ಬೆಳಗಾವಿ ಲೋಕಸಭೆ, ಮಸ್ಕಿ ಮತ್ತು ಬಸವಕಲ್ಯಾಣ ಕ್ಷೇತ್ರಗಳಲ್ಲಿ ಉಪ ಚುನಾವಣೆ ರಂಗೇರುತ್ತಿದೆ. ಈ ಬಾರಿ ಬಿಸಿಲಿನ ಪ್ರಖರತೆ ಜತೆಗೆ ಚುನಾವಣೆ ಕಾವು ಕೂಡ ಇದೆ. ಕಳೆದ ವರ್ಷ ಲಾಕ್‌ಡೌನ್ ಇದ್ದುದರಿಂದ ತಾಪದ ಅನುಭವ ಅಷ್ಟಾಗಿ ಆಗಿರಲಿಲ್ಲ.
Advertisement
ಸಾಮಾನ್ಯವಾಗಿ ಈ ಅವಧಿಯಲ್ಲಿ ಬೆಳಗಾವಿ ಭಾಗದಲ್ಲಿ ತಾಪ 32 ಡಿಗ್ರಿ ಸೆ.ಯಿಂದ 34 ಡಿಗ್ರಿ ಸೆ. ವರೆಗೆ ಇರುತ್ತದೆ. ಆದರೆ ಈ ಬಾರಿ ರವಿವಾರ ಗರಿಷ್ಠ ತಾಪ 35.2 ಡಿಗ್ರಿ ಸೆ. ದಾಖಲಾಗಿದೆ. ಮೂರ್‍ನಾಲ್ಕು ದಿನಗಳಿಂದ ತಾಪಮಾನ 34 ಡಿಗ್ರಿ ಸೆ.ಗಿಂತ ಹೆಚ್ಚೇ ಇದೆ. ರಾಯಚೂರಿನ ಮಸ್ಕಿ, ಬೀದರ್‌ನ ಬಸವಕಲ್ಯಾಣದಲ್ಲೂ ಬಿಸಿಲಿನ ಆರ್ಭಟ ಜೋರಾಗಿದೆ.
ಬಿಸಿಲಿನ ಪ್ರಮಾಣ ಹೆಚ್ಚುತ್ತಿರುವುದರಿಂದ ಅಭ್ಯರ್ಥಿಗಳು ಬೆಳಗ್ಗೆ ಮತ್ತು ಸಂಜೆ ಮಾತ್ರ ಪ್ರಚಾರಕ್ಕೆ ಒತ್ತು ಕೊಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳ ಬಳಕೆಗೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ. ಕಲಬುರಗಿಯಲ್ಲಿ ಗರಿಷ್ಠ ತಾಪ
ಕಲಬುರಗಿಯಲ್ಲಿ ರವಿವಾರ ರಾಜ್ಯದಲ್ಲೇ ಗರಿಷ್ಠ ತಾಪ 40.6 ಡಿಗ್ರಿ ಸೆ. ದಾಖಲಾಗಿದೆ. ಇದು ಕಳೆದ 10 ವರ್ಷಗಳಲ್ಲಿ 3ನೇ ಬಾರಿ ದಾಖಲಾಗಿರುವ ಗರಿಷ್ಠ ತಾಪ. ಇಲ್ಲಿ 2013ರ ಮಾ. 30ರಂದು ಮತ್ತು 2014ರ ಮಾ. 31ರಂದು 40.9 ಡಿ.ಸೆ ತಾಪಮಾನ ದಾಖಲಾಗಿತ್ತು.
Related Articles
ಕರಾವಳಿಯಲ್ಲಿಯೂ ಬಿಸಿಲಿನ ತಾಪ ಹೆಚ್ಚುತ್ತಿದೆ. ಜತೆಗೆ ವಾತಾವರಣದಲ್ಲಿ ತೇವಾಂಶ ಇರುವುದರಿಂದ ಸೆಖೆಯ ಅನುಭವ ಬಲವಾಗಿದೆ. ರವಿವಾರ ಮಂಗಳೂರು ವಿಮಾನ ನಿಲ್ದಾಣದಲ್ಲಿ ಗರಿಷ್ಠ ತಾಪಮಾನ 34.7 ಡಿಗ್ರಿ ಸೆ. ದಾಖಲಾಗಿತ್ತು. ಪಣಂಬೂರಿನಲ್ಲಿ 36.4 ಡಿಗ್ರಿ ಸೆ. ದಾಖಲಾಗಿದ್ದು, ಇದು ವಾಡಿಕೆಗಿಂತ 3.5 ಡಿಗ್ರಿ ಸೆ. ಅಧಿಕವಾಗಿದೆ. ಇದೇವೇಳೆ ಒಂದೆರಡು ವಾರಗಳಿಂದ ಅಲ್ಲಲ್ಲಿ ಮಳೆ ಸುರಿಯುತ್ತಿದ್ದು, ಇದು ಕೂಡ ಹಗಲಿನಲ್ಲಿ ಸೆಖೆಯ ಅನುಭವವನ್ನು ಹೆಚ್ಚಿಸಿದೆ.
Advertisement