ದೊಡ್ಡಬಳ್ಳಾಪುರ: ವಿದ್ಯುತ್ ಬೆಲೆ ಏರಿಕೆ, ಕಚ್ಚಾ ಸಾಮಗ್ರಿಗಳ ಬೆಲೆ ಏರಿಕೆ. ಕಷ್ಟಪಟ್ಟು ನೇಯ್ದ ಬಟ್ಟೆಗೆ ಸೂಕ್ತ ಬೆಲೆ ಇಲ್ಲ. ಮಾರುಕಟ್ಟೆಯಲ್ಲಿ ಬಾಯಿಗೆ ಬಂದ ದರದಲ್ಲಿ ಕೇಳುವ ದಲ್ಲಾಳಿಗಳಿಂದ ಲಕ್ಷಾಂತರ ರೂ. ನಷ್ಟ ಅನುಭವಿಸುವುದಕ್ಕಿಂತ ಒಂದು ತಿಂಗಳು ನೇಯ್ಗೆ ಕಸುಬಿಗೆ ವಿರಾಮ ಹೇಳಿದರೆ ಆಗಲಾದರೂ ಮಾರುಕಟ್ಟೆ ಸ್ಥಿಮಿತಕ್ಕೆ ಬರುತ್ತದೆ ಎನ್ನುವ ನಿರ್ಧಾರಕ್ಕೆ ನೇಕಾರರು ಬರುತ್ತಿರುವುದು ನೇಯ್ಗೆ ಉದ್ಯಮದ ಕರಾಳ ಸ್ಥಿತಿಯ ಪರಿಚಯ ಮಾಡಿ ಕೊಡುತ್ತದೆ.
ಹೌದು, ಒಂದು ಕಾಲದಲ್ಲಿ ಕರ್ನಾಟಕದ ಮ್ಯಾಂಚೆಸ್ಟರ್ ಎಂದು ಹೆಸರು ಪಡೆದಿದ್ದ ದೊಡ್ಡಬಳ್ಳಾಪುರದ ಜೀವನಾಡಿ ಇಂದಿಗೂ ನೇಕಾರಿಕೆಯೇ ಆಗಿದೆ. ಶುದ್ಧ ರೇಷ್ಮೆ ಬಟ್ಟೆಯನ್ನು ನೇಯುವ ಕೆಲವು ನೇಕಾರರನ್ನು ಹೊರತುಪಡಿಸಿದರೆ, ಕೃತಕ ನೂಲಿನಿಂದ ನೇಯುವ ನೇಕಾರರ ಸ್ಥಿತಿ ದಮನೀಯವಾಗಿದೆ. ಸೀರೆ ಮಾರಾಟದಲ್ಲಿ ನಷ್ಟ, ಮಾರುಕಟ್ಟೆ ಸಮಸ್ಯೆ ಮೊದಲಾದ ಸಮಸ್ಯೆಗಳೊಂದಿಗೆ ಸಹಸ್ರಾರು ಮಗ್ಗಗಳು ಶಬ್ದ ಮಾಡದೇ ನಿಲ್ಲುವ ಪರಿಸ್ಥಿತಿ ಎದುರಾಗಿದೆ. ದೊಡ್ಡಬಳ್ಳಾಪುರ ನಗರ ಹಾಗೂ ನಗರ ಪ್ರದೇಶಕ್ಕೆ ಹೊಂದಿಕೊಂಡಂತೆ ಇರುವ ಊರುಗಳಲ್ಲಿ ಸುಮಾರು 20 ಸಾವಿರ ಮಗ್ಗಗಳು ಇವೆ. ಇಲ್ಲಿನ ಇತರೆ ವ್ಯಾಪಾರ ವಹಿವಾಟುಗಳು ಸಹ ಬಹಳಷ್ಟು ನೇಕಾರರ ಮೇಲೆ ಅವಲಂಬಿತವಾಗಿವೆ.
ಬಂಡವಾಳ ಹೆಚ್ಚು ಲಾಭ ಕಡಿಮೆ: ಇತ್ತೀಚೆಗಷ್ಟೇ ನೇಕಾರ ಸಂಘಟನೆಗಳ ಒಕ್ಕೂಟದಿಂದ ನೇಕಾರರ ಸಮಸ್ಯೆಗಳ ಕುರಿತಂತೆ ಚರ್ಚೆ ನಡೆಯಿತು. ನೆರೆಯ ಆಂಧ್ರದ ಧರ್ಮಾವರಂನಲ್ಲಿ ಜುಲೈ ತಿಂಗಳು ಪೂರ್ತಿ ಮಗ್ಗಗಳ ಚಟುವಟಿಕೆ ಸ್ಥಗಿತಗೊಳಿಸಲಾಗಿದೆ. ದೊಡ್ಡಬಳ್ಳಾಪುರದಲ್ಲಿ ಸಹ ಮಗ್ಗಗಳನ್ನು ನಿಲ್ಲಿಸುವ ಕುರಿತು ಚರ್ಚೆಗಳು ನಡೆದಿವೆ. ಇಲ್ಲಿ ವಾರಕ್ಕೆ ಸರಿ ಸುಮಾರು 2.5 ಲಕ್ಷಕ್ಕೂ ಹೆಚ್ಚು ಸೀರೆ ಅಥವಾ ವಿವಿಧ ನಮೂನೆಯ ಬಟ್ಟೆಗಳ ತಯಾರಿಕೆಯಿಂದ ಕೋಟ್ಯಂತರ ರೂ. ವಹಿವಾಟು ನಡೆಯುತ್ತಿದೆ. ಇಂದಿನ ಆಧುನಿಕ ಯುಗಕ್ಕೆ ತಕ್ಕಂತೆ, ಕಂಪ್ಯೂಟರ್ ಜಾಕಾರ್ಡ್‌ನಲ್ಲಿ ವಿವಿಧ ನಮೂನೆಯ ಸೀರೆಗಳನ್ನು ನೇಯಲಾ ಗುತ್ತಿದೆ. ಆದರೆ, ಇದಕ್ಕೆ ಲಕ್ಷಾಂತರ ರೂ. ಬಂಡವಾಳ ಬೇಕು. ಆರಂಭದಲ್ಲಿ 1.5 ಸಾವಿರ ರೂ.ಗೆ ಮಾರಾಟವಾಗುತ್ತಿದ್ದ ಸೀರೆಗಳ ಬೆಲೆ ಇಂದು 800 ರೂ.ಗೆ ಬಂದಿದೆ. ಇನ್ನು ಬೇರೆ ನಮೂನೆಯ ಸೀರೆಗಳು ಸಹ ಅರ್ಧ ಬೆಲೆಗೆ ಬಂದಿವೆ.
ಹೊಸ ಸರ್ಕಾರದ ಮೇಲೆ ಭರವಸೆ: ನೇಕಾರರ ಸಮಸ್ಯೆ ಗಳಿಗೆ ದಶಕಗಳ ಇತಿಹಾಸವಿದೆ. ಇವುಗಳಲ್ಲಿ ಪ್ರಮುಖವಾಗಿ ರುವುದು ಕಚ್ಚಾ ವಸ್ತುಗಳ ಪೂರೈಕೆ ಮತ್ತು ಬೆಲೆ ನಿಯಂತ್ರಣ, ಸಿದ್ಧ ಬಟ್ಟೆಗಳಿಗೆ ಮಾರು ಕಟ್ಟೆ, ವಿದ್ಯುತ್ ಮಗ್ಗಗಳಿಗೆ ನಿರಂತರ ರಿಯಾಯಿತಿ ವಿದ್ಯುತ್, ನೂಲಿನ ಬ್ಯಾಂಕ್ ಸ್ಥಾಪನೆ ಬಗ್ಗೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿರುವ ನೇಕಾರರು ಹಲವು ರೀತಿಯಲ್ಲಿ ಸರ್ಕಾರದ ಗಮನ ಸೆಳೆಯಲು ಹೋರಾಟ ನಡೆಸುತ್ತಿ ದ್ದಾರೆ. ಇತ್ತೀಚೆಗಷ್ಟೇ ಜವಳಿ ಸಚಿವ ಶಿವಾನಂದ ಎಸ್ .ಪಾಟೀಲ ಅವರನ್ನು ಭೇಟಿ ಮಾಡಿದ ನೇಕಾರ ಒಕ್ಕೂಟಗಳ ನಿಯೋಗ ಸರ್ಕಾರದಿಂದ ವಿದ್ಯುತ್ ದುಬಾರಿ ಬೆಲೆ ಏರಿಕೆಯನ್ನು ಹಿಂಪಡೆಯಬೇಕು. ನೇಕಾರರಿಗೆ 20 ಎಚ್‌ಪಿ ತನಕ ಉಚಿತ ವಿದ್ಯುತ್ ನೀಡಬೇಕು. ವಿದ್ಯುತ್ ಕ್ಷೇತ್ರದ ಖಾಸಗೀಕರಣ ಮಾಡಬಾರದು. ನೇಕಾರರಿಗೆ ಗುರುತಿನ ಚೀಟಿ ಶೀಘ್ರವಾಗಿ ವಿತರಿಸಬೇಕು. ಇಎಸ್‌ಐ ಸೌಲಭ್ಯ ಸೇರಿದಂತೆ ಸೌಲಭ್ಯ ಸರ್ಕಾರವು ನೀಡಬೇಕು. ನೇಕಾರರಿಗಾಗಿ ಬಟ್ಟೆ ಮತ್ತು ನೂಲಿನ ಬ್ಯಾಂಕ್ ಸ್ಥಾಪಿಸಬೇಕು. ನೇಕಾರರು ಉತ್ಪಾದಿಸಿ ದ ಬಟ್ಟೆಯನ್ನು ಖರೀದಿಸಬೇಕು. ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಬೇಕು ಎನ್ನುವ 14 ಬೇಡಿಕೆಗಳ ಮನವಿ ಪತ್ರ ಸಲ್ಲಿಸಲಾಗಿದ್ದು, ಹೊಸ ಸರ್ಕಾರ ನೇಕಾರರ ಬೇಡಿಕೆಗಳನ್ನು ಈಡೇರಿಸುವುದೇ ಕಾದು ನೋಡಬೇಕಿದೆ. ನೇಕಾರರಿಗೆ ಮಾರುಕಟ್ಟೆ ಸಮಸ್ಯೆ ಮಿಲ್‌ಗಳ ಮೇಲೆ ಪೈಪೋಟಿ, ಬದಲಾದ ಜನರ ಅಭಿರುಚಿಗಳು ಸಹ ನೇಕಾರರಿಗೆ ಸವಾಲಾಗಿವೆ.
ನೇಕಾರರು ತಾವು ನೇಯ್ದ ಬಟ್ಟೆಗಳನ್ನು ಮಧ್ಯವರ್ತಿಗಳಿಗೆ ಮಾರುತ್ತಿದ್ದು, ಬೆಲೆ ನಿಗದಿ ಪಡಿಸುವ ಮಧ್ಯವರ್ತಿಗಳು ವ್ಯಾಪಾರದ ಮೇಲೆ ಹಿಡಿತ ಸಾಧಿಸುತ್ತಿದ್ದಾರೆ. ಈ ಮಧ್ಯವರ್ತಿಗಳಿಂದ ಸಣ್ಣ ನೇಕಾರರು ಬಟ್ಟೆಗೆ ಸೂಕ್ತ ಬೆಲೆ ಸಿಗದೇ ಸಾಲಸೋಲ ಮಾಡಿ ಕೊನೆಗೆ ನೇಕಾರಿಕೆಗೆ ಗುಡ್ ಬೈ ಹೇಳುವ ಪರಿಸ್ಥಿತಿ ಉದ್ಬವಿಸುತ್ತಿದೆ. ಹೊಸದಾಗಿ ನೇಯ್ಗೆ ಕೆಲಸ ಕಲಿಯುತ್ತಿರುವ ಕಾರ್ಮಿಕರ ಸಂಖ್ಯೆ ದಿನೇ ದಿನೆ ಇಳಿಮುಖವಾಗುತ್ತಿರುವುದು ಸಹ ಆತಂಕಕಾರಿಯಾಗಿದೆ. ಮನೆಮಂದಿಯೆಲ್ಲಾ ದುಡಿದರೂ ಬೆಲೆ ಏರಿಕೆಗಳು ಹೆಚ್ಚಾಗಿರುವ ಇಂದಿನ ದಿನಗಳಲ್ಲಿ ಸಂಸಾರ ಸಾಗಿಸಲು ಕಷ್ಟವಾಗುತ್ತಿದೆ ಎಂದು ಹಲವಾರು ನೇಕಾರರು ನೋವಿನಿಂದ ಹೇಳುತ್ತಾರೆ.
ಕಚ್ಚಾ ಸಾಮಗ್ರಿಗಳ ಬೆಲೆ ಏರಿಕೆಗೆ ತತ್ತರ : ಹೆಚ್ಚುತ್ತಿರುವ ಇಂದಿನ ಬೆಲೆಗಳಲ್ಲಿ ವಿದ್ಯುತ್ ಚಾಲಿತ ಮಗ್ಗಗಳಿಗೆ ಬಂಡವಾಳವೇ ಲಕ್ಷಾಂತರ ರೂ. ಆಗುತ್ತಿದೆ. ಇದರೊಂದಿಗೆ ಬಟ್ಟೆ ನೇಯಲು ಬಳಸುವ ಕಚ್ಚಾ ಸಾಮಗ್ರಿಗಳಾದ ಪಾಲಿಯೆಸ್ಟರ್, ಜರಿ, ಕೆಟೆಕ್ಸ್, ಡೂಪಿಯಾನ್ ಮೊದಲಾದ ನೂಲುಗಳ ಬೆಲೆಗಳು ಹೆಚ್ಚಾಗಿವೆ. ಜಿಎಸ್‌ಟಿ ತೆರಿಗೆಗೆ ನೇಕಾರರು ಹೊಂದಿಕೊಳ್ಳುವುದು ಕಷ್ಟವಾಗಿ ನೇಯ್ದ ಬಟ್ಟೆಗಳನ್ನು ಮಾರಲು ಮಧ್ಯವರ್ತಿಗಳನ್ನು ಆಶ್ರಯಿಸಬೇಕಿದೆ.
ಬಂಡವಾಳಕ್ಕಿಂತ ಅತೀ ಕಡಿಮೆ ಸೀರೆ ಬೆಲೆಗೆ ಮಾರಾಟ : ಸಗಟು ವ್ಯಾಪಾರಸ್ಥರ ಬಳಿ ಸೀರೆಗಳನ್ನು ಮಾರಲು ಹೋದರೆ, ನಮ್ಮ ಬಂಡವಾಳಕ್ಕಿಂತಲೂ ಅತಿ ಕಡಿಮೆ ಬೆಲೆಗೆ ಕೇಳುತ್ತಾರೆ. ಬ್ಯಾಂಕ್‌ಗಳಲ್ಲಿ ಸಾಲ ತೀರಿಸುವುದು, ಮಕ್ಕಳ ಶಿಕ್ಷಣ, ಮನೆಯಲ್ಲಿ ಅನಾರೋಗ್ಯ ಸೇರಿದಂತೆ ಮನೆ ಖರ್ಚುಗಳಿಗೆ ಹಣ ಹೊಂದಿಸುವುದು ಹೇಗೆ ಎನ್ನುವ ಚಿಂತೆ ಎದುರಾಗಿದೆ. ಸದ್ಯಕ್ಕೆ ಎಷ್ಟೋ ಸಿಕ್ಕರೆ ಸಾಕು ಎಂದು ಕೇಳಿದ ಬೆಲೆಗೆ ಮಾರಾಟ ಮಾಡುವ ನೇಕಾರರಿಂದ ಇತರೆ ನೇಕಾರರು ಸಹ ಸಂಕಷ್ಟ ಎದುರಿಸಬೇಕಾಗಿದೆ. ಪ್ರತಿನಿತ್ಯ ಹಾಕಿದ ಬಂಡವಾಳವೂ ಸಹ ಬರದಂತಹ ಸ್ಥಿತಿ ನಿರ್ಮಾಣವಾಗಿದೆ.
– ಡಿ.ಶ್ರೀಕಾಂತ