ಮಹಾನಗರ: ನಗರದಲ್ಲಿ ಸದ್ಯ ಹವಾಮಾನ ಹೇಗಿದೆ, ವಾಯು ಮಾಲಿನ್ಯ ಯಾವ ಮಟ್ಟದಲ್ಲಿದೆ… ಮುಂತಾದ ಅಪ್‌ಡೇಟ್‌ಗಳನ್ನು ಸಾರ್ವಜನಿಕರಿನ್ನು ನಗರದ ಪ್ರಮುಖ ಜಂಕ್ಷನ್‌ಗಳಲ್ಲೇ ಪಡೆಯಬಹುದು! ಈ ನೂತನ ವ್ಯವಸ್ಥೆಯ ಪರಿಚಯಕ್ಕೆ ಸ್ಮಾರ್ಟ್ ಸಿಟಿ ಮುಂದಾಗಿದ್ದು, ನಗರದ 14 ಜಂಕ್ಷನ್ ಗಳಲ್ಲಿರುವ ಸಿಸಿ ಕೆಮರಾ ಪೋಲ್‌ನ ಡಿಜಿಟಲ್ ಬೋರ್ಡ್‌ನಲ್ಲಿ ಈ ಮಾಹಿತಿ ಬಿತ್ತರಿಸಲು ತೀರ್ಮಾನಿಸಲಾಗಿದೆ. ಜನರಿಗೆ ಸಕಾಲದ ಮಾಹಿತಿ ನೀಡುವ ಉದ್ದೇಶದಿಂದ ಈ ಸೇವೆ ಆರಂಭಿಸಲಾಗಿದ್ದು, ಸಿಟಿಯ ಮಂದಿ ಇದರ ಮಾಹಿತಿ ಪಡೆಯುತ್ತಿದ್ದಾರೆ. ಈಗಿನ, ನಗರದಲ್ಲಿ ವಾಯು ಮಾಲಿನ್ಯ ಎಷ್ಟು ಪ್ರಮಾಣ ದಲ್ಲಿದೆ, ಗರಿಷ್ಠ ಉಷ್ಣಾಂಶ, ಕನಿಷ್ಠ ಉಷ್ಣಾಂಶ ಎಷ್ಟಿದೆ ? ಎಂಬ ಮಾಹಿತಿ ಡಿಜಿಟಲ್ ಡಿಸ್‌ಪ್ಲೇಯಲ್ಲಿ ಲಭ್ಯವಾಗುತ್ತಿದೆ. ಸುಮಾರು 3 ಅಡಿ ಅಗಲ, 4 ಅಡಿ ಉದ್ದದ ಡಿಸ್‌ಪ್ಲೇಯನ್ನು ಇದು ಹೊಂದಿದೆ. ಈ ಮಾಹಿತಿ ಪಡೆಯ ಲೆಂದು ನಗರದ ಐದು ಕಡೆಗಳಲ್ಲಿ ವಾಯುಗುಣಮಟ್ಟ ಮಾಪನ ಟವರ್ ಅಳವಡಿಸಲಾಗಿದೆ. ಇದ ರಿಂದ ಮಾಹಿತಿ ಲಭ್ಯವಾಗುತ್ತಿದ್ದು, ಮತ್ತಷ್ಟು ಮಾಹಿತಿಯನ್ನು ಪೊಲೀಸ್ ಇಲಾಖೆಯಿಂದ ಪಡೆಯಲಾಗುತ್ತಿದೆ.
ಪೊಲೀಸ್ ಇಲಾಖೆಯಿಂದ ವಿಎಂಎಸ್
ಸ್ಮಾರ್ಟ್ ಟೆಕ್ನಾಲಜಿ ಆಧಾರದಲ್ಲಿ ನಿಭಾಯಿಸುವ ನಿಟ್ಟಿನಲ್ಲಿ ವಾಹನ ಚಾಲಕರಿಗೆ ದಿಕ್ಸೂಚಿಯಾಗಬಲ್ಲ ವೇರಿಯೆಬಲ್ ಮೆಸೇಜ್ ಸೈನೇಜ್ (ವಿ.ಎಂ. ಎಸ್.) ಎಂಬ ನೂತನ ವ್ಯವಸ್ಥೆಯನ್ನು ಪೊಲೀಸ್ ಇಲಾಖೆಯೂ ಸದ್ಯ ಅನುಷ್ಠಾನಗೊಳಿಸಲಾಗಿದೆ. ನಗರದ ನಂತೂರು, ಕೆಪಿಟಿ ಮತ್ತು ಡಾ| ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಡಿಜಿಟಲ್ ಬೋರ್ಡ್ ಅಳವಡಿಸಲಾಗಿದೆ. ಸುಮಾರು 40ರಿಂದ 50 ಅಡಿ ಎತ್ತರದಲ್ಲಿ 4.7 ಮೀಟರ್ ಉದ್ದ ಮತ್ತು 2 ಮೀಟರ್ ಅಗಲದ ಡಿಜಿಟಲ್ ಸೂಚನ ಫಲಕ ಹಾಕಲಾಗಿದೆ. ವಾಹನ ಚಾಲಕರಿಗೆ ಈ ಸೂಚನ ಫಲಕವು ಅವರು ಸಾಗುತ್ತಿರುವ ರಸ್ತೆ, ಪ್ರಮುಖ ಜಂಕ್ಷನ್ ಗಳಿಗಿರುವ ದೂರವನ್ನು ತಿಳಿಸುತ್ತದೆ. ಯಾವ ಜಂಕ್ಷನ್ ಅಥವಾ ರಸ್ತೆಯಲ್ಲಿ ಸಂಚಾರ ದಟ್ಟಣೆಯಿದೆ, ಅಪಘಾತಗಳು ಎಲ್ಲಾದರೂ ಸಂಭವಿಸಿಯೇ, ಬಂದೋಬಸ್ತು ವ್ಯವಸ್ಥೆ, ಯಾವ ರಸ್ತೆಯಲ್ಲಿ ವಿಐಪಿಗಳ ಆಗಮನಕ್ಕಾಗಿ ಬ್ಲಾಕ್ ಮಾಡಲಾಗಿದೆ. ಇದಕ್ಕೆ ಯಾವ ಪರ್ಯಾಯ ರಸ್ತೆಯನ್ನು ಬಳಕೆ ಮಾಡಲು ಅನುಮತಿಸಲಾಗಿದೆ ಎಂಬ ಮಾಹಿತಿಯನ್ನೂ ಈ ಡಿಜಿಟಲ್ ಸೂಚನ ಫಲಕ ನೀಡುತ್ತಿದೆ.
ತುರ್ತು ಸಂದರ್ಭಕ್ಕೆಂದು ಪ್ಯಾನಿಕ್ ಬಟನ್
ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರ ಉಪಯೋಗಕ್ಕೆಂದು ಸ್ಮಾರ್ಟ್ ಪೋಲ್‌ನಲ್ಲಿ ಪ್ಯಾನಿಕ್ ಬಟನ್ ಅನ್ನು ಅಳವಡಿಸಲಾಗಿದೆ. ಅಪಘಾತ ಸಹಿತ ಯಾವುದೇ ತುರ್ತು ಸಂದರ್ಭದಲ್ಲಿ ಈ ಬಟನ್ ಒತ್ತಬಹುದು. ಆಗ ಆ ಮಾಹಿತಿ ಲಾಲ್‌ಬಾಗ್‌ನ ಪಾಲಿಕೆ ಕಟ್ಟಡದಲ್ಲಿರುವ ಸ್ಮಾರ್ಟ್‌ಸಿಟಿ ಕಮಾಂಡ್ ಕಂಟ್ರೋಲ್ ಸೆಂಟರ್ ರವಾನೆಯಾಗುತ್ತದೆ. ಆಗ ಅಧಿಕಾರಿಗಳು ಇದೇ ಪೋಲ್‌ನಲ್ಲಿರುವ ಮೈಕ್ ಮುಖೇನ ಸಂಭಾಷಣೆ ನಡೆಸುತ್ತಾರೆ. ಜತೆಗೆ ಸೈರನ್ ವ್ಯವಸ್ಥೆಯನ್ನೂ ಈ ಪೋಲ್ ಹೊಂದಿದೆ.
ಎಲ್ಲೆಲ್ಲಿದೆ ಸ್ಮಾರ್ಟ್ ಪೋಲ್?
ಮಂಗಳೂರು 14 ಕಡೆಗಳಲ್ಲಿ ಅತ್ಯುನ್ನತ ಗುಣಮಟ್ಟದ ಸಿಸಿ ಕೆಮರಾಗಳನ್ನು ಅಳವಡಿಸಲಾಗಿದೆ. ಬೆಂದೂರ್, ಬಂಟ್ಸ್‌ಹಾಸ್ಟೆಲ್, ಹ್ಯಾಮಿಲ್ಟನ್ ವೃತ್ತ, ಹಂಪನಕಟ್ಟೆ, ಕಾವೂರು, ಸರ್ಕೀಟ್ ಹೌಸ್, ಲೇಡಿಹಿಲ್, ಲಾಲ್‌ಬಾಗ್, ಮಲ್ಲಿಕಟ್ಟೆ, ಪದವಿನಂಗಡಿ, ಪಡೀಲ್, ಪಂಪ್‌ವೆಲ್, ಪಿವಿಎಸ್ ಜಂಕ್ಷನ್, ರಾವ್ ಆ್ಯಂಡ್‌ರಾವ್ ವೃತ್ತಗಳಲ್ಲಿ ಕೆಮರಾ ಅಳವಡಿಸಲಾಗಿದೆ.
ಸಾರ್ವಜನಿಕರಿಗೆ ಮಾಹಿತಿ
ನಗರದ 14 ಕಡೆಗಳಲ್ಲಿ ಸ್ಮಾರ್ಟ್ ಸಿಸಿ ಕೆಮರಾ ಅಳವಡಿಸಲಾಗಿದ್ದು, ಈ ಪೋಲ್ ನಲ್ಲಿನ ಡಿಸ್‌ಪ್ಲೇಯಲ್ಲಿ ಸಾರ್ವಜನಿಕರಿಗೆ ಮಾಹಿತಿ ನೀಡಲಾಗುತ್ತಿದೆ. ಮಂಗಳೂರಿನ ಹವಾಮಾನ, ಟ್ರಾಫಿಕ್, ವಾಯುಮಾಲಿನ್ಯದ ಮಾಹಿತಿಯನ್ನು ನೀಡಲಾಗುತ್ತಿದೆ.
-ಅರುಣ್ ಪ್ರಭ, ಸ್ಮಾರ್ಟ್‌ಸಿಟಿ ಜನರಲ್ ಮ್ಯಾನೇಜರ್