ಶಿರ್ವ : ಕೋವಿಡ್ ಎರಡನೇ ಅಲೆಯನ್ನು ನಿಗ್ರಹಿಸಲು ಮುನ್ನೆಚ್ಚರಿಕೆ ಕ್ರಮವಾಗಿ ಸರಕಾರ ವೀಕೆಂಡ್ ಕರ್ಫ್ಯೂ ವಿಧಿಸಿರುವ ಹಿನ್ನೆಲೆಯಲ್ಲಿ ಶನಿವಾರ ಶಿರ್ವ ಪೇಟೆ,ಮೂಡುಬೆಳ್ಳೆ,ಪಡುಬೆಳ್ಳೆ ,ಬಂಟಕಲ್ಲು,ಸೂಡ ಪರಿಸರದಲ್ಲಿ ಎಲ್ಲಾ ಅಂಗಡಿ ಮುಂಗಟ್ಟುಗಳು, ಹೊಟೇಲು, ಬಾರ್ ಮತ್ತು ರೆಸ್ಟೋರೆಂಟ್‌ಗಳು ಬಂದ್ ಆಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬೆಳಗ್ಗಿನಿಂದ 10 ಗಂಟೆಯವರೆಗೆ ಶಿರ್ವ ಪೇಟೆಯಲ್ಲಿ ಅಗತ್ಯ ಸೇವೆಗಳಾದ ಹಾಲು, ತರಕಾರಿ,ಮೆಡಿಕಲ್, ಪೆಟ್ರೋಲ್ ಪಂಪ್,ಮೀನು ಮಾರುಕಟ್ಟೆ ತೆರೆದಿದ್ದು ವ್ಯಾಪಾರ ವಹಿವಾಟು ಕಡಿಮೆಯಾಗಿತ್ತು. ಶುಕ್ರವಾರವೇ ಜನರು ಅಗತ್ಯ ವಸ್ತುಗಳನ್ನು ಖರೀದಿಸಿದ್ದರಿಂದ ಜನಸಂಚಾರ ಕೂಡಾ ವಿರಳವಾಗಿತ್ತು. ಅಟೋಗಳು ಸ್ಟಾಂಡ್‌ನಲ್ಲಿದ್ದರೂ,ಬಸ್ಸು, ವಾಹನ,ಜನ ಸಂಚಾರವಿಲ್ಲದೆ ಪ್ರದೇಶವಿಡೀ ಬಿಕೋ ಅನ್ನುತ್ತಿತ್ತು.
ಸ್ವಚ್ಚತೆ ಕಾರ್ಯ ನಿರಾತಂಕ :
ವೀಕೆಂಡ್ ಕರ್ಫ್ಯೂ ಜಾರಿಯಲ್ಲಿದ್ದರೂ ಶಿರ್ವ ಗ್ರಾಮ ಪಂಚಾಯತ್‌ನ ಪೌರ ಕಾರ್ಮಿಕರು ಎಂದಿನಂತೆ ಸ್ವಚ್ಚತೆಯ ಕಾರ್ಯ ನಿರ್ವಹಿಸುತ್ತಿದ್ದಾರೆ. ಗ್ರಾಮ ಪಂಚಾಯತ್ ಕಸ ವಿಲೇವಾರಿ ವಾಹನದಲ್ಲಿ ಕೋವಿಡ್ ಮಾರ್ಗಸೂಚಿಯ ಬಗ್ಗೆ ಮೈಕ್ ಮೂಲಕ ಗ್ರಾಮಸ್ಥರಿಗೆ ಜಾಗೃತಿ ಮೂಡಿಸುತ್ತಾ ಬೆಳಗ್ಗಿನ ಹೊತ್ತು ವಿವಿಧೆಡೆ ತೆರಳಿ ಕಸ ತ್ಯಾಜ್ಯ ತ್ಯಾಜ್ಯ ಸಂಗ್ರಹಿಸಿ ತಮ್ಮ ಪಾಲಿನ ಕರ್ತವ್ಯ ನಿಭಾಯಿಸುತ್ತಿದ್ದಾರೆ.
ಗ್ರಾಮ ಪಂಚಾಯತಿಯ ವಿವಿಧ ವಾರ್ಡ್‌ಗಳಿಗೆ ತೆರಳಿ ಅಲ್ಲಿ ಸಂಗ್ರಹವಾಗುವ ಹಸಿ ಮತ್ತು ಒಣ ಕಸಗಳನ್ನು ಗ್ರಾಮ ಪಂಚಾಯತ್ ನಿಗದಿಪಡಿಸಿರುವ ಕಾನೂನಿಂತೆಯೇ ಸಂಗ್ರಹಿಸಿ ಮಟ್ಟಾರು ತ್ಯಾಜ್ಯ ನಿರ್ವಹಣಾ ಘಟಕದಲ್ಲಿ ಹಾಕುತ್ತಿದ್ದು ಅಲ್ಲಿನ ಕಾರ್ಮಿಕರು ವಿಲೇವಾರಿ ನಡೆಸುತ್ತಿದ್ದಾರೆ.