ಜಿಲ್ಲಾಧಿಕಾರಿ ಆದೇಶಕ್ಕಿಲ್ಲ ಕಿಮ್ಮತ್ತು

11:46 AM Mar 18, 2020 | Suhan S |

ಮಹಾಲಿಂಗಪುರ: ಕಳೆದೊಂದು ವಾರದಿಂದ ವಿಶ್ವವನ್ನೇ ತಲ್ಲಣಗೊಳಿಸಿದ ಕೊರೊನಾ ವೈರಸ್‌ ಹರಡದಂತೆ ಮುಂಜಾಗ್ರತಾ ಕ್ರಮವಹಿಸಿ, ರಾಜ್ಯ ಸರ್ಕಾರವು ಶಾಲಾ-ಕಾಲೇಜು, ಸಭೆ-ಸಮಾರಂಭ ಜಾತ್ರೆ-ಉತ್ಸವಗಳಿಗೆ ಕಡಿವಾಣ ಹಾಕಿದೆ.

Advertisement

ಅದರಂತೆಯೇ ಕೊರೊನಾ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಬಾಗಲಕೋಟೆ ಜಿಲ್ಲಾಧಿಕಾರಿಗಳು ಮಾ. 23ರವರೆಗೆ ಜಿಲ್ಲೆಯಲ್ಲಿನ ವಾರದ ಸಂತೆ ನಿಷೇಧಿಸಿ ಸೋಮವಾರ ಆದೇಶ ಹೊರಡಿಸಿದ್ದಾರೆ. ಆದರೆ ಜಿಲ್ಲಾಧಿಕಾರಿ ಆದೇಶದ ನಡುವೆಯೂ ಪಟ್ಟಣದ ಮಂಗಳವಾರದ ಸಂತೆ ಯಥಾಸ್ಥಿತಿಯಲ್ಲಿ ನಡೆದಿದೆ.

ಕೊರೊನಾ ವೈರಸ್‌ ಪ್ರಭಾವದ ಹಿನ್ನೆಲೆ ಸಂತೆಗೆ ಆಗಮಿಸುತ್ತಿದ್ದ ಗ್ರಾಹಕರ ಸಂಖ್ಯೆಯು ಅಲ್ಪ ಪ್ರಮಾಣ ಕಡಿಮೆಯಾಗಿತ್ತು. ಈ ಕುರಿತು ಪುರಸಭೆ ಮುಖ್ಯಾಧಿಕಾರಿ ಬಾಬುರಾವ ಕಮತಗಿ ಪ್ರತಿಕ್ರಿಯಿಸಿ, ವಾರದ ಸಂತೆಗಾಗಿ ಜಿಲ್ಲಾ ಧಿಕಾರಿ ಆದೇಶದ ಕುರಿತು ರಬಕವಿ-ಬನಹಟ್ಟಿ ತಹಶೀಲ್ದಾರ್‌ ಮತ್ತು ಜಮಖಂಡಿ ಉಪವಿಭಾಗಾಧಿಕಾರಿಗಳ ಕುರಿತು ಚರ್ಚಿಸಿ, ಸಾರ್ವಜನಿಕರಿಗೆ ಅವಶ್ಯವಿರುವ ದಿನನಿತ್ಯ ವಸ್ತುಗಳ ಮಾರಾಟ ತೊಂದರೆ ಬೇಡ ಎಂಬ ಕಾರಣಕ್ಕಾಗಿ ಸಂತೆ ಬಂದ್‌ ಮಾಡಿಲ್ಲ ಎಂದು ತಿಳಿಸಿದ್ದಾರೆ.

ಪಟ್ಟಣದಲ್ಲಿ ಕೊರೊನಾ ವೈರಸ್‌ ಕುರಿತು ಪುರಸಭೆಯಿಂದ ಜಾಗೃತಿ ಕಾರ್ಯಕ್ರಮ ಮಾಡಲಾಗಿದೆ. ಎಸಿ ಅವರ ಸಭೆಯಲ್ಲಿ ನಿರ್ಣಯಿಸಿದಂತೆ ಫುಟ್‌ಪಾತ್‌ನಲ್ಲಿ ಚಹಾ ಅಂಗಡಿ, ಹೋಟೆಲ್‌, ಪಾನಿಪುರಿ ಅಂಗಡಿ ಸೇರಿದಂತೆ ಬೀದಿಬದಿಯಲ್ಲಿನ ಅಂಗಡಿಗಳನ್ನು ಬಂದ್‌ ಮಾಡಲು ಕ್ರಮ ಕೈಗೊಳ್ಳುತ್ತೇವೆ ಎಂದು ಪತ್ರಿಕೆಗೆ ತಿಳಿಸಿದ್ದಾರೆ.

31ರವರೆಗೆ ಚಿತ್ರಮಂದಿರ ಬಂದ್‌: ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ಕಳೆದ ಶುಕ್ರವಾರದಿಂದ ಪಟ್ಟಣದ ಅಷ್ಟಗಿ ಮತ್ತು ಮಾರುತಿ ಚಿತ್ರಮಂದಿರಗಳಲ್ಲಿನ ಚಿತ್ರಪ್ರದರ್ಶನ ರದ್ದುಗೊಳಿಸಲಾಗಿದೆ. ಮಾ.31ರವರೆಗೂ ಚಿತ್ರ ಪ್ರದರ್ಶನ ಇರುವುದಿಲ್ಲ ಎಂದು ಚಿತ್ರ ಮಂದಿರ ಪ್ರದರ್ಶಕರು ತಿಳಿಸಿದ್ದಾರೆ.

Advertisement

ಜಾಗೃತಿ-ಸ್ವಚ್ಛತೆಗೆ ಆದ್ಯತೆ: ಕೊರೊನಾ ವೈರಸ್‌ ಮುಂಜಾಗ್ರತಾ ಹಿನ್ನೆಲೆ ಪಟ್ಟಣದಲ್ಲಿ ಹೆಚ್ಚಿನ ಜನಜಾಗೃತಿ ಕಾರ್ಯಕ್ರಮ ಮಾಡುವುದು ಹಾಗೂ ಪಟ್ಟಣದ ಸ್ವತ್ಛತೆಗೆ ಹೆಚ್ಚಿನ ಆದ್ಯತೆ ನೀಡುವುದು ಅವಶ್ಯ. ಈ ಕುರಿತು ಪುರಸಭೆ, ಸಮುದಾಯ ಆರೋಗ್ಯ ಕೇಂದ್ರ ಹಾಗೂ ಪೊಲೀಸ್‌ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಪಟ್ಟಣದಲ್ಲಿ ಸರ್ಕಾರದ ಆದೇಶಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿ ರೋಗ ಹರಡದಂತೆ ಮುಂಜಾಗ್ರತಾ ಕಾರ್ಯಕ್ರಮ ಕೈಗೊಳ್ಳಬೇಕೆಂದು ಜೆಡಿಎಸ್‌ ತೇರದಾಳ ಮತಕ್ಷೇತ್ರದ ಅಧ್ಯಕ್ಷ ನಿಂಗಪ್ಪ ಬಾಳಿಕಾಯಿ, ಬಸವರಾಜ ರಾಯರ, ವಿವಿಧ ಸಂಘಟನೆಗಳ ಅಧ್ಯಕ್ಷರಾದ ಅನೀಲ ಕಿರಿಕಿರಿ, ನಾಗರಾಜ ಭಜಂತ್ರಿ, ಅಸ್ಲಂ ಕೌಜಲಗಿ, ಸುರೇಶ ಮಡಿವಾಳರ, ಶಿವಾ ಟಿರ್ಕಿ, ವೀರೇಶ ನ್ಯಾಮಗೌಡರ, ವಿನೋದ ಸಿಂಪಿ, ಶಶಿಕಾಂತ ಮುಕ್ಕೆನ್ನವರ, ಚೇತನ ಕಲಾಲ, ರವಿ ಹುಣಶ್ಯಾಳ ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next