ಚಿಕ್ಕಬಳ್ಳಾಪುರ: ಕೋವಿಡ್ ಸೋಂಕು ನಿಯಂತ್ರಿಸುವ ಸಲುವಾಗಿ ಮತ್ತು ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರವಾಸಿಗರ ತಾಣ ನಂದಿಗಿರಿಧಾಮದಲ್ಲಿ ಜುಲೈ 12 ರಿಂದ ಮುಂದಿನ ಆದೇಶ ವರೆಗೆ ಪ್ರತಿವಾರಾಂತ್ಯ ಅಂದರೆ ಶುಕ್ರವಾರ ಸಂಜೆ 6 ಗಂಟೆಯಿಂದ ಸೋಮವಾರ ಬೆಳಗ್ಗೆ 6:00 ವರೆಗೆ ಪ್ರವಾಸಿಗರು ಮತ್ತು ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ರಾಜ್ಯದಲ್ಲಿ ಅನ್ ಲಾಕ್ 3 ಘೋಷಿಸಿ ವ್ಯಾಪಾರ ವಹಿವಾಟಿಗೆ ಅವಕಾಶ ಕಲ್ಪಿಸಿದ ಸರ್ಕಾರ ಪ್ರವಾಸಿ ತಾಣಗಳಲ್ಲಿ ಸಹ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಿ ಸಾರ್ವಜನಿಕರಿಗೆ ಪ್ರವೇಶ ಮುಕ್ತಗೊಳಿಸಲಾಗಿತ್ತು. ಆದರೆ ಜಿಲ್ಲೆಯ ಪ್ರವಾಸಿ ತಾಣ ನಂದಿಗಿರಿಧಾಮದಲ್ಲಿ ವಾರಾಂತ್ಯದ ಶನಿವಾರ ಮತ್ತು ಭಾನುವಾರದಂದು ಜನಸಾಗರವೇ ಹರಿದು ಬಂದಿತ್ತು. ಇದರಿಂದ ಕೋವಿಡ್ ಸೋಂಕು ಹರಡುವ ಆತಂಕ ಮತ್ತು ಭೀತಿಯನ್ನು ಸಾರ್ವಜನಿಕರು ವ್ಯಕ್ತಪಡಿಸಿದ್ದರು.
ಇದನ್ನೂ ಓದಿ:ಹಳ್ಳಿಗರಿಗೂ ಲಸಿಕೆ ಕೊಡಿ : ದಾಸ್ತಾನು ಕೊರತೆಯಿಂದ ಶೇ. 50ರಷ್ಟು ಲಸಿಕೆ ಕೇಂದ್ರ ಸ್ಥಗಿತ
ಗೋವಿನ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ನಿರ್ದೇಶನ ನೀಡಿದ್ದರೂ ಸಹ ಪ್ರವಾಸಿಗರು ನಂದಿಗಿರಿ ಧಾಮದಲ್ಲಿ ಮೋಜುಮಸ್ತಿಯಲ್ಲಿ ತೊಡಗಿರುವ ಕುರಿತು ಸ್ಥಳೀಯ ಮಾಧ್ಯಮಗಳಲ್ಲಿ ಸುದ್ದಿಗಳು ಪ್ರಕಟಗೊಂಡ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಆರ್.ಲತಾ ಅವರು ಪರಿಸ್ಥಿತಿಯ ಗಂಭೀರತೆಯನ್ನು ಅರಿತು ಮುಂದಿನ ವಾರಂತ್ಯದಲ್ಲಿ ನಂದಿ ಗಿರಿಧಾಮದಲ್ಲಿ ಪ್ರವಾಸಿಗರು ಮತ್ತು ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸುವುದಾಗಿ ಉದಯವಾಣಿಗೆ ತಿಳಿಸಿದರು.
ಅದರಂತೆ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ ಕೆ ಸುಧಾಕರ್ ಅವರ ಸಲಹೆ ಸೂಚನೆಗಳು ಆಧರಿಸಿ ಜುಲೈ 12 ರಿಂದ ಮುಂದಿನ ಆದೇಶ ವರೆಗೆ ಪ್ರತಿವಾರ ಅಂತ್ಯ ಅಂದರೆ ಶುಕ್ರವಾರ ಸಂಜೆ 6 ಗಂಟೆಯಿಂದ ಸೋಮವಾರ ಬೆಳಗ್ಗೆ 6:00 ವರೆಗೆ ಪ್ರವಾಸಿಗರು ಮತ್ತು ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಿ ಅಪರ ಜಿಲ್ಲಾಧಿಕಾರಿ ಎಚ್. ಅಮರೇಶ್ ಆದೇಶ ಹೊರಡಿಸಿದ್ದಾರೆ.