ಉಡುಪಿ/ ಮಂಗಳೂರು: ಕೊರೊನಾ ಮೊದಲ ಮತ್ತು ದ್ವಿತೀಯ ಅಲೆಗಳಿಂದ ವಿಧಿಸಲಾಗಿದ್ದ ಲಾಕ್‌ಡೌನ್, ನಿರ್ಬಂಧಗಳಿಂದ ವ್ಯಾಪಾರ ವಹಿ ವಾಟು, ವಾಣಿಜ್ಯ ವಲಯ, ಸ್ಥಳೀಯ ಆರ್ಥಿ ಕತೆ ನಲುಗಿ ಹೋಗಿದ್ದು, ಈಗಷ್ಟೇ ಚೇತರಿಸಿ ಕೊಳ್ಳುತ್ತಿದೆ. ಹಬ್ಬಗಳ ಋತು ಹೊಸ್ತಿಲಿನಲ್ಲಿದೆ, ಆರ್ಥಿಕತೆ ಪುನಶ್ಚೇತನ ಪಡೆಯುವ ನಿರೀಕ್ಷೆಗಳಿವೆ. ಆದರೆ ಇದರ ನಡುವೆಯೇ ವಾರಾಂತ್ಯ ಕರ್ಫ್ಯೂ ಹೇರಿರುವುದು ಚಿಗುರಿನ ಮೇಲೆ ಕುದಿನೀರು ಎರೆಯುವಂಥ ಕ್ರಮ ಎಂಬ ಅಭಿಪ್ರಾಯ ಉಭಯ ಜಿಲ್ಲೆಗಳ ಜನಸಾಮಾನ್ಯರು, ವಾಣಿಜ್ಯ ವಲಯದಿಂದ ವ್ಯಕ್ತವಾಗಿದೆ.
ಪ್ರಸ್ತುತ ಲಸಿಕೆ ವಿತರಣೆ ವೇಗವಾಗಿ ನಡೆಯುತ್ತಿದೆ. ಕೆಲವು ವಾರಗಳನ್ನು ಗಮ ನಿಸಿದರೆ ಕೊರೊನಾ ಪ್ರಕರಣಗಳ ಸಂಖ್ಯೆ ಗಮನಾರ್ಹವಾಗಿ ಏರಿಕೆಯಾಗಿಲ್ಲ. ಹಿಂದಿನ ಎರಡು ಅಲೆಗಳನ್ನು ಅನುಭವಿಸಿರುವ ಜನರು ಕೂಡ ಜಾಗೃತರಾಗಿದ್ದು, ಎಚ್ಚರದಿಂದ ಇದ್ದಾರೆ, ನಿಯಮಗಳನ್ನು ಪಾಲಿಸುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ವಾರಾಂತ್ಯ ಲಾಕ್‌ಡೌನ್ ಹೇರಿ ಭಯಪಡಿಸುವುದು ಸರಿಯಲ್ಲ ಎಂಬುದು ಎರಡೂ ಜಿಲ್ಲೆಗಳಲ್ಲಿ ಸರ್ವತ್ರ ವ್ಯಕ್ತವಾಗಿರುವ ಅಭಿಪ್ರಾಯ. ಇದೇ ಕಾರಣದಿಂದ ವಾರಾಂತ್ಯ ಕರ್ಫ್ಯೂ ಹೇರಿರುವ ಸರಕಾರದ ನಿರ್ಧಾರವನ್ನು ಎರಡೂ ಜಿಲ್ಲೆಗಳ ಜನರು ಒಲ್ಲದ ಮನಸ್ಸಿ ನಿಂದ ಸ್ವೀಕರಿಸಿರುವುದು ಕಂಡುಬಂದಿದೆ.
ಕೇರಳದಲ್ಲಿ ಪಾಸಿಟಿವಿಟಿ ದರ ಹೆಚ್ಚಿದ್ದರೂ ಉಡುಪಿ ಜಿಲ್ಲೆಗೆ ಅದು ಗಡಿ ಜಿಲ್ಲೆಯಲ್ಲ. ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವಿಟಿ ದರ ಶೇ. 1.5 ಇರುವಾಗಲೂ ವಾರಾಂತ್ಯ ಕರ್ಫ್ಯೂ ಅಗತ್ಯವಿದೆಯೇ ಎಂಬ ಪ್ರಶ್ನೆ ಎಲ್ಲೆಡೆ ವ್ಯಕ್ತವಾಗುತ್ತಿತ್ತು.
ಜನಪ್ರತಿನಿಧಿಗಳು ಕೂಡ ವಾರಾಂತ್ಯ ಕರ್ಫ್ಯೂಗೆ ಬಲವಾದ ವಿರೋಧ ವ್ಯಕ್ತಪಡಿ ಸಿದ್ದು, ಪ್ರಾಯಃ ಮುಂದಿನ ವಾರಾಂತ್ಯ ಕರ್ಫ್ಯೂ ರದ್ದಾಗುವ ಸಾಧ್ಯತೆಗಳಿವೆ.
ವಾರದ ಮಟ್ಟಿಗೆ ಸಹಕರಿಸಿದ ವರ್ತಕರು :
ದಕ್ಷಿಣ ಕನ್ನಡದಲ್ಲಿ ಶುಕ್ರವಾರ ವಾರಾಂತ್ಯ ಕರ್ಫ್ಯೂ ಮುಂದುವರಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದ ಕೆಲವು ವರ್ತಕರು ಜಿಲ್ಲಾಧಿಕಾರಿಗಳ ಕೋರಿಕೆಗೆ ಮನ್ನಣೆ ನೀಡಿ ಒಂದು ವಾರದ ಮಟ್ಟಿಗೆ ಜಿಲ್ಲಾಡಳಿತಕ್ಕೆ ಸಹಕಾರ ನೀಡಲು ನಿರ್ಧರಿಸಿದ್ದು, ಶನಿವಾರ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿದ್ದರು.
ಜಿಲ್ಲಾಧಿಕಾರಿಗಳ ಕೋರಿಕೆಗೆ ಸ್ಪಂದಿಸಿ ಈ ಬಾರಿಯ ವಾರಾಂತ್ಯ ಕರ್ಫ್ಯೂವಿಗೆ ಸಹಕರಿಸಿದ್ದೇವೆ. ಮುಂದಿನ ವಾರ ವೀಕೆಂಡ್ ಕರ್ಫ್ಯೂ ರದ್ದು ಮಾಡಿ ನಮಗೆ ವ್ಯಾಪಾರಕ್ಕೆ ಅವಕಾಶ ನೀಡುತ್ತಾರೆ ಎಂಬ ಭರವಸೆ ಇದೆ ಎಂದು ಅವಿಭಜಿತ ಜಿಲ್ಲೆಗಳ ಟೆಕ್ಸ್‌ಟೈಲ್ಸ್ ಮತ್ತು ಫುಟ್‌ವೇರ್ ವರ್ತಕರ ಸಂಘದ ಅಧ್ಯಕ್ಷ ಸಂತೋಷ್ ಕಾಮತ್ ಅವರು ಪ್ರತಿಕ್ರಿಯಿಸಿದ್ದಾರೆ.