Advertisement

ಗೆಲುವು ಸೋಲಿನ ಬೆಟ್ಟಿಂಗ್‌ ಹವಾ?

12:58 AM Apr 06, 2019 | mahesh |

ಬೆಳ್ತಂಗಡಿ: ಪ್ರತಿ ವರ್ಷ ಐಪಿಎಲ್‌ನಲ್ಲಿ ಕಂತೆ ಕಂತೆ ಎಣಿಸುತ್ತಿದ್ದ ಬುಕ್ಕಿಗಳು ಈ ಬಾರಿ ರಾಜಕೀಯ ಸೋಲು ಗೆಲುವಿನ ಲೆಕ್ಕಾಚಾರದಲ್ಲಿ ವ್ಯವಹಾರ ಕುದುರಿಸುವಂತೆ ಕಾಣುತ್ತಿದೆ.

Advertisement

ಈ ಸಲ ಲೋಕಸಭಾ ಚುನಾವಣೆ ಮತ್ತು ಐಪಿಎಲ್‌ ಒಂದೇ ಸಮಯದಲ್ಲಿ ಬಂದಿರುವುದರಿಂದ ರಾಜಕೀಯ ಜಿದ್ದಾ ಜಿದ್ದಿಯ ಮಧ್ಯೆ ಐಪಿಎಲ್‌ ಮಂಕಾದಂತೆ ಕಾಣುತ್ತಿದೆ. ಜನಚಿತ್ತ ಲೋಕಸಭಾ ಚುನಾವಣೆಯತ್ತ ನೆಟ್ಟಿದೆ. ಎಲ್ಲೆಡೆ ಮತ ಬೇಟೆ ಲೆಕ್ಕಾಚಾರ ನಡೆಯುತ್ತಿದ್ದು, ಜನ ಸಾಮಾನ್ಯರೂ ಯಾರು ಗೆಲ್ಲಬಹುದು-ಯಾರು ಸೋಲ ಬಹುದು ಎಂಬ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಇದು ಹಣದ ಹೊಳೆಗೂ ಕಾರಣವಾಗುವ ಸಾಧ್ಯತೆ ಇದೆ.

ರಾಜಕೀಯ ಪಕ್ಷಗಳ ಮುಖಂಡರು ತಮ್ಮ ಅಭ್ಯರ್ಥಿ ಗೆಲುವಿಗೆ ಶತಾಯಗತಾಯ ಪ್ರಯತ್ನ ನಡೆಸುತ್ತಿದ್ದಾರೆ. ಬಿಜೆಪಿ ಮೋದಿ ಅಲೆಯಲ್ಲಿ ತೇಲುತ್ತಿದ್ದು, ಮತ್ತೆ ಗೆಲುವು ನಮ್ಮದೇ ಎಂಬ ವಿಶ್ವಾಸದಲ್ಲಿದೆ. ಇತ್ತ ಕಾಂಗ್ರೆಸ್‌, ಮೋದಿಯವರನ್ನು ಸೋಲಿಸುವ ಉದ್ದೇಶದಿಂದ ವಿಪಕ್ಷಗಳ ಜತೆಗೂಡಿ ಬಿರುಸಿನ ಪ್ರಚಾರ ನಡೆಸುತ್ತಿದೆ.

ಇದರಿಂದಲೇ ಬೇಳೆ ಬೇಯಿಸಿಕೊಳ್ಳಲು ಬಯಸಿರುವ ಕೆಲವರು ಬೆಟ್ಟಿಂಗ್‌ ದಂಧೆಯಲ್ಲಿ ತೊಡಗಿದ್ದಾರೆ. ಪಕ್ಷ ಮತ್ತು ನಾಯಕರ ಅಭಿಮಾನಿಗಳಿಂದ ಸೋಲು ಗೆಲುವಿನ ಲೆಕ್ಕಾಚಾರ ಮತ್ತು ಅಭ್ಯರ್ಥಿಗಳು ಎಷ್ಟು ಮತಗಳ ಅಂತರ ಕಾಯ್ದುಕೊಳ್ಳುತ್ತಾರೆ ಎಂಬ ನಿಟ್ಟಿನಲ್ಲಿ ಬೆಟ್ಟಿಂಗ್‌ ಸದ್ದಿಲ್ಲದೆ ಕುದುರುತ್ತಿದೆ.

ಬೆಟ್ಟಿಂಗ್‌ ನಡೆಸುವವರ ಬಗ್ಗೆ ಪೊಲೀಸ್‌ ಇಲಾಖೆ ಕಣ್ಣಿಟ್ಟಿದೆ. ಮತ್ತೂಂದೆಡೆ ಹಣದ ಸಾಗಾಟ ಮತ್ತು ಬ್ಯಾಂಕ್‌ ವ್ಯವಹಾರದ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಹೆಚ್ಚಿನ ನಿಗಾ ವಹಿಸಿದ್ದಾರೆ. ಇದರ ನಡುವೆಯೂ ಅವ್ಯವಹಾರ, ಅಕ್ರಮ ಸಾಗಾಟ ನಡೆಸಲಾಗುತ್ತಿದೆ ಎಂಬ ಮಾತು ಕೇಳಿಬರುತ್ತಿದೆ.

Advertisement

ಮಂಡ್ಯ, ಮೈಸೂರಿನಲ್ಲಿ ದನ, ಕುರಿ ಬೆಟ್ಟಿಂಗ್‌
ದ.ಕ. ಜಿಲ್ಲೆಯಲ್ಲಿ ಹಣದ ಲೆಕ್ಕಾಚಾರವೇ ಹೆಚ್ಚು. ಆದರೆ ಬೆಂಗಳೂರು, ಮೈಸೂರು, ಮಂಡ್ಯಗಳಲ್ಲಿ ಹಾಗಲ್ಲ. ಹಸು, ಕುರಿ, ಆಸ್ತಿ, ಬಾಡೂಟ ಸೇರಿದಂತೆ ಮನೆ ಸಾಮಗ್ರಿ ಅಡವಿಟ್ಟಾದರೂ ನೆಚ್ಚಿನ ಅಭ್ಯರ್ಥಿ ಪರ ಸೋಲು ಗೆಲುವಿನ ಲೆಕ್ಕಾಚಾರದಲ್ಲಿರುತ್ತಾರೆ.

ಆರ್ಥಿಕ ಸಂಕಷ್ಟಕ್ಕೂ ಕಾರಣ
ಬೆಟ್ಟಿಂಗ್‌ ವಿಚಾರದಲ್ಲಿ ಹಣ ಹೊಂದಿಸಲಾಗದೆ ಆರ್ಥಿಕ ಸಂಕಷ್ಟ ಎದುರಿಸುವ ಸಾಧ್ಯತೆ ಇರುತ್ತದೆ. ಆದರೆ ಠಾಣೆ ಮೆಟ್ಟಿಲೇರಿದರೆ ಪ್ರಕರಣ ತೀವ್ರ ಸ್ವರೂಪ ಪಡೆಯುವ ಸಾಧ್ಯತೆ ಇರುವುದರಿಂದ ಮುಚ್ಚಿಹೋಗುವ ಸಾಧ್ಯತೆ ಇದೆ.

ಈವರೆಗೆ ಇಂಥ ರಾಜಕೀಯ ಬೆಟ್ಟಿಂಗ್‌ ಪ್ರಕರಣ ಜಿಲ್ಲೆಯಲ್ಲಿ ಕಂಡುಬಂದಿಲ್ಲ. ಐಪಿಎಲ್‌ ಬೆಟ್ಟಿಂಗ್‌ ಪ್ರಕರಣಗಳು ಜಿಲ್ಲೆಯಲ್ಲಿ ವಿರಳ. ಯಾವುದೇ ಬೆಟ್ಟಿಂಗ್‌ನಲ್ಲಿ ತೊಡಗಿದರೆ ಕಾನೂನು ಕ್ರಮ ಜರಗಿಸಲಾಗುವುದು.
ಬಿ.ಎಂ. ಲಕ್ಷ್ಮೀಪ್ರಸಾದ್‌, ದ.ಕ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ಚೈತ್ರೇಶ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next