ಬನಹಟ್ಟಿ: ಎಸ್‌ಆರ್‌ಎ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯ ವಿದ್ಯಾರ್ಥಿ ರವಿಕುಮಾರ ಬಸವರಾಜ ಕರಲಟ್ಟಿ 625ಕ್ಕೆ 620 ಅಂಕ ಪಡೆದು ರಾಜ್ಯಕ್ಕೆ ಆರನೇ ಸ್ಥಾನ ಪಡೆದಿದ್ದಾರೆ.
ರವಿಕುಮಾರಗೆ ಕನ್ನಡ-125, ಇಂಗ್ಲಿಷ್-99, ಹಿಂದಿ-99, ಗಣಿತ-98, ಸಮಾಜ ವಿಜ್ಞಾನ-100 ಮತ್ತು ವಿಜ್ಞಾನ-99 ಅಂಕ ಪಡೆದಿದ್ದಾನೆ. ಮುಂದೆ ವಿಜ್ಞಾನ ವಿಭಾಗದಲ್ಲಿ ಓದುವ ಇಚ್ಛೆ ಹೊಂದಿದ್ದಾನೆ.
ರವಿಕುಮಾರ ತಂದೆ ಪಿಯುಸಿವರೆಗೆ ಓದಿದ್ದು, ಸದ್ಯ ಸ್ಥಳೀಯ ಸದಾಶಿವ ದೇವಸ್ಥಾನ ಹತ್ತಿರ ಇರುವ ಮನೆಯಲ್ಲಿ ನೇಕಾರಿಕೆ ಉದ್ಯೋಗ ಮಾಡುತ್ತಿದ್ದಾರೆ. ತಾಯಿ ಮನೆಗೆಲಸದ ಜತೆಗೆ ನೇಕಾರಿಕೆ ಉದ್ಯೋಗಕ್ಕೆ ಬೇಕಾಗುವ ಪೂರಕ ಕಾರ್ಯ ಮಾಡುತ್ತಾರೆ. ಪ್ರತಿದಿನ ಏಳು ಗಂಟೆಗಳ ಕಾಲ ಓದುತ್ತಿದ್ದೆ, ಶಾಲೆಯ ಎಲ್ಲ ಶಿಕ್ಷಕರ ಉತ್ತಮ ಪ್ರೋತ್ಸಾಹ ಮತ್ತು ವಿಶೇಷ ಕಾಳಜಿಯಿಂದ ಇಷ್ಟೊಂದು ಅಂಕ ಪಡೆಯಲು ಸಾಧ್ಯವಾಯಿತು ಎನ್ನುತ್ತಾನೆ ರವಿಕುಮಾರ.
ತಂದೆ ಬಸವರಾಜ ಮಾತನಾಡಿ, ಸಂಪೂರ್ಣ ಅವನದೇ ಪರಿಶ್ರಮ. ನಾವು ನೇಕಾರಿಕೆ ವೃತ್ತಿ ಮಾಡುವವರು. ಮಕ್ಕಳ ಶಿಕ್ಷಣದ ಬಗ್ಗೆ ಸ್ವಲ್ಪ ಕಾಳಜಿ ಮಾತ್ರ ಮಾಡುತ್ತಿದ್ದೆವು. ಆದರೆ ಅವನೇ ತನ್ನ ಶಿಕ್ಷಕರ ಸಹಾಯದಿಂದ ಈ ಸಾಧನೆ ಮಾಡಿದ್ದಾನೆ. ನಾವು ಮಾತ್ರ ನೇಕಾರಿಕೆ ಮಾಡುತ್ತಿದ್ದು, ನಮ್ಮ ಮಕ್ಕಳು ನೇಕಾರಿಕೆ ಮಾಡುವುದು ಬೇಡ ಎಂದರು. ಮಗನ ಸಾಧನೆಗೆ ತಾಯಿ ಸಂತಸ ವ್ಯಕ್ತಪಡಿಸಿದ್ದಾರೆ.
ಇತ್ತೀಚಿಗೆ ಪಿಯುಸಿ ದ್ವಿತೀಯ ವರ್ಷದ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಮಲ್ಲಿಕಾರ್ಜುನ ಕರಲಟ್ಟಿಯ ಚಿಕ್ಕಪ್ಪನ ಮಗ ರವಿ ಇಬ್ಬರ ಸಾಧನೆ ಸುತ್ತ ಮುತ್ತಲಿನ ಜನರಿಗೆ ಅಪಾರ ಖುಷಿ ತಂದಿದೆ. ಫಲಿತಾಂಶವನ್ನು ಕೇಳಿದ ಒಬ್ಬರು ಇಬ್ಬರು ಅಣ್ಣಾ ತಮ್ಮ ಚಲು ಕೆಲಸಾ ಮಾಡಾಕ ಹತ್ಯಾರ ಎಂದು ಪತ್ರಿಕೆಗೆ ತಿಳಿಸಿದರು.
ಬನಹಟ್ಟಿ: ಎಸ್‌ಆರ್‌ಎ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿನಿ ಅಶ್ವಿನಿ ಗೊಡಚೆಪ್ಪ ಯಡಹಳ್ಳಿ 625ಕ್ಕೆ 619 ಅಂಕ ಪಡೆದು ರಾಜ್ಯಕ್ಕೆ ಏಳನೇ ಸ್ಥಾನ ಪಡೆದಿದ್ದಾಳೆ.
ಅಶ್ವಿನಿ ಕನ್ನಡ-125, ಇಂಗ್ಲಿಷ್-100, ಹಿಂದಿ-99, ಗಣಿತ-100, ಸಮಾಜ ವಿಜ್ಞಾನ-99 ಮತ್ತು ವಿಜ್ಞಾನಕ್ಕೆ 96 ಅಂಕ ಪಡೆದಿದ್ದಾಳೆ. ಈ ಸಂದರ್ಭದಲ್ಲಿ ಅಶ್ವಿನಿ ಪತ್ರಿಕೆಯೊಂದಿಗೆ ಮಾತನಾಡಿ, ದಿನಾಲು ನಾಲೈ್ಕದು ಗಂಟೆಗಳ ಓದುತ್ತಿದ್ದೆ. ವಿಜ್ಞಾನಕ್ಕೆ ಇನ್ನೆರಡು ಮತ್ತು ಹಿಂದಿ ವಿಷಯಕ್ಕೆ ಇನ್ನೊಂದು ಅಂಕ ಬರಬೇಕಾಗಿತ್ತು ಎಂದು ತಿಳಿಸಿದರು.
ನನ್ನ ಅಜ್ಜ ನನಗೆ ಪ್ರೇರಣೆಯಾಗಿದ್ದರು. ನನ್ನ ಓದಿಗಾಗಿ ತಂದೆ, ತಾಯಿ ಎಲ ್ಲಶಿಕ್ಷಕರ ಸಹಕಾರದಿಂದ ಸಾಧನೆ ಮಾಡಲು ಸಾಧ್ಯವಾಗಿದೆ. ಉತ್ತಮ ಫಲಿತಾಂಶ ಬಂದಿರುವುದು ಖುಷಿ ತಂದಿದೆ. ನಿತ್ಯ ನಾಲ್ಕು ಗಂಟೆ ಅಭ್ಯಾಸ ಮಾಡುತ್ತಿದ್ದೆ, ಸಾಯಂಕಾಲ ಹೆಚ್ಚು ಅಭ್ಯಾಸ ಮಾಡುತ್ತಿದ್ದೆ ಮತ್ತು ಸಮಯ ಸಿಕ್ಕಾಗ ಅಭ್ಯಾಸ ಮಾಡಲು ಪ್ರಯತ್ನಿಸುತ್ತಿದ್ದೆ. ಆರಂಭದಿಂದಲೇ ಅಭ್ಯಾಸ ಮಾಡುತ್ತ ಬಂದಿದ್ದೇನೆ. ಮುಂದೆ ಮುಂದೆ ಸ್ಥಳೀಯ ಎಸ್‌ಆರ್‌ಎ ವಿಜ್ಞಾನ ಪಪೂ ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ಓದುವ ಅಭಿಪ್ರಾಯ ವ್ಯಕ್ತಪಡಿಸಿದರು.
ಅಶ್ವಿನಿ ತಂದೆ ಸ್ಥಳೀಯ ಮಂಗಳವಾರ ಪೇಟೆಯಲ್ಲಿ ಫೋಟೊ ಸ್ಟೂಡಿಯೋ ಇಟ್ಟುಕೊಂಡು ಪೇಂಟಿಂಗ್ ಕಾರ್ಯ ಮಾಡುತ್ತಿದ್ದಾರೆ. ಮಗಳ ಸಾಧನೆ ಬಗ್ಗೆ ಅವರಿಗೆ ಖುಷಿಯಾಗಿದೆ. ಪೇಂಟಿಂಗ್ ಕಾರ್ಯ ಮಾಡುತ್ತ ಮಗಳನ್ನು ಓದಿಸುತ್ತಿರುವ ಗೊಡೆಚಪ್ಪ ಮಗಳನ್ನು ಮುಂದೆ ಉನ್ನತ ಶಿಕ್ಷಣ ಮಾಡಿಸಬೇಕು ಎಂಬ ಹಂಬಲ ವ್ಯಕ್ತ ಪಡಿಸಿದರು.
•ಕಿರಣ ಶ್ರೀಶೈಲ ಆಳಗಿ