Advertisement

ಇಂದಿನಿಂದ ಮದ್ವೆ ಸಂಭ್ರಮ

12:30 AM Mar 08, 2019 | |

ಒಂದು ಕಾಲವಿತ್ತು, ಊರಲ್ಲಿ ಯಾರ ಮನೆಯಲ್ಲಾದರೂ ಮದುವೆ ನಡೆಯುತ್ತದೆ ಎಂದರೆ ಇಡೀ ಊರಿಗೆ ಸಂಭ್ರಮ. ವಿವಿಧ ಶಾಸ್ತ್ರಗಳ ಮೂಲಕ ವಾರಗಟ್ಟಲೇ ಆ ಊರೇ ಸಂಭ್ರಮದೊಂದಿಗೆ ಮದುವೆಯಲ್ಲಿ ಭಾಗಿಯಾಗುತ್ತಿತ್ತು. ಆದರೆ, ಬರುಬರುತ್ತಾ ಮದುವೆಯ ಶೈಲಿ ಬದಲಾಗಿದೆ. ವಾರಗಟ್ಟಲೇ ನಡೆಯುತ್ತಿದ್ದ ಮದುವೆ ಎರಡು ದಿನಕ್ಕೆ ಇಳಿದಿದೆ. ಶಾಸ್ತ್ರಗಳು ಕೂಡಾ ಬದಲಾಗಿದೆ. ಆದರೆ, ನಿಮಗೆ ಹಳೆಯ ಮದುವೆ ಸಂಭ್ರಮವನ್ನು ನೋಡಬೇಕಾ, ಹಾಗಾದರೆ ಇಂದಿನಿಂದ ಆರಂಭವಾಗುವ “ಮದ್ವೆ’ಗೆ ಹೋಗಬಹುದು. “ಮದ್ವೆ’ ಎಂಬ ಚಿತ್ರ ಆರಂಭವಾಗಿರುವ ಬಗ್ಗೆ ನಿಮಗೆ ಗೊತ್ತಿರಬಹುದು. ಈ ಚಿತ್ರ ಇಂದು ಬಿಡುಗಡೆಯಾಗುತ್ತಿದೆ. ಹಿಂದು ಕೃಷ್ಣ ಈ ಚಿತ್ರದ ನಿರ್ದೇಶಕರು. ಶ್ರೀರಂಗಪಟ್ಟಣದ ರೈತ ಪರಮೇಶ್‌ “ಮದ್ವೆ’ ನಿರ್ಮಾಪಕರು.

Advertisement

ಎಲ್ಲಾ ಓಕೆ, “ಮದ್ವೆ’ಯಲ್ಲಿ ಏನು ಹೇಳಲು ಹೊರಟಿದ್ದಾರೆಂದು ನೀವು ಕೇಳಬಹುದು. ಹೆಸರಿಗೆ ತಕ್ಕಂತೆ ಮದುವೆ ಸಂಭ್ರಮದ ಬಗ್ಗೆ ಇಲ್ಲಿ ಹೇಳಲಾಗಿದೆ. ಅದು ಇವತ್ತಿನ ಶೈಲಿಯ ಮದುವೆಯಲ್ಲ, ಹಳೆಯ, ಗ್ರಾಮೀಣ ಶೈಲಿಯ ಮದುವೆ. ಈ ಬಗ್ಗೆ ಮಾತನಾಡುವ ನಿರ್ದೇಶಕ ಕೃಷ್ಣ, “ಹಿಂದೆಲ್ಲಾ ಮದುವೆ ಎಂದರೆ ಆ ಊರಿಗೆ ದೊಡ್ಡ ಸಂಭ್ರಮ. ನಾನಾ ಶಾಸ್ತ್ರ, ಸೋಬಾನ ಪದಗಳ ಮೂಲಕ ಮದ್ವೆಯನ್ನು ತುಂಬಾ ವಿಶಿಷ್ಟವಾಗಿ ಮಾಡುತ್ತಿದ್ದರು. ಆದರೆ, ಈಗ ರಾತ್ರಿ ರಿಸೆಪ್ಷನ್‌, ಬೆಳಗ್ಗೆ ಮದುವೆಗಷ್ಟೇ ಸೀಮಿತವಾಗಿದೆ. ಇದೇ ಕಾರಣದಿಂದ ನಮ್ಮ ಸಿನಿಮಾದಲ್ಲಿ ಮದುವೆಯ ಹಳೆಯ ಸಂಪ್ರದಾಯವನ್ನು ತುಂಬಾ ಸವಿಸ್ತಾರವಾಗಿ ತೋರಿಸಿದ್ದೇವೆ. ಸಿನಿಮಾ ನೋಡಿದಾಗ ಹಳೆಯ ಗ್ರಾಮೀಣ ಶೈಲಿಯ ಮದುವೆಯನ್ನು ಕಣ್ತುಂಬಿಕೊಂಡ ಅನುಭವವಾಗುತ್ತದೆ. ಇದು ರೆಗ್ಯುಲರ್‌ ಶೈಲಿಯ ಸಿನಿಮಾವಲ್ಲ. ನಾವಿಲ್ಲಿ ಸಿಂಕ್‌ ಸೌಂಡ್‌ ಬಳಸಿದ್ದೇವೆ. ಸಿನಿಮಾದಲ್ಲಿ ಹಳ್ಳಿಜನ ಕೂಡಾ ಕಾಣಿಸಿಕೊಂಡಿದ್ದಾರೆ’ ಎನ್ನುವುದು ನಿರ್ದೇಶಕರ ಮಾತು. ಚಿತ್ರ ಈಗಾಗಲೇ ಹಲವು ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು, ಮೆಚ್ಚುಗೆ ಕೂಡಾ ವ್ಯಕ್ತವಾಗಿದೆ. ನಿರ್ಮಾಪಕ ಪರಮೇಶ್‌ ಅವರಿಗೆ, ಇವತ್ತಿನ ಜನರೇಶನ್‌ಗೆ ಹಳೆಯ ಶೈಲಿಯ ಮದುವೆ ಶಾಸ್ತ್ರವನ್ನು ತೋರಿಸುವ ಕನಸಿತ್ತಂತೆ. ಆ ಕಾರಣದಿಂದಲೇ “ಮದ್ವೆ’ ಚಿತ್ರವನ್ನು ನಿರ್ಮಿಸಿದ್ದಾರೆ. ಜೊತೆಗೆ ಚಿತ್ರಕ್ಕೆ ಸಂಭಾಷಣೆ ಕೂಡಾ ಬರೆದಿದ್ದಾರೆ. 

ಚಿತ್ರದಲ್ಲಿ ಮಂಜು, ಆರೋಹಿ ಗೌಡ ಸೇರಿದಂತೆ ಪ್ರತಿಯೊಬ್ಬರು ತಮ್ಮ ಅನುಭವ ಹಂಚಿಕೊಂಡರು. ಚಿತ್ರಕ್ಕೆ ಪ್ರಶಾಂತ್‌ ಆರಾಧ್ಯ ಸಂಗೀತ, ಅಮರ್‌ನಾಥ್‌ ಛಾಯಾಗ್ರಹಣವಿದೆ.

Advertisement

Udayavani is now on Telegram. Click here to join our channel and stay updated with the latest news.

Next