ಬೆಂಗಳೂರು: ಅದೊಂದು ಸುಂದರವಾದ ಕುಟುಂಬ. ಕಳೆದ ಕೆಲವು ದಿನಗಳ ಹಿಂದೆ ಪತ್ನಿಗೆ ಕೊರೊನಾ ದೃಢವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಶೀಘ್ರ ಗುಣಮುಖರಾಗಿ ಮನೆಗೆ ಬಂದು ಕುಟುಂಬ ಸದಸ್ಯರೊಂದಿಗೆ ತಮ್ಮ ವಿವಾಹ ವರ್ಷಿಕೋತ್ಸವ ಆಚರಿಸಿಕೊಳ್ಳುವಂತಾಗಲಿ ಎಂದು ಹಿಂಗಿತ ವ್ಯಕ್ತಪಡಿಸಿದ್ದ ಕುಟುಂಬದ ಆಸೆಗೆ ಕೊರೊನಾ ತಣ್ಣೀರೆರೆಚಿದ ಘಟನೆ ನಗರದಲ್ಲಿ ನಡೆದಿದೆ.
ವಿವಾಹ ವಾರ್ಷಿಕೋತ್ಸವದ ದಿನದಂದೇ ಕೊರೊನಾ ಸೋಂಕಿತ ಮಹಿಳೆ ಸಾವನ್ನಪ್ಪಿದ್ದಾರೆ. ಮದುವೆ ವಾರ್ಷಿಕೋತ್ಸವದಂದೇ ತಾಯಿ ನಮ್ಮನ್ನು ಬಿಟ್ಟು ಹೋಗಿದ್ದಾರೆ ಎಂದು ಅಮ್ಮನನ್ನು ನೆನೆದು ಮಗಳು ನಗರದ ಕೂಡ್ಲು ಬಳಿಯ ಚಿತಾಗಾರದ ಬಳಿ ಕಣ್ಣೀರಿಡುತ್ತಿದ್ದ ದೃಶ್ಯ ಎಂಥವರನ್ನು ಕಣ್ಣಂಚಲ್ಲೂ ನೀರು ತರಿಸುವಂತಿತ್ತು.
ಚಿತಾಗಾರದ ಬಳಿ ತಾಯಿಯ ಮೃತದೇಹ ಬಂದೊಡನೆ ಅಮ್ಮನನ್ನು ಕಳೆದುಕೊಂಡ ಮಗಳ ರೋದನೆ ಮುಗಿಲು ಮುಟ್ಟಿತ್ತು. ತಾಯಿ ಸತ್ತು ಹೋದರು. ಆಸ್ಪತ್ರೆಯವರ ಬೇಜಾವಾಬ್ದಾರಿತನದಿಂದ ಅಮ್ಮನನ್ನು ಕಳೆದುಕೊಳ್ಳುವಂತಾಯಿತು. ಒಂದು ಕೋಟಿ ರೂ. ಕೊಟ್ಟರೂ ನನ್ನ ತಾಯಿನ ತಂದು ಕೊಡ್ತೀರಾ ಎಂದು ಬಿಕ್ಕಿ ಬಿಕ್ಕಿ ಅಳುತ್ತಿದ್ದರು.
ಇದನ್ನೂ ಓದಿ :ರಾಜ್ಯದಲ್ಲಿಂದು 30309 ಪ್ರಕರಣ ಪತ್ತೆ ; 58395 ಜನರು ಗುಣಮುಖ
ಪತ್ನಿಯನ್ನು ಕಳೆದುಕೊಂಡ ದಿಕ್ಕೇ ತೋಚದಂತಿದ್ದ ಪತಿ ಹಾಗೂ ಮಗಳನ್ನು ಅಳಿಯ ಸಾಧ್ಯವಾದಷ್ಟು ಸಮಾಧಾನ ಪಡಿಸುತ್ತಿದ್ದರು. ಆದರೂ, ಮಗಳ ಆಕ್ರಂದನ ನಿಲ್ಲಲಿಲ್ಲ. ಆಸ್ಪತ್ರೆಯವರು ಸರಿಯಾಗಿ ಚಿಕಿತ್ಸೆ ನೀಡದೆ ತಾಯಿಯನ್ನು ಕಳೆದುಕೊಂಡು ಅನಾಥರಾಗಿದ್ದೇವೆ ಎಂದು ಆಸ್ಪತ್ರೆ ವಿರುದ್ಧ ಆರೋಪಿಸಿದ್ದಾರೆ.