Advertisement

ಸಿರಿಧಾನ್ಯ ಮೇಳದ ವೆಬ್‌ಸೈಟ್‌ ಅನಾವರಣ

01:27 PM Nov 07, 2017 | |

ಬೆಂಗಳೂರು: ಸಿರಿಧಾನ್ಯಗಳಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆ ಕಲ್ಪಿಸುವ ಉದ್ದೇಶದಿಂದ 2018ರ ಜನವರಿಯಲ್ಲಿ ಆಯೋಜಿಸಿರುವ “ಅಂತಾರಾಷ್ಟ್ರೀಯ ಸಿರಿಧಾನ್ಯ ವ್ಯಾಪಾರ ಮೇಳ’ದ ಲಾಂಛನ ಮತ್ತು ವೆಬ್‌ಸೈಟ್‌ಅನ್ನು ಕೃಷಿ ಸಚಿವ ಕೃಷ್ಣಭೈರೇಗೌಡ ನಗರದ ಹೋಟೆಲೊಂದರಲ್ಲಿ ಸೋಮವಾರ ಅನಾವರಣಗೊಳಿಸಿದರು.

Advertisement

ಜ.19ರಿಂದ 21ರವರೆಗೆ ನಡೆಯಲಿರುವ ಸಿರಿಧಾನ್ಯ ಮೇಳದ ವಿವರ ಹೊಂದಿರುವ ವೆಬ್‌ಸೈಟ್‌ ಹಾಗೂ ಲಾಂಛನ ಬಿಡುಗಡೆ ಮಾಡಿ ಮಾತನಾಡಿದ ಅವರು, “ವಿಶ್ವ ಮಟ್ಟದಲ್ಲಿ ಸಿರಿಧಾನ್ಯಗಳಿಗೆ ಮಾರುಕಟ್ಟೆ ಒದಗಿಸಲು ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದ್ದೇವೆ. ಬೇಡಿಕೆ ಹೆಚ್ಚಾದಂತೆ ಸಿರಿಧಾನ್ಯಗಳ ದರವೂ ಸಹಜ ಸ್ಥಿತಿಗೆ ಬರುವ ಜತೆಗೆ ರೈತರ ಆರ್ಥಿಕ ಸ್ವಾವಲಂಬನೆಗೂ ಸಹಕಾರಿಯಾಗಲಿದೆ,’ ಎಂದು ಅಭಿಪ್ರಾಯಪಟ್ಟರು.

“ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಹೆಸರು ಗಳಿಸಿರುವ ಬೆಂಗಳೂರು, ಇದೀಗ ಸಾವಯವ ಹಾಗೂ ಸಿರಿಧಾನ್ಯಗಳ ರಾಜಧಾನಿಯೂ ಆಗುತ್ತಿದೆ. ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟಕ್ಕೆ ಸಾವಯವ ಮತ್ತು ಸಿರಿಧಾನ್ಯ ಕ್ರಾಂತಿಯನ್ನು ಕೊಂಡೊಯ್ಯಲು ಕರ್ನಾಟಕವೇ ಅಡಿಪಾಯವಾಗಿದ್ದು, ಅದನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ಸಿರಿಧಾನ್ಯ ವಾಣಿಜ್ಯ ಮೇಳ ಆಯೋಜಿಸಲಾಗುತ್ತಿದೆ. ಸಾವಯವ ಮತ್ತು ಸಿರಿಧಾನ್ಯ ಬೆಳೆ ಬೆಳೆಯಲು ರೈತರಿಗೆ ಉತ್ತೇಜಿಸುವ ಜತೆಗೆ ಬೆಳೆಗೆ ಅತ್ಯುತ್ತಮ ಮಾರುಕಟ್ಟೆ ಒದಗಿಸಲಾಗುತ್ತಿದೆ,’ ಎಂದು ಹೇಳಿದರು.

“ರೈತರ ಪರವಾದ, ಪರಿಸರ ಸ್ನೇಹಿ ಮತ್ತು ಜನರ ಆರೋಗ್ಯಕ್ಕೆ ಪೂರಕವಾದ ಸಿರಿಧಾನ್ಯಗಳನ್ನು ನಮ್ಮ ಪಾರಂಪರಿಕ ಅಡುಗೆ ಶೈಲಿಯಲ್ಲಿ ಬಳಸಲಾಗುತ್ತಿದೆ. ಇದಕ್ಕೆ ರಾಗಿ, ಸಜ್ಜೆ, ನವಣೆ, ಸೆಣಬು ಸೇರಿದಂತೆ ವಿವಿಧ ಸಿರಿಧಾನ್ಯಗಳಿಂದ ಚಕ್ಕಲಿ, ನಿಪ್ಪಟ್ಟು, ರೊಟ್ಟಿ ಇತ್ಯಾದಿ ಪದಾರ್ಥ ತಯಾರಿಸಿ ಹೆಚ್ಚು ಬೇಡಿಕೆ ಬರುವಂತೆ ಕ್ರಮಕೈಗೊಳ್ಳಬೇಕು,’ ಎಂದರು.

ಸಿರಿಧಾನ್ಯ ದಿನ ಘೋಷಣೆ
ಈಗಾಗಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಯೋಗ ದಿನಾಚರಣೆ ಘೋಷಣೆ ಮಾಡಲಾಗಿದೆ. ಅದೇ ರೀತಿ ಸಿರಿಧಾನ್ಯ ಮೇಳವನ್ನು ಘೋಷಣೆ ಮಾಡಬೇಕು ಎಂದು ಕೇಂದ್ರ ಸರ್ಕಾರ ಮತ್ತು ವಿಶ್ವಸಂಸ್ಥೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಯೋಗದಿಂದ ಆರೋಗ್ಯ ರಕ್ಷಣೆಯಾದಂತೆ ಸಿರಿಧಾನ್ಯಗಳು ಆರೋಗ್ಯ ರಕ್ಷಕಗಳಾಗಿವೆ. ಹೀಗಾಗಿ ಸರ್ಕಾರ ಅಂತಾರಾಷ್ಟ್ರೀಯ ಸಿರಿಧಾನ್ಯ ದಿನ ಘೋಷಣೆ ಮಾಡಬೇಕು ಎಂದು ಅಭಿಪ್ರಾಯಪಟ್ಟರು.

Advertisement

ವಿದೇಶಿಗರು ಭಾಗಿ
ಸಿರಿಧಾನ್ಯ ಮೇಳಕ್ಕೆ ಅಮೇರಿಕ, ಯೂರೋಪ್‌, ದುಬೈ ಸೇರಿದಂತೆ ಹಲವು ದೇಶಗಳ ಸಾವಯವ ಮತ್ತು ಕೃಷಿಧಾನ್ಯ ಕ್ಷೇತ್ರದ ಪ್ರತಿನಿಧಿಗಳು, ನೀತಿ ರೂಪಿಸುವವರು, ರೈತರು, ಉದ್ದಿಮೆದಾರರು, ಗ್ರಾಹಕರು ಭಾಗಹವಿಸಲಿದ್ದಾರೆ. ರಾಷ್ಟ್ರ ಮತ್ತು ರಾಜ್ಯದ ಅನೇಕ ರೈತರು, ಉದ್ದಿಮೆದಾರರು ಪಾಲ್ಗೊಳ್ಳಲಿದ್ದು, ಕಳೆದ ವರ್ಷಕ್ಕಿಂತಲೂ ಈ ಬಾರಿ ಹೆಚ್ಚಿನ ಪ್ರತಿಕ್ರಿಯೆ ಸಿಗುವ ನಿರೀಕ್ಷೆ ಇದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಕೃಷಿ ಆಯುಕ್ತ ಸತೀಶ್‌, ಕೃಷಿ ನಿರ್ದೇಶಕ ಸೋಮಶೇಖರ್‌ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next