ಚಿಕ್ಕಮಗಳೂರು: ಕೋವಿಡ್-19 ನಿಯಂತ್ರಣದ ಉದ್ದೇಶದಿಂದ ವಾರಂತ್ಯದ ಕರ್ಫ್ಯೂ ಜಾರಿ ಮಾಡಿರುವ ರಾಜ್ಯ ಸರಕಾರದ ಕ್ರಮಕ್ಕೆ ಕಾಫಿನಾಡಿನಲ್ಲಿ ಉತ್ತಮ ಬೆಂಬಲ ವ್ಯಕ್ತವಾಗಿದೆ.
ಕರ್ಫ್ಯೂ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ನಗರ ಸೇರಿದಂತೆ ಇಡೀ ಜಿಲ್ಲೆಯಲ್ಲಿ ಜನಜೀವನ ಸ್ತಬ್ಧಗೊಂಡಿದೆ. ಸಾರ್ವಜನಿಕರು ಮನೆಯಿಂದ ಹೊರಬಾರದೇ ಮನೆಗಳಲ್ಲೇ ಲಾಕ್ ಆಗಿದ್ದಾರೆ. ವಾಹನ ಸಂಚಾರವೂ ಸಂಪೂರ್ಣ ಬಂದ್ ಆಗಿದ್ದು, ಶನಿವಾರ ನಗರದ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಕೆಲವೇ ಕೆಲ ಬಸ್ ಗಳು ಸಂಚಾರ ನಡೆಸಿದ್ದು, ಉಳಿದಂತೆ ಬಹುತೇಕ ಬಸ್ ಗಳು ಡಿಪೋಗಳಿಂದ ಹೊರ ಬಂದಿಲ್ಲ.
ಚಿಕ್ಕಮಗಳೂರು ನಗರದ ಪ್ರಮುಖ ರಸ್ತೆಗಳು ಖಾಲಿ ಖಾಲಿಯಾಗಿದ್ದು, ಜನಸಂಚಾರ ವಾಹನಗಳ ಸಂಚಾರ ಇಲ್ಲದೇ ರಸ್ತೆಗಳು ಬಿಕೋ ಎನ್ನುತ್ತಿವೆ.
ಇದನ್ನೂ ಓದಿ:ರಾಜ್ಯಾದ್ಯಂತ ಮಾರುಕಟ್ಟೆಗಳು ಬಂದ್, ಇನ್ನು ಕಠಿಣ ನಿಯಮ ಜಾರಿ
ಶನಿವಾರ ಬೆಳಗ್ಗೆ6 ರಿಂದ 10ರವರೆಗೆ ಅಗತ್ಯ ವಸ್ತುಗಳ ಅಂಗಡಿ ಮುಂಗಟ್ಟುಗಳು ತೆರೆದುಕೊಂಡು ವ್ಯಾಪಾರ ವಹಿವಾಟು ನಡೆಸಿದವು.
ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲೂ ಜನಸಂಚಾರ, ವಾಹನ ಸಂಚಾರ ಸ್ತಬ್ಧಗೊಂಡಿದ್ದು, ಆಸ್ಪತ್ರೆ, ಮೆಡಿಕಲ್, ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ. ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಪೊಲೀಸರು ಬಂದೋಬಸ್ತ್ ಕರ್ತವ್ಯ ನಿರ್ವಹಿಸುತ್ತಿದ್ದು, ಸುಖಾಸುಮ್ಮನೆ ಓಡಾಡುವ ಜನರು, ವಾಹನಗಳ ನಿಯಂತ್ರಣಕ್ಕೆ ಮುಂದಾಗಿದ್ದಾರೆ.
ಒಟ್ಟಾರೆ ವಾರಂತ್ಯದ ಕರ್ಪ್ಯೂ ಕ್ರಮಕ್ಕೆ ಕಾಫಿನಾಡಿನ ಜನರು ಉತ್ತಮ ಬೆಂಬಲ ನೀಡುತ್ತಿದ್ದು, ಕೊರೊನಾ ನಿಯಂತ್ರಣಕ್ಕೆ ಸಾರ್ವಜನಿಕರು ಸ್ವಯಂ ನಿರ್ಬಂಧ ಹಾಕಿಕೊಂಡು ಸರಕಾರಕ್ಕೆ ಸಾಥ್ ನೀಡುತ್ತಿದ್ದಾರೆ.