Advertisement
ಬೆಂಗಳೂರು ನಗರದಲ್ಲಿ ನೈಟ್‌ಕರ್ಫ್ಯೂ ಜಾರಿಯಾದ ಹಿನ್ನೆಲೆಯಲ್ಲಿ ತಾಲೂಕಿನ ಶ್ರೀನಿವಾಸಪುರ ಗ್ರಾಮ ಪಂಚಾಯ್ತಿಯ ಮರಸರಹಳ್ಳಿಯಲ್ಲಿ ನಿವೃತ್ತ ಡೀಸಿ ತೋಟದಲ್ಲಿ ಕೇರಳ, ತಮಿಳುನಾಡು ಹಾಗೂ ಬೆಂಗಳೂರು ಸುತ್ತಮುತ್ತಲಿನ 70ಕ್ಕೂ ಹೆಚ್ಚು ಯುವಕ ಯುವತಿಯರು 1 ಸಾವಿರ ರೂ.ನಿಂದ 10 ಸಾವಿರ ರೂ.ವರೆಗೂ ಹಣ ನೀಡಿ ಪಾರ್ಟಿಯಲ್ಲಿ ಭಾಗವಹಿಸಿದ್ದರು.
ಶನಿವಾರ ಮಧ್ಯಾಹ್ನದಿಂದ ಬೆಂಗಳೂರು, ಹೊರರಾಜ್ಯಗಳಿಂದ ಆಗಮಿಸಿರುವ ಯುವಕ ಯುವತಿಯರು ಸಂಜೆ ವೇಳೆಗೆ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಖಚಿತ ಮಾಹಿತಿ ಮೇರೆಗೆ ಡಿವೈಎಸ್‌ಪಿ ಜಗದೀಶ್ ಹಾಗೂ ವೃತ್ತ ನಿರೀಕ್ಷಕ ಹರೀಶ್ ಕುಮಾರ್, ಸಬ್‌ಇನ್‌ಸ್ಪೆಕ್ಟರ್ ವಸಂತ್, ಸುರೇಶ್ ನೇತೃತ್ವದಲ್ಲಿ ದಿಢೀರ್ ದಾಳಿ ಮಾಡಿಸಿದ ಪೊಲೀಸರು ಯುವಕ ಯುವತಿಯರನ್ನು ವಶಕ್ಕೆ ಪಡೆದು ಪಾರ್ಟಿಗೆ ತಂದಿದ್ದ ಮದ್ಯ ಹಾಗೂ ಗಾಂಜಾ ವಶಕ್ಕೆ ಪಡೆದರು. ಪೊಲೀಸರು ದಿಢೀರ್ ದಾಳಿ ನಡೆಸುತ್ತಿದಂತೆ ಪಾರ್ಟಿ ಆಯೋಜನೆ ಮಾಡಿದ್ದ ವ್ಯಕ್ತಿ ನಾಪತ್ತೆ ಆಗಿದ್ದಾನೆ. ಇಂತಹ ಪಾರ್ಟಿಗಳನ್ನು ನಡೆಸಲು ಜಮೀನು ಮಾಲಿಕರು ಅನುಮತಿ ನೀಡಿದ್ದು ಹೇಗೆ? ಕೊರೊನಾ ಕಟ್ಟುನಿಟ್ಟಿನ ನಿಯಮದ ನಡುವೆ 70ಕ್ಕೂ ಹೆಚ್ಚು ಹೊರರಾಜ್ಯದ ಯುವಕರು ಸೇರಿದ್ದು ಹೇಗೆ? ಎಂಬ ಅನುಮಾನಗಳು ವ್ಯಕ್ತವಾಗಿದೆ.