Advertisement

ಉಡುಪಿ : 4 ತಿಂಗಳ ಬಳಿಕ ಇಂದಿನಿಂದ ವಾರಾಂತ್ಯ ಕರ್ಫ್ಯೂ

07:19 PM Jan 06, 2022 | Team Udayavani |

ಉಡುಪಿ: ಸುಮಾರು ನಾಲ್ಕು ತಿಂಗಳ ಅನಂತರ ವಾರಾಂತ್ಯದ ಕರ್ಫ್ಯೂ ಶುಕ್ರವಾರದಿಂದಲೇ ಶುರುವಾಗಲಿದೆ. ಶುಕ್ರವಾರ ರಾತ್ರಿ 8 ಗಂಟೆಯಿಂದ ಸೋಮವಾರ ಬೆಳಗ್ಗೆ 5 ಗಂಟೆಯವರೆಗೆ ವಾರಾಂತ್ಯದ ಕರ್ಫ್ಯೂ ಜಾರಿಯಲ್ಲಿರಲಿದೆ. ತುರ್ತು ಸೇವೆಗಳಿಗೆ ಯಾವುದೇ ನಿರ್ಬಂಧ ಇರುವುದಿಲ್ಲ. ಬಸ್‌ ಸಂಚಾರ ಎಂದಿಗಿಂತಲೂ ಕಡಿಮೆ ಇರಲಿದೆ.

Advertisement

ಪಾಸಿಟಿವಿಟಿ ದರ ಶೇ.1
ಜಿಲ್ಲೆಯಲ್ಲಿ ಕಳೆದ ಒಂದು ವಾರದಲ್ಲಿ ಕೊರೊನಾ ಪಾಸಿಟಿವ್‌ ಪ್ರಕರಣ ಹೆಚ್ಚಾಗಿದೆ. ಪಾಸಿಟಿವಿಟಿ ದರ ಶೇ.1ರಷ್ಟಾಗಿದೆ. ಸಾರ್ವಜನಿಕರು ಹೆಚ್ಚು ಎಚ್ಚರ ವಹಿಸುವ ಜತೆಗೆ ಕೊರೊನಾ ನಿಯಮ ಪಾಲಿಸಬೇಕಾಗಿದೆ. ಕೊರೊನಾ ಸೋಂಕಿತರ ಚಿಕಿತ್ಸೆಗಾಗಿ ಆಸ್ಪತ್ರೆಗಳಲ್ಲಿ ಬೆಡ್‌ಗಳನ್ನು ಮೀಸಲಿಡುವ ಪ್ರಕ್ರಿಯೆಯನ್ನು ಜಿಲ್ಲಾಡಳಿತ ಆರಂಭಿಸಿದೆ.

ಅಗತ್ಯ ವಸ್ತುಗಳ ಮಾರಾಟಕ್ಕೆ ಅವಕಾಶ
ವಾರಾಂತ್ಯದ ಕರ್ಫ್ಯೂ ವೇಳೆಯಲ್ಲಿ ಹಣ್ಣು, ತರಕಾರಿ, ಮೀನು, ಮಾಂಸ, ದಿನಸಿ ಸೇರಿದಂತೆ ಅಗತ್ಯ ವಸ್ತುಗಳ ಮಾರಾಟಕ್ಕೆ ಯಾವುದೇ ನಿರ್ಬಂಧ ಇರುವುದಿಲ್ಲ. ಆದರೆ, ಮಾರಾಟದ ಸಂದರ್ಭದಲ್ಲಿ ಕಡ್ಡಾಯವಾಗಿ ಕೊರೊನಾ ನಿಯಮಗಳನ್ನು ಪಾಲನೆ ಮಾಡಬೇಕು. ದಿನಸ ಅಂಗಡಿಗಳು ತೆರೆಯಲು ಅನುಮತಿಯಿದೆ. ಹೊಟೇಲ್‌, ರೆಸ್ಟೋರೆಂಟ್‌ಗಳಲ್ಲಿ ಪಾರ್ಸೆಲ್‌ ಸೇವೆ ಮಾತ್ರ ಅವಕಾಶವಿದೆ. ಮದ್ಯದ ಅಂಗಡಿಗಳನ್ನು ತೆರೆಯಲು ಅನುಮತಿ ಇರುವುದಿಲ್ಲ. ಸಾರ್ವಜನಿಕರು ಅಗತ್ಯವಸ್ತು ಖರೀದಿಗೆ ದಿನಸಿ ಅಂಗಡಿಗೆ ಹೋಗುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು ಮತ್ತು ಅಂಗಡಿಯವರು ಕೂಡ ಕೊರೊನಾ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕು.

ಕಳೆದ 14 ದಿನದಲ್ಲಿ ಶೇ.0.7ರಷ್ಟಿದ್ದ ಪಾಸಿಟಿವಿಟಿ ದರ ಈಗ ಶೇ.1ರಷ್ಟಾಗಿದೆ. ಜಿಲ್ಲೆಯಲ್ಲಿ ನಿತ್ಯ 4800ಕ್ಕೂ ಅಧಿಕ ಮಂದಿಗೆ ಕೊರೊನಾ ಪರೀಕ್ಷೆ ನಡೆಯುತ್ತಿದೆ. ಸದ್ಯ 427 ಸಕ್ರಿಯ ಪ್ರಕರಣವಿದೆ. ದಿನದಿಂದ ದಿನಕ್ಕೆ ಕೊರೊನಾ ಪ್ರಕರಣ ಹೆಚ್ಚಾಗುತ್ತಿದೆ. ಕೊರೊನಾ ಸಂಬಂಧ ಸಾರ್ವಜನಿಕರು ಇನ್ನಷ್ಟು ಎಚ್ಚರಿಕೆ ವಹಿಸಬೇಕು. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಸ್ಯಾನಿಟೈಜೇಶನ್‌ ಮಾಡಿಕೊಳ್ಳುವುದು ಸೇರಿದಂತೆ ಕೊರೊನಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗಿದೆ. ಕೊರೊನಾ ಲಸಿಕೆ ಪಡೆಯದೇ ಇರುವವರು ಲಸಿಕೆ ಪಡೆಯಬೇಕು. ಮೊದಲ ಡೋಸ್‌ ಪಡೆದು, ಅವಧಿ ಪೂರ್ಣವಾಗಿರುವವರು ಎರಡನೇ ಡೋಸ್‌ ಪಡೆಯಬೇಕು. 18 ವರ್ಷ ಮೇಲ್ಪಟ್ಟವರಲ್ಲಿ ಈಗಾಗಲೇ ಜಿಲ್ಲೆಯಲ್ಲಿ ಶೇ.97.22ರಷ್ಟು ಮಂದಿ ಮೊದಲ ಡೋಸ್‌ ಹಾಗೂ ಶೇ.84.08 ಮಂದಿ ಎರಡನೇ ಡೋಸ್‌ ಪಡೆದಿದ್ದಾರೆ. 15ರಿಂದ 18 ವರ್ಷದ 23,924 ಮಕ್ಕಳು (ಶೇ.44.67) ಕೋವ್ಯಾಕ್ಸಿನ್‌ ಲಸಿಕೆ ಪಡೆದಿದ್ದಾರೆ.

ಸೀಮಿತ ಸಂಖ್ಯೆಯ ಬಸ್‌ಗಳ ಸಂಚಾರ
ವಾರಾಂತ್ಯದ ಕರ್ಫ್ಯೂ ಸಂದರ್ಭದಲ್ಲಿ ಸಣ್ಣ, ಮಧ್ಯಮ ಹಾಗೂ ದೊಡ್ಡ ಕೈಗಾರಿಕೆಗಳು, ವಿವಿಧ ಉದ್ಯಮಗಳು, ಖಾಸಗಿ ಸಂಸ್ಥೆಗಳು, ವಿವಿಧ ಮಗಳಿಗೆಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ. ಕಾರ್ಮಿಕರು ಕೆಲಸಕ್ಕೆ ಬಂದು ಹೋಗಲು ಅನುಕೂಲವಾಗುವಂತೆ ಮತ್ತು ಸಾರ್ವಜನಿಕರ ತುರ್ತು ಸೇವೆಗೆ ಪೂರಕವಾಗಿ ಜಿಲ್ಲೆಯಲ್ಲಿ ಸೀಮಿತ ಸಂಖ್ಯೆಯ ಬಸ್‌ಗಳ ಓಡಾಟ ಇರಲಿದೆ. ಸಾಮಾನ್ಯ ದಿನಗಳಲ್ಲಿ ಇರುವಷ್ಟು ಬಸ್‌ ಸೇವೆ ವಾರಾಂತ್ಯದಲ್ಲಿ ಇರುವುದಿಲ್ಲ. ಈ ಬಗ್ಗೆ ಜಿಲ್ಲಾಡಳಿತ ಮತ್ತು ಸಾರಿಗೆ ಇಲಾಖೆಯ ಅಧಿಕಾರಿಗಳು ಮಾತುಕತೆಯನ್ನು ನಡೆಸಲಿದ್ದು, ಬೇಡಿಕೆ ಆಧರಿಸಿ ಬಸ್‌ ಸೇವೆ ಒದಗಿಸುವ ಸಾಧ್ಯತೆಯಿದೆ. ಆಟೋ, ಟ್ಯಾಕ್ಸಿ ಇತ್ಯಾದಿ ಸೇವೆಗಳ ಬಗ್ಗೆ ಯಾವುದೇ ಸ್ಪಷ್ಟ ನಿರ್ಬಂಧ ಇಲ್ಲದೇ ಇರುವುದರಿಂದ ಆಟೋ, ಟ್ಯಾಕ್ಸಿ ಸೇವೆಗಳು ವಿರಳವಾಗಿ ಲಭ್ಯ ಇರಬಹುದು. ರೈಲು ಹಾಗೂ ವಿಮಾನ ಪ್ರಯಾಣ ಮಾಡುವವರ ಅಗತ್ಯ ದಾಖಲೆಗಳೊಂದಿಗೆ ಹೋಗಬೇಕು. ಪರಿಶೀಲನೆ ವೇಳೆ ಟಿಕೆಟ್‌ ಅಥವಾ ದಾಖಲೆ ತೋರಿಸಬೇಕಾಗುತ್ತದೆ.

Advertisement

ಕಾರ್ಯಪಡೆಗಳು ಸಕ್ರಿಯ:
ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಗ್ರಾ.ಪಂ. ಸಹಿತವಾಗಿ ಜಿಲ್ಲಾಡಳಿತದ ವರೆಗೂ ವಿವಿಧ ಸ್ತರದಲ್ಲಿ ಈ ಹಿಂದೆ ರಚಿಸಿದ್ದ ಕಾರ್ಯಪಡೆಗಳು ಈಗ ಪುನಃ ಸಕ್ರಿಯಗೊಂಡಿದೆ. ಅಲ್ಲದೆ, ಸ್ಥಳೀಯ ಸಂಸ್ಥೆಗಳ ಮೂಲಕ ಮಾಸ್ಕ್ ಹಾಕದವರ ಮೇಲೆ ದಂಡ ವಿಧಿಸುವ ಪ್ರಕ್ರಿಯೆಯನ್ನು ಜಿಲ್ಲಾಡಳಿತ ಚುರುಕುಗೊಳಿಸಿದೆ.

ಕೊರೊನಾ ನಿಯಮ ಪಾಲಿಸಿ
ಕೊರೊನಾ ಪ್ರಕರಣ ಹೆಚ್ಚಾಗುತ್ತಿರುವುದರಿಂದ ಜನ ಸಾಮನ್ಯರನ್ನು ಕೊರೊನಾ ನಿಯಮ ಕಡ್ಡಾಯವಾಗಿ ಪಾಲಿಸುವ ಜತೆಗೆ ಹೆಚ್ಚೆಚ್ಚು ಎಚ್ಚರ ವಹಿಸಬೇಕು. ವಾರಾಂತ್ಯದ ಕರ್ಫ್ಯೂ ಸಂದರ್ಭದಲ್ಲಿ ಅನಗತ್ಯ ಸಂಚಾರ, ಓಡಾಟ ಮಾಡುವುದು ಸರಿಯಲ್ಲ. ಕೂರ್ಮಾರಾವ್‌ ಎಂ., ಜಿಲ್ಲಾಧಿಕಾರಿ, ಉಡುಪಿ

ಪೊಲೀಸ್‌ ಇಲಾಖೆಯಿಂದ ಎಲ್ಲ ಕ್ರಮ
ರಾತ್ರಿ ಕರ್ಫ್ಯೂ ಸಂಬಂಧ ಈಗಾಗಲೇ ರಚಿಸಿರುವ 25 ಚೆಕ್‌ಪೋಸ್ಟ್‌ ಹಾಗೂ 46 ಪಾಕೆಟಿಂಗ್‌ ಪಾಯಿಂಟ್‌ಗಳು ವಾರಾಂತ್ಯದ ಕರ್ಫ್ಯೂ ಸಂದರ್ಭದಲ್ಲೂ ಕಾರ್ಯನಿರ್ವಹಿಸಲಿದೆ. ಪೊಲೀಸ್‌ ಇಲಾಖೆಯಿಂದ ಎಲ್ಲ ರೀತಿಯ ಕ್ರಮ ತೆಗೆದುಕೊಳ್ಳಲಾಗುತ್ತದೆ. -ಎನ್‌.ವಿಷ್ಣುವರ್ಧನ್‌, ಎಸ್‌ಪಿ, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next