Advertisement
ಉಪ್ಪಿನಂಗಡಿ ಗ್ರಾ.ಪಂ. ಅಧ್ಯಕ್ಷ ಅಬ್ದುಲ್ ರಹಿಮಾನ್ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಪ್ರಥಮ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾವಿಸಿದ ಸದಸ್ಯರು, ಪೇಟೆಯಲ್ಲಿ ಜನರಿಗೆ ನಡೆದಾಡಲು ಆಗುತ್ತಿಲ್ಲ. ಶಾಲೆ ಅವಧಿಯಲ್ಲಿ ವಿದ್ಯಾರ್ಥಿಗಳ ಸಮಸ್ಯೆ ಹೇಳತೀರದು. ಅಪಘಾತದ ಭೀತಿಯಿಂದಲೇ ನಡೆಯಬೇಕಾಗಿದೆ. ಈ ಹಿಂದೆ ರೂಪಿಸಿದ್ದ ಸಂಚಾರ ನಿಯಮಗಳನ್ನು ಗಾಳಿಗೆ ತೂರಿದ್ದರಿಂದ ಮತ್ತೆ ಸಮಸ್ಯೆಯಾಗಿದೆ. ವರ್ತಕರು ಗ್ರಾಹಕರ ಬಗ್ಗೆ ಕನಿಷ್ಠ ಕಾಳಜಿ ವಹಿಸುತ್ತಿಲ್ಲ. ಅಂಗಡಿಗಳ ಸರಂಜಾಮುಗಳು ಚರಂಡಿ ಮೇಲೆ ಬಂದು ನಿಂತಿವೆ. ಅಂಗಡಿಗೆ ಬರುವ ಗ್ರಾಹಕರು ವಾಹನಗಳನ್ನು ಸರಿಯಾಗಿ ನಿಲ್ಲಿಸುವ ಬಗ್ಗೆ ಮಾಹಿತಿ ಕೊಡುವುದಿಲ್ಲ. ವರ್ತಕರು ಜವಾಬ್ದಾರಿ ವಹಿಸಿದರೆ ಪೇಟೆಯ ರಸ್ತೆಯಲ್ಲಿ ಸಮಸ್ಯೆ ಆಗಲಾರದು ಎಂದು ಅಭಿಪ್ರಾಯಪಟ್ಟರು.
ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆಯುತ್ತಿರುವ ಚತುಷ್ಪಥ ಕಾಮಗಾರಿ ಅವೈಜ್ಞಾನಿಕವಾಗಿದೆ. ರಸ್ತೆ ವಿಸ್ತರಣೆಗಾಗಿ ಭೂ ಸ್ವಾಧೀನ ಪ್ರಕ್ರಿಯೆಯಿಂದಾಗಿ ರಸ್ತೆ ಪಕ್ಕದಲ್ಲಿದ್ದ ಚರಂಡಿ, ತೋಡುಗಳವನ್ನು ಮುಚ್ಚಲಾಗಿದೆ. ಮಳೆ ನೀರು ರಸ್ತೆಯಲ್ಲೇ ಹರಿಯುತ್ತಿದೆ. ಕೃತಕ ನೆರೆಭೀತಿ ಕಾಡುತ್ತಿದೆ. ಮನೆ ಹಾಗೂ ತೋಟಗಳಿಗೂ ನೀರು ನುಗ್ಗಿ ಹಾನಿಯುಂಟು ಮಾಡುತ್ತಿದೆ ಎಂಬ ದೂರುಗಳು ಸಭೆಯಲ್ಲಿ ವ್ಯಕ್ತವಾದವು.
Related Articles
Advertisement
ಫ್ಲೈಓವರ್‌ಗೆ ಮನವಿಉಪ್ಪಿನಂಗಡಿ ಆದಿತ್ಯ ಹೊಟೇಲ್ ಬಳಿಯಿಂದ ನೆಕ್ಕಿಲಾಡಿ ತನಕ ಸರ್ಕಾರಿ ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು, ಪ್ರಥಮ ದರ್ಜೆ ಕಾಲೇಜು ಅಲ್ಲದೆ ಹಲವು ಖಾಸಗಿ ಶಿಕ್ಷಣ ಸಂಸ್ಥೆಗಳಿವೆ. ನಿತ್ಯ 4 ಸಾವಿರಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಇಲ್ಲಿ ಸಂಚರಿಸುತ್ತಾರೆ. ಮುಂದೆ ಚತುಷ್ಪಥ ರಸ್ತೆ ದಾಟುವುದು ಸಮಸ್ಯೆ ಆಗಲಿದೆ. ಅಪಘಾತಗಳೂ ಸಂಭವಿಸುವ ಸಾಧ್ಯತೆ ಇದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಆದಿತ್ಯ ಹೊಟೇಲ್ ಬಳಿಯಿಂದ ನೆಕ್ಕಿಲಾಡಿ ತನಕ ಫ್ಲೈಓವರ್ ನಿರ್ಮಿಸುವುದು ಒಳಿತು ಎಂದು ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವನ್ನು ಮನವಿ ಮಾಡುವ ನಿರ್ಣಯ ಅಂಗೀಕರಿಸಲಾಯಿತು. ಸಭೆಯಲ್ಲಿ ಗ್ರಾ.ಪಂ. ಸದಸ್ಯರಾದ ಚಂದ್ರಶೇಖರ ಮಡಿವಾಳ, ಗೋಪಾಲ ಹೆಗ್ಡೆ, ಯು.ಟಿ. ತೌಸೀಫ್, ಸುರೇಶ್ ಅತ್ರಮಜಲು, ಸುನೀಲ್ ದಡ್ಡು, ರಮೇಶ್ ಭಂಡಾರಿ, ಭಾರತಿ, ಸುಂದರಿ, ಝರೀನಾ ಇಕ್ಬಾಲ್ ಮಾತನಾಡಿದರು. ಸದಸ್ಯರಾದ ಉಮೇಶ್ ಗೌಡ, ಯೋಗಿನಿ, ಚಂದ್ರಾವತಿ, ಸುಶೀಲಾ, ಚಂದ್ರಾವತಿ ಹೆಗ್ಡೆ ಉಪಸ್ಥಿತರಿದ್ದರು. ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಬ್ದುಲ್ಲ ಅಸಾಫ್ ಸ್ವಾಗತಿಸಿ, ಕಾರ್ಯದರ್ಶಿ ಮರಿಯಮ್ಮ ವಂದಿಸಿದರು. ಪೊಲೀಸರಿಂದ ಜನಪ್ರತಿನಿಧಿಗಳ ಕಡಗಣನೆ
ಪೊಲೀಸ್ ಠಾಣೆಯಲ್ಲಿ ಆಗಾಗ್ಗೆ ಶಾಂತಿ ಸಮಿತಿ ಸಭೆ ಕರೆಯಲಾಗುತ್ತದೆ. ಆದರೆ, ಜಿ.ಪಂ., ತಾಪಂ., ಗ್ರಾ.ಪಂ. ಸದಸ್ಯರನ್ನು ಕರೆಯುತ್ತಿಲ್ಲ. ಪೊಲೀಸರು ಜನಪ್ರತಿನಿಧಿಗಳನ್ನು ಕಡೆಗಣಿಸುತ್ತಿದ್ದಾರೆ ಎಂದು ಸದಸ್ಯರು ಸಭೆಯ ಗಮನ ಸೆಳೆದರು. ಪೊಲೀಸರು ಅಕ್ರಮ ಮರಳುಗಾರಿಗೆ ನಡೆಸುವವರನ್ನು, ಹಲವು ಕೇಸುಗಳು ದಾಖಲಾಗಿ ಪರಿಚಯ ಇರುವವರನ್ನು, ಅಡ್ಡ ದಂಧೆಯಲ್ಲಿ ತೊಡಗಿದವರನ್ನು ಕರೆಯುತ್ತಾರೆ. ಯಾವುದೋ ಕೆಲಸಕ್ಕೆ ಠಾಣೆಗೆ ಬಂದವರನ್ನು ಸಭೆಯಲ್ಲಿ ಕೂರಿಸಿ, ಸಂಖ್ಯೆ ತೋರಿಸುತ್ತಿದ್ದಾರೆ. ಪೊಲೀಸರು ಮೊದಲು ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂಬ ಆಗ್ರಹ ಸಭೆಯಲ್ಲಿ ವ್ಯಕ್ತವಾಯಿತು.