ಬೆಂಗಳೂರು: ಕೋವಿಡ್ ಪ್ರಕರಣಗಳು ಜಾಸ್ತಿ ಇದ್ದರೂ ಆಸ್ಪತ್ರೆ ದಾಖಲಾತಿ ಸಂಖ್ಯೆ ಕಡಿಮೆಯಿದೆ. ಇಂಥ ಸಂದರ್ಭದಲ್ಲಿ ಹೇಗೆ ನಿರ್ವಹಣೆ ಮಾಡಬೇಕೆಂಬುದರ ಬಗ್ಗೆ ತಜ್ಞರು ವಿಶ್ವಾಸ ಮೂಡಿಸಿದ್ದಾರೆ. ಜನರಿಗೂ ಸಮಸ್ಯೆ ಆಗಬಾರದೆಂದು ವೀಕೆಂಡ್ ಕರ್ಫ್ಯೂ ತೆರವು ಮಾಡುವ ನಿರ್ಧಾರ ಮಾಡಿದ್ದೇವೆಯೇ ಹೊರತು ಒತ್ತಡದಿಂದ ಮಾಡಿದ್ದಲ್ಲ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೀವವೂ ಉಳಿಯಬೇಕು, ಜೀವನವೂ ನಡೆಯಬೇಕು. ಹೀಗಾಗಿ ನಿರ್ಧಾರ ಮಾಡಿದ್ದಾರೆ. ಯಾವುದೇ ಒತ್ತಡದಿಂದ ವೀಕೆಂಡ್ ಕರ್ಫ್ಯೂ ಹಿಂದಕ್ಕೆ ಪಡೆದಿಲ್ಲ ಎಂದರು.
ಕಾನೂನು ತಜ್ಞರ ಜೊತೆ ಚರ್ಚೆ: ಕೃಷ್ಣಾ ಸೇರಿದಂತೆ ಅಂತಾರಾಜ್ಯ ಜಲ ವಿವಾದಗಳ ಬಗ್ಗೆ ರಾಜ್ಯದ ವಾದ ಮಂಡಿಸುವ ತಜ್ಞರೊಂದಿಗೆ ಸಭೆ ಮಾಡುತ್ತಿದ್ದೇವೆ. ನಮ್ಮ ಕಾನೂನು ತಜ್ಞರ ತಂಡ ಕೂಡ ವರ್ಚುವಲ್ ಸಭೆಯಲ್ಲಿ ಭಾಗವಹಿಸುತ್ತಿದೆ. ನಮ್ಮ ಜಲವ್ಯಾಜ್ಯಗಳನ್ನು ಪರಿಣಾಮಕಾರಿಯಾಗಿ ಗಂಭೀರವಾಗಿ ಪರಿಹಿಸಿಕೊಳ್ಳುವ ನಿಟ್ಟಿನಲ್ಲಿ ಸಭೆಯಲ್ಲಿ ಚರ್ಚೆ ಮಾಡುತ್ತೇವೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಹಾಲು, ನೀರು, ವಿದ್ಯುತ್ ದರ ಏರಿಕೆ ಪ್ರಸ್ತಾಪಗಳ ವಿಚಾರಕ್ಕೆ ಉತ್ತರಿಸಿದ ಅವರು, ದರ ಏರಿಕೆಗಳ ಬಗ್ಗೆ ಯಾವುದೇ ತೀರ್ಮಾನಗಳಾಗಿಲ್ಲ. ಅವಸರದ ನಿರ್ಧಾರಗಳನ್ನು ಸರ್ಕಾರ ಕೈಗೊಳ್ಳಲ್ಲ. ಎಲ್ಲ ಆಯಾಮಗಳಿಂದಲೂ ಚರ್ಚೆ ನಡೆಸುತ್ತೇವೆ. ಆಡಳಿತದಲ್ಲಿ ದರ ಏರಿಕೆ ಪ್ರಸ್ತಾಪಗಳು ಬರುವುದು ಸಹಜ ಎಂದರು.
ಇದನ್ನೂ ಓದಿ:ಹೈಕಮಾಂಡ್ ಜೊತೆ ಸಿಎಂ ಚರ್ಚೆಯ ಬಳಿಕ ಸಂಪುಟ ಪುನಾರಚನೆ ಡೇಟ್ ಫಿಕ್ಸ್: ಕಾರಜೋಳ
ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರಿಗೆ ಕೋವಿಡ್ ಪಾಸಿಟಿವ್ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ ಬೊಮ್ಮಾಯಿ, ಮಾಜಿ ಪ್ರಧಾನಿ ದೇವೇಗೌಡರ ಜತೆ ಮಾತಾಡುತ್ತೇನೆ. ಅವರ ಕುಟುಂಬ, ಮಣಿಪಾಲ್ ವೈದ್ಯರ ಜತೆಗೂ ಮಾತಾಡುತ್ತೇನೆ. ಈ ವಯಸ್ಸಲ್ಲೂ ಅವರು ಆರೋಗ್ಯವಾಗಿದ್ದಾರೆ. ಆದರೆ ಕೋವಿಡ್ ಯಾರಿಗೂ ಬಿಟ್ಟಿಲ್ಲ. ದೇವೇಗೌಡರಿಗೆ ಕೋವಿಡ್ ತೀವ್ರತೆ ಇರಲಿಕ್ಕಿಲ್ಲ ಎಂದರು.