Advertisement

ಬಂಗಾಲ ಕೊಲ್ಲಿಯಲ್ಲಿ ವಾಯುಭಾರ ಕುಸಿತ ; ದಕ್ಷಿಣ ಕರ್ನಾಟಕದಲ್ಲಿ ವರ್ಷಧಾರೆ?

07:28 AM May 27, 2020 | Hari Prasad |

ಹೊಸದಿಲ್ಲಿ: ಕರ್ನಾಟಕವು ಮುಂದಿನ ಕೆಲವು ದಿನಗಳ ಕಾಲ ಎರಡು ರೀತಿಯ ಹವಾಮಾನ ಪರಿಸ್ಥಿತಿ ಎದುರಿಸಬೇಕಿದೆ.

Advertisement

ಉತ್ತರ ಕರ್ನಾಟಕದಲ್ಲಿ ಬಿಸಿಲಿನ ಝಳ ಹೆಚ್ಚಾಗುತ್ತಿದ್ದರೆ, ದಕ್ಷಿಣ ಕರ್ನಾಟಕದಲ್ಲಿ ಇನ್ನೂ ಎರಡು – ಮೂರು ದಿನ ಭಾರೀ ಮಳೆಯಾಗುವ ಸಂಭವ ಇದೆ.

ಮಂಗಳವಾರ ರಾಜ್ಯದ ಕೆಲವೆಡೆ ಭಾರೀ ಮಳೆಯಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಗುಡುಗು, ಸಿಡಿಲು, ಗಾಳಿ ಸಹಿತ ಉತ್ತಮ ಮಳೆಯಾಗಿದೆ.

ದಕ್ಷಿಣ ಒಳನಾಡಿನಲ್ಲಿ ಇನ್ನೂ ನಾಲ್ಕೈದು ದಿನ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಬಂಗಾಲ ಕೊಲ್ಲಿ ಮತ್ತು ಅರಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಉತ್ತಮ ಮಳೆಯಾಗುತ್ತಿದೆ ಎಂಬುದು ಹವಾಮಾನ ಇಲಾಖೆಯ ಮಾಹಿತಿ.

ಉತ್ತರದಲ್ಲಿ ಬಿಸಿಲಿನ ಹಾವಳಿ
ಹವಾಮಾನ ಇಲಾಖೆಯ ಪ್ರಕಾರ ಮುಂದಿನ ಎರಡು ದಿನ ಉತ್ತರ ಒಳನಾಡಿನ ಐದು ಜಿಲ್ಲೆಗಳಲ್ಲಿ ಬಿಸಿಲಿನ ತೀವ್ರತೆ ಹೆಚ್ಚು ಇರಲಿದೆ. ಕಲಬುರಗಿಯಲ್ಲಿ ಮಂಗಳವಾರ 44.7 ಡಿಗ್ರಿ ಸೆ. ಗರಿಷ್ಠ ಉಷ್ಣಾಂಶ ದಾಖಲಾಗಿದೆ. ಅಲ್ಲದೆ ಮಹಾರಾಷ್ಟ್ರ, ತೆಲಂಗಾಣ ಭಾಗದಲ್ಲಿ ಬಿಸಿಗಾಳಿ ಇರುವುದರಿಂದ ಉ.ಕರ್ನಾಟಕದ ಬಾಗಲಕೋಟೆ, ಬೀದರ್‌, ಯಾದಗಿರಿ, ವಿಜಯಪುರ, ಕಲಬುರಗಿ ಜಿಲ್ಲೆಗಳಲ್ಲಿ ತೀವ್ರ ಝಳದ ಸಾಧ್ಯತೆ ಇದೆ.

Advertisement

ಬೆಂಗಳೂರು: ಮಳೆಗೆ ಇಬ್ಬರು ಬಲಿ
ಬೆಂಗಳೂರಿನಲ್ಲಿ ಮಂಗಳವಾರದ ಮಳೆ ಸಂದರ್ಭ ಬೇಗೂರಿನಲ್ಲಿ ಸ್ಕೂಟಿ ಮೇಲೆ ಮರ ಉರುಳಿ ಹೇಮಾ (45) ಮತ್ತು ನಂದಿನಿ ಲೇಔಟ್‌ ನಲ್ಲಿ ಗಾಳಿ ಮಳೆ ಸಂದರ್ಭ ನಿರ್ಮಾಣ ಹಂತದ ಕಟ್ಟಡದ 3ನೇ ಅಂತಸ್ತಿನಿಂದ ಸಿಮೆಂಟ್‌ ಕರಗಿ ಇಟ್ಟಿಗೆ ಬಿದ್ದು ಶಿಲ್ಪಾ (20) ಸಾವಿಗೀಡಾಗಿದ್ದಾರೆ.

ಎಲ್ಲೋ ಅಲರ್ಟ್‌
ಮಲೆನಾಡು ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಚಿಕ್ಕಮಗಳೂರು, ಶಿವಮೊಗ್ಗ, ಬಳ್ಳಾರಿ, ದಾವಣಗೆರೆ, ಹಾಸನ, ಕೊಡಗು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ಕೋಲಾರದಲ್ಲಿ ಎಲ್ಲೋ ಅಲರ್ಟ್‌ ಘೋಷಣೆ ಮಾಡಲಾಗಿದೆ.

ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡಗಳಲ್ಲಿ ಬುಧವಾರ ಒಂದು ದಿನ ಉತ್ತಮ ಮಳೆಯಾಗುವ ಸಾಧ್ಯತೆ ಇದೆ. ಕೆಲವು ಜಿಲ್ಲೆಗಳಲ್ಲಿ ಭಾರೀ ಗಾಳಿ, ಗುಡುಗು, ಸಿಡಿಲು ಮತ್ತು ಆಲಿಕಲ್ಲು ಸಹಿತ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next