Advertisement

ವಾರಾಂತ್ಯ ಕರ್ಫ್ಯೂ- ಶನಿವಾರ ಶಾಲಾ ಕಾಲೇಜಿಗೆ ರಜೆ; ಉಡುಪಿ ಡಿಸಿ ಆದೇಶದಲ್ಲೇನಿದೆ?

10:36 AM Jan 07, 2022 | Team Udayavani |

ಉಡುಪಿ : ಶುಕ್ರವಾರ ರಾತ್ರಿಯಿಂದ ಜಿಲ್ಲೆಯಲ್ಲಿ ವಾರಾಂತ್ಯದ ಕರ್ಫ್ಯೂ ಜಾರಿಯಾಗುತ್ತಿರುವುದರಿಂದ ಶನಿವಾರ ಶಾಲಾ ಕಾಲೇಜುಗಳಿಗೆ ರಜೆ ಇರಲಿದೆ ಮತ್ತು ಪೂರ್ವ ನಿಗದಿತ ಧಾರ್ಮಿಕ, ಸಾಂಪ್ರದಾಯಿಕ ಆಚರಣೆಗೆ ಅವಕಾಶವಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾ ರಾವ್‌ ಎಂ. ಮಾಹಿತಿ ನೀಡಿದರು.

Advertisement

ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ಫ್ಯೂ ಸಂದರ್ಭ ಜಾತ್ರೆ ಅಥವಾ ದೊಡ್ಡ ಸಂಖ್ಯೆಯಲ್ಲಿ ಜನ ಸೇರಬಹುದಾದ ಯಾವುದೇ ಕಾರ್ಯಕ್ರಮಗಳಿಗೆ ಅವಕಾಶ ಇಲ್ಲ. ಪೂರ್ವ ನಿಗದಿಯಾಗಿರುವ ಧಾರ್ಮಿಕ, ಸಾಂಪ್ರದಾಯಿಕ ಆಚರಣೆಯನ್ನು ಕೊರೊನಾ ನಿಯಮ ಪಾಲಿಸಿಕೊಂಡು, ಜನ ಸೇರದಂತೆ ಎಚ್ಚರ ವಹಿಸಿ ನಡೆಸಲು ಅವಕಾಶವಿದೆ. ಹಾಸ್ಟೆಲ್‌ಗ‌ಳಲ್ಲೂ ಕೊರೊನಾ ಸುರಕ್ಷತೆಗೆ ಎಲ್ಲ ರೀತಿಯ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದರು.

ಖಾಸಗಿ ಆಸ್ಪತ್ರೆ ಜತೆ ಚರ್ಚೆ
ಸೋಂಕಿತರ ಚಿಕಿತ್ಸೆಗಾಗಿ ಬೆಡ್‌ಗಳನ್ನು ಕಾಯ್ದಿರಿಸಲು ಖಾಸಗಿ ಆಸ್ಪತ್ರೆಗಳ ಜತೆ ಮಾತುಕತೆ ನಡೆಸುತ್ತಿದ್ದೇವೆ. ಸೋಂಕಿತರಿಗೆ ಎಲ್ಲ ಆಸ್ಪತ್ರೆಗಳಲ್ಲೂ ಶೇ. 30ರಿಂದ ಶೇ. 50ರಷ್ಟು ಬೆಡ್‌ಗಳನ್ನು ಮೀಸಲಿಡಲು ಸೂಚನೆ ನೀಡಲಾಗಿದೆ. ಐಸಿಯು ಬೆಡ್‌, ವೆಂಟಿಲೇಟರ್‌ ಹಾಗೂ ಆಕ್ಸಿಜನ್‌ ಸೌಲಭ್ಯವಿರುವ ಬೆಡ್‌ ಹೀಗೆ ಎಲ್ಲ ಮಾದರಿಯ ಬೆಡ್‌ಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳುತ್ತಿದ್ದೇವೆ. ಈ ಸಂಬಂಧ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರೊಂದಿಗೆ ಶೀಘ್ರ ಇನ್ನೊಂದು ಸಭೆ ನಡೆಸಲಿದ್ದೇವೆ. ಬೇರೆ ರೋಗಿಗಳಿಗೂ ಸಮಸ್ಯೆಯಾಗದಂತೆ ಕ್ರಮ ತೆಗೆದುಕೊಳ್ಳುತ್ತಿದ್ದೇವೆ ಎಂದು ಮಾಹಿತಿ ನೀಡಿದರು.

ವಿದ್ಯಾರ್ಥಿಗಳಿಗೆ ತರಬೇತಿ
ಸೋಂಕಿತರ ಮಾಹಿತಿ ಪಡೆಯುವುದು, ಅವರಿಗೆ ಅಗತ್ಯ ಸೇವೆಯ ಮಾಹಿತಿ ನೀಡುವುದು ಸೇರಿದಂತೆ ವಿವಿಧ ಕಾರ್ಯಗಳಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ಹಂತದಲ್ಲಿಯೇ ವಿದ್ಯಾರ್ಥಿಗಳ ಸೇವೆಯನ್ನು ಬಸಳಿಕೊಳ್ಳಲು ನರ್ಸಿಂಗ್‌, ಆಯುಷ್‌ ಹಾಗೂ ಪಬ್ಲಿಕ್‌ ಹೆಲ್ತ್‌ ಕೋರ್ಸ್‌ನ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಜ.10ರಂದು ತರಬೇತಿ ನೀಡಲಿದ್ದೇವೆ. ಸುಮಾರು 278 ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುವುದು. ತರಬೇತಿ ಪಡೆದ ವಿದ್ಯಾರ್ಥಿಗಳಲ್ಲಿ ಪ್ರತಿ ನಾಲ್ಕು ಮಂದಿಯನ್ನು ಒಂದೊಂದು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ನಿಯೋಜನೆ ಮಾಡಲಾಗುತ್ತದೆ. ಈ ವಿದ್ಯಾರ್ಥಿಗಳ ತಂಡವು ವರ್ಚುವಲ್‌ ಮೂಲಕವೇ ಕಾರ್ಯನಿರ್ವಹಿಸಲಿದ್ದಾರೆ ಎಂದು ಹೇಳಿದರು. ಜಿ. ಪಂ. ಸಿಇಒ ಡಾ| ವೈ. ನವೀನ್‌ ಭಟ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌. ವಿಷ್ಣುವರ್ಧನ್‌ ಉಪಸ್ಥಿತರಿದ್ದರು.

ಪರೀಕ್ಷೆ ಬರೆಯಲು ಅವಕಾಶ
ಶನಿವಾರ ಶಾಲಾ ಕಾಲೇಜು ರಜೆ ಇದ್ದರೂ, ಪೂರ್ವ ನಿಗದಿಯಾಗಿರುವ ಪರೀಕ್ಷೆಗಳನ್ನು ನಡೆಸಲು ಅವಕಾಶವಿದೆ. ಅದರಂತೆ ಜ.19ರಂದು ಕಿಶೋರ್‌ ವೈಜ್ಞಾನಿಕ್‌ ಪ್ರೋತ್ಸಾಹಣ್‌ ಯೋಜನೆಗೆ ಸಂಬಂಧಿಸಿದ ಪರೀಕ್ಷೆ ನಡೆಯಲಿದೆ. ಮಣಿಪಾಲದ ಎರಡು ಕೇಂದ್ರದಲ್ಲಿ 288 ವಿದ್ಯಾರ್ಥಿಗಳು ಹಾಗೂ ಕಾರ್ಕಳದ ಭುವನೇಂದ್ರ ಕಾಲೇಜಿಲ್ಲಿ 70 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಇವರಿಗೆ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಮಾಹಿತಿ ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next