ರಬಕವಿ-ಬನಹಟ್ಟಿ: ನೇಕಾರರು ತಮ್ಮ ಹಕ್ಕೊತ್ತಾಯಗಳಿಗೆ ಆಗ್ರಹಿಸಿ ಆ. 1 ರಂದು(ಮಂಗಳವಾರ) ಬೆಂಗಳೂರಿನ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಮನೆಯ ಮುಂದೆ ಧರಣಿ ನಡೆಸಲಿದ್ದಾರೆ ಎಂದು ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘದ ಅಧ್ಯಕ್ಷ ಶಿವಲಿಂಗ ಟಿರಕಿ ತಿಳಿಸಿದ್ದಾರೆ.
ಭಾನುವಾರ ಇಲ್ಲಿನ ಕಾಡಸಿದ್ಧೇಶ್ವರ ದೇವಸ್ಥಾನದ ಮುಂಭಾಗದಲ್ಲಿ ನಡೆದ ನೇಕಾರರ ಸಭೆಯಲ್ಲಿ ಮಾತನಾಡಿ, ಬಜೆಟ್ ಅಧಿವೇಶನ ಮುಗಿದ ನಂತರ ನೇಕಾರರ ಸಮಸ್ಯೆಗಳ ಇತ್ಯರ್ಥಕ್ಕಾಗಿ ಸರ್ಕಾರ ಮತ್ತು ನೇಕಾರರ ಮುಖಂಡರ ಸಭೆಯನ್ನು ಕರೆದು ಸಮಸ್ಯೆಗಳನ್ನು ಇತ್ಯರ್ಥಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯನವರ ನೇಕಾರರ ನಿಯೋಗಕ್ಕೆ ತಿಳಿಸಿದ್ದರು. ಇದುವರೆಗೂ ಮುಖ್ಯಮಂತ್ರಿ ನೇಕಾರರ ಸಭೆಯನ್ನು ಕರೆಯದೆ ಇರುವುದರಿಂದ ಧರಣಿಯನ್ನು ಕೈಗೊಳ್ಳಲಾಗುತ್ತಿದೆ.
ಈಗಾಗಲೇ ಅಧಿವೇಶನಕ್ಕಿಂತ ಮುಂಚೆ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನೇಕಾರರು ಪ್ರತಿಭಟನೆಯನ್ನು ನಡೆಸಿದ್ದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಮತ್ತು ಸಂಬಂಧಪಟ್ಟ ಸಚಿವರಿಗೆ ಮನವಿಯನ್ನು ಕೂಡಾ ಸಲ್ಲಿಸಲಾಗಿತ್ತು. ಆದರೆ ಯಾವುದೆ ಪ್ರಯೋಜನವಾಗಿಲ್ಲ. ರೈತ ಮತ್ತು ನೇಕಾರರನ್ನು ಸಮಾನವಾಗಿ ನೋಡಿಕೊಳ್ಳುವುದಾಗಿ ಹೇಳುತ್ತಿರುವ ಸರ್ಕಾರ ಇದುವರೆಗೆ ನೇಕಾರರು ಮಂಡಿಸಿದ ಯಾವುದೆ ಮನವಿಗಳಿಗೆ ಸ್ಪಂದನೆ ಮಾಡಿಲ್ಲ. ನೇಕಾರರ ಕುರಿತು ಸರ್ಕಾರದ ಹತ್ತಿರ ಯಾವುದೆ ರೀತಿಯ ದಾಖಲೆಗಳು ಇಲ್ಲವಾಗಿದೆ. ಇದರಿಂದಾಗಿ ನೇಕಾರರಿಗೆ ಸರ್ಕಾರ ಅನ್ಯಾಯ ಮಾಡುತ್ತಿದೆ ಎಂದರು.
ನೇಕಾರರಿಗೆ ಸರಳ ಸಾಲ ಸೌಲಭ್ಯ, ಕಾರ್ಮಿಕ ಸೌಲಭ್ಯ, ವಿದ್ಯುತ್ ಸಮಸ್ಯೆ, ವಿಮೆಗಳು ಇಲ್ಲದೆ ಇರುವುದು ಬಹುದೊಡ್ಡ ಸಮಸ್ಯೆಯಾಗಿದೆ. ಇನ್ನೂ ವಿದ್ಯುತ್ ದರ ನೇಕಾರರಿಗೆ ಮತ್ತಷ್ಟು ತೊಂದರೆಯನ್ನುಂಟು ಮಾಡಿದೆ. ಆದ್ದರಿಂದ ನೇಕಾರರ ಸಮಸ್ಯೆಗಳಿಗೆ ಶೀಘ್ರವಾಗಿ ಪರಿಹಾರಗಳನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಸರ್ಕಾರದ ಮೇಲೆ ಒತ್ತಡ ಹಾಕಲು ಬೆಂಗಳೂರಿಗೆ ತೆರಳಲಾಗುತ್ತಿದೆ ಎಂದು ಶಿವಲಿಂಗ ಟಿರಕಿ ತಿಳಿಸಿದರು.
ಸೋಮವಾರ ಮಧ್ಯಾಹ್ನ ರಬಕವಿ ಬನಹಟ್ಟಿ ತಾಲೂಕಿನ ಸುತ್ತ ಮುತ್ತಲಿನ ಗ್ರಾಮದ ನೂರಾರು ನೇಕಾರರು, ಬಾಗಲಕೋಟೆಯ ಮೂಲಕ ರೈಲು ಮಾರ್ಗವಾಗಿ ಬೆಂಗಳೂರಿಗೆ ತೆರಳಿದ್ದಾರೆ.
ಓಂಪ್ರಕಾಶ ಬಾಗೇವಾಡಿ, ಉದಯ ಕುಲಗೋಡ, ಮಹಾದೇವ ನುಚ್ಚಿ, ಸಂಗಪ್ಪ ಉದಗಟ್ಟಿ, ಲಕ್ಕಪ್ಪ ಪವಾರ, ಆನಂದ ಜಗದಾಳ, ಆನಂದ ಜೀರಗಾಳ, ಆನಂದ ಬಾಣಕಾರ ಸೇರಿದಂತೆ ನೂರಾರು ನೇಕಾರರು ಇದ್ದರು.