Advertisement

ವೆಬ್‌ಸೈಟ್‌ ಕಾಟ; ಸಂತ್ರಸ್ತರಿಗೆ ಪರದಾಟ

12:17 PM Nov 29, 2019 | Suhan S |

ಚಿಕ್ಕೋಡಿ: ಭೀಕರ ಪ್ರವಾಹದಲ್ಲಿ ಮನೆ ಕಳೆದುಕೊಂಡ ಸಂತ್ರಸ್ತರ ಮನೆಗಳ ಸರ್ವೆ ಮಾಡಿದ ದಾಖಲಾತಿಗಳನ್ನು ವಸತಿ ಲಾಗಿನ್‌ದಲ್ಲಿ ದಾಖಲು ಮಾಡಿದ್ದು, ಕಳೆದ 15 ದಿನಗಳಿಂದ ವಸತಿ ಲಾಗಿನ್‌ ಓಪನ್‌ ಆಗದೇ ಅ ಧಿಕಾರಿಗಳು ಮತ್ತು ಸಂತ್ರಸ್ತ ಫಲಾನುಭವಿಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

Advertisement

ಕಳೆದ ಆಗಸ್ಟ್‌ ತಿಂಗಳಲ್ಲಿ ಧಾರಾಕಾರ ಮಳೆಯಿಂದ ಕೃಷ್ಣಾ, ದೂಧಗಂಗಾ ಮತ್ತು ವೇದಗಂಗಾ ನದಿಗಳ ಭೀಕರ ಪ್ರವಾಹದಿಂದ ಚಿಕ್ಕೋಡಿ ತಾಲೂಕಿನ ಸುಮಾರು ಹತ್ತಾರು ಹಳ್ಳಿಗಳು ಮುಳುಗಡೆಗೊಂಡು ತೀವ್ರ ಸಂಕಷ್ಟಕ್ಕೆ ಒಳಗಾಗಿ ಮನೆಮಠ ಕಳೆದುಕೊಂಡು ಅತಂತ್ರರಾಗಿದ್ದರು. ಮನೆ ಕಳೆದುಕೊಂಡ ಸಂತ್ರಸ್ತರಿಗೆ ರಾಜ್ಯ ಸರ್ಕಾರ ಸರ್ವೇ ಕಾರ್ಯಕೈಗೊಂಡು ಸೂಕ್ತ ಪರಿಹಾರ ನೀಡಲಾಗುತ್ತದೆಂದು ಭರವಸೆ ನೀಡಿದರು. ಇದೀಗ ಸರ್ವೇ ಕಾರ್ಯ ಕೈಗೊಂಡು ಸರಿಯಾದ ದಾಖಲೆಗಳನ್ನು ಹೊಂದಿರುವ ಫಲಾನುಭವಿಗಳಿಗೆ ಮೊದಲನೆ ಕಂತು ಬಿಡುಗಡೆ ಮಾಡಿ ಮನೆ ಕಟ್ಟುವ ಕಾರ್ಯ ಚಾಲನೆಯಲ್ಲಿದೆ.

ಆದರೆ ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದಲ್ಲಿ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಸೂಕ್ತ ಪರಿಹಾರ ಸಿಗದೇ ಪರದಾಡುವ ಪ್ರಸಂಗ ನಿರ್ಮಾಣವಾಗಿದೆ. ಗ್ರಾಮದಲ್ಲಿ ಸುಮಾರು 1100 ಮನೆಗಳು ಕುಸಿದಿವೆ. ಅದರಲ್ಲಿ “ಎ’ ಕೆಟಗರಿಯಲ್ಲಿ ಬರುವ 60 ಮನೆಗಳಿಗೆ ಮಾತ್ರ ಮೊದಲು ಕಂತು ಜಮೆ ಮಾಡಲಾಗಿದೆ. ಉಳಿದ ಮನೆಗಳ ಕಳೆದುಕೊಂಡ ಸಂತ್ರಸ್ತರು ಮಾತ್ರ ಪ್ರತಿನಿತ್ಯ ಗ್ರಾಪಂ ಮತ್ತು ತಹಶೀಲ್ದಾರ್‌ ಕಚೇರಿಯಲ್ಲಿ ವಿಚಾರಣೆ ಮಾಡುವುದೇ ಕಾಯಕವಾಗಿದೆ.

ಸರ್ಕಾರ ಸರ್ವೇ ಮಾಡಿದ 270 ಮನೆಗಳನ್ನು ವಸತಿ ಲಾಗಿನ್‌ದಲ್ಲಿ ದಾಖಲುಮಾಡಿದ್ದಾರೆ. ಆದರೆ ಇದೀಗ ಪರಿಹಾರ ಕೊಡಬೇಕು ಎಂದರೆ ಲಾಗಿನ್‌ ಓಪನ್‌ ಆಗದೇ ಇರುವುದಕ್ಕೆ ಅಧಿಕಾರಿಗಳು ಮತ್ತು ಸಂತ್ರಸ್ತರಿಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ. ಗ್ರಾಮದ 100 ಮನೆಗಳ ಸರ್ವೇ ಕಾರ್ಯ ನಡೆಯಬೇಕಿದೆ. 185 ಮನೆಗಳ ಪುನಃ ಸರ್ವೇ ಕಾರ್ಯ ಮಾಡಬೇಕಿದೆ. ಸುಮಾರು 545 ಮನೆಗಳನ್ನು ವಸತಿ ಲಾಗಿನ್‌ದಲ್ಲಿ ಹಾಕಲಾಗಿದೆ. ಲಾಗಿನ್‌ ಓಪನ್‌ ಆಗದೇ ಇರುವುದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.

ಬಗೆಹರಿಯದ ಸಮಸ್ಯೆ: ಕೃಷ್ಣಾ ನದಿ ಭೀಕರ ಪ್ರವಾಹದಲ್ಲಿ ಸಂಪೂರ್ಣ ಮುಳುಗಡೆಗೊಂಡ ಮಾಂಜರಿ ಗ್ರಾಮದ ಸಮಸ್ಯೆ ಬೆಳಗಾವಿ ಜಿಲ್ಲಾಧಿಕಾರಿಗಳ ಗಮನಕ್ಕೆ ಬಂದರೂ ಸಹ ಸಮಸ್ಯೆ ಬಗೆಹರಿಯುತ್ತಿಲ್ಲ, ಬಿದ್ದು ಹೋಗಿರುವ ಮನೆಗಳ ದಾಖಲಾತಿಗಳನ್ನು ಲಾಗಿನದಲ್ಲಿ ಹಾಕಲಾಗಿದೆ. ಆದರೆ ಲಾಗಿನ್‌ ಓಪನ್‌ ಆಗುತ್ತಿಲ್ಲ ಎಂಬ ವಿಷಯ ಜಿಲ್ಲಾಧಿಕಾರಿಗಳ ಗಮನಕ್ಕೆ ಹೋಗಿದೆ. ಆದರೂ ಸಮಸ್ಯೆ ಸಮಸ್ಯೆಯಾಗಿ ಉಳಿದುಕೊಂಡಿದೆ. ತ್ವರಿತಗತಿಯಲ್ಲಿ ಸಿಗಲಿ ಪರಿಹಾರ: “ಎ’ ಕೆಟಗೆರಿ ವ್ಯಾಪ್ತಿಗೆ ಬರುವ ಮನೆಗಳಿಗೆ ಮೊದಲ ಕಂತಿನಪರಿಹಾರ ಧನ ಹಂತ ಹಂತವಾಗಿ ಬರುತ್ತಿದೆ.

Advertisement

ಆದರೇ “ಬಿ’ ಬದಲಾಗಿ ಈಗಾಗಲೇ “ಎ’ ಕೆಟಗೇರಿಗೆ ಸೇರಿಸಿ ಪರಿಹಾರ ನೀಡಲು ಸರ್ಕಾರ ನಿರ್ಧರಿಸುವುದರಿಂದ ಹೆಚ್ಚು ಫಲಾನುಭವಿಗಳಿಗೆ ಇನ್ನೂ ಪರಿಹಾರ ಸಿಕ್ಕಿಲ್ಲಎಂದು ಸ್ಥಳೀಯರು ದೂರುತ್ತಿದ್ದಾರೆ. ಹೀಗಾಗಿ ಅಧಿಕಾರಿಗಳು ತುರ್ತು ಪರಿಹಾರಕ್ಕೆ ಬೇಕಾದ ಎಲ್ಲ ವ್ಯವಸ್ಥೆಗಳು ಮಾಡಿಕೊಂಡು ಶೀಘ್ರವಾಗಿ ಪರಿಹಾರ ಸಿಗುವ ವ್ಯವಸ್ಥೆ ಕಲ್ಪಿಸಬೇಕು ಎಂದು ಬಾಧಿತ ಫಲಾನುಭವಿಗಳ ಆಗ್ರಹವಾಗಿದೆ.

ಗ್ರಾಮದಲ್ಲಿ ಹಾನಿಯಾಗಿರುವ ಮನೆಗಳ ಸರ್ವೇ ಮಾಡಿದ ಅ ಧಿಕಾರಿಗಳು “ಎ’ ವರ್ಗದಲ್ಲಿ ಬಂದಿರುವ ಮನೆಗಳಿಗೆ ಪರಿಹಾರ ಜಮೆ ಮಾಡುತ್ತಿದ್ದಾರೆ. ಆದರೆ ಲಾಗಿನ್‌ನಲ್ಲಿ ಹಾಕಬೇಕು ಎಂದರೆ ಸರ್ಕಾರದ ಲಾಗಿನ್‌ ಓಪನ್‌ ಆಗುತ್ತಿಲ್ಲ. ಇದರಿಂದ ಮನೆ ಕಟ್ಟಿಕೊಳ್ಳುವ ಫಲಾನುಭವಿಗಳಿಗೆ ಪರಿಹಾರ ವಿಳಂಬವಾಗುತ್ತಿದೆ. ಜಿಲ್ಲಾಡಳಿತ ಮತ್ತು ತಾಲೂಕಾಡಳಿತ ಸೂಕ್ತ ಗಮನ ಹರಿಸಿ ತತ್ವರಿತವಾಗಿ ಪರಿಹಾರ ಕೊಡಬೇಕು. -ಸಿದ್ಧಾರ್ಥ ಗಾಯಗೋಳ, ಮಾಂಜರಿ ಗ್ರಾಮದ ಸಂತ್ರಸ್ತರು

 

-ಮಹಾದೇವ ಪೂಜೇರಿ

Advertisement

Udayavani is now on Telegram. Click here to join our channel and stay updated with the latest news.

Next