ಮುದ್ದೇಬಿಹಾಳ: ಕೋವಿಡ್ ನಿಯಂತ್ರಣಕ್ಕೆ ಮಾಸ್ಕ್ ಧರಿಸುವುದು ಎಲ್ಲರಿಗೂ ಮೊದಲ ಆದ್ಯತೆ ಆಗಬೇಕು. ಇದರಿಂದ ಶೇ.80 ಪ್ರಮಾಣದಲ್ಲಿ ಸೋಂಕು ನಿವಾರಿಸಬಹುದಾಗಿದೆ ಎಂದು ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಹೇಳಿದರು.
ಇಲ್ಲಿನ ಮಾರುತಿನಗರ ಬಡಾವಣೆಯ ಬಿಇಒ ಕಚೇರಿ ಬಳಿ ಇರುವ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಕೊರೊನಾ ನಿಯಂತ್ರಣಕ್ಕೆ ಪ್ರಾರ್ಥಿಸಿ ಬಡಾವಣೆ ನಿವಾಸಿಗಳು ಶನಿವಾರ ಏರ್ಪಡಿಸಿದ್ದ ವಿಶೇಷ ಸಂಕಲ್ಪ ಮತ್ತು ಲಕ್ಷ್ಮೀ ನಾರಾಯಣ ಪೂಜಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ದೇವಸ್ಥಾನದಲ್ಲಿ ದೇವರಿಗೆ ಪೂಜೆ ಸಲ್ಲಿಸುವುದು ನಮ್ಮ ನಂಬಿಕೆ, ಧೈರ್ಯ ಹೆಚ್ಚಿಸುತ್ತದೆಯೇ ಹೊರತು ರೋಗ ನಿಯಂತ್ರಿಸುವುದಿಲ್ಲ. ಪ್ರತಿಯೊಬ್ಬರೂ ನೈಜ ಪಾಲನೆಗೆ ಹೆಚ್ಚು ಒತ್ತು ಕೊಡಬೇಕು. ಮನೆಯಿಂದ ಹೊರಗೆ ಬರುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸುವ ಜೊತೆಗೆ ಸ್ಯಾನಿಟೈಸರ್ ಬಳಸುವ ಮೂಲಕ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕೆಂದು ಸಲಹೆ ನೀಡಿದರು.
ಮಾಸ್ಕ್ ಧರಿಸದೇ ಓಡಾಡುವವರಿಗೆ 100 ರೂ. ದಂಡ ವಿಧಿಸುವ ನಿಯಮ ಜಾರಿಗೊಳ್ಳಲಿದೆ. ಲಾಕ್ ಡೌನ್ ನಂತರವೂ ಭೂರಹಿತ ಕೃಷಿ ಕಾರ್ಮಿಕರಿಗೆ ಉದ್ಯೋಗ ಕೊಡಿಸಲು ಜಿಪಂ ಕ್ಷೇತ್ರ ಭೇಟಿ ಅಭಿಯಾನ ನಡೆಸಿ 16 ಸಾವಿರ ಜನರಿಗೆ ಉದ್ಯೋಗ ದೊರಕುವಂತೆ ನೋಡಿಕೊಂಡಿದ್ದೇನೆ. ಪಟ್ಟಣದ ಅಭಿವೃದ್ಧಿಗೆ ಬಿಡುಗಡೆಯಾದ 10 ಕೋಟಿ ರೂ. ವಿಶೇಷ ಯೋಜನೆಗೆ ಮುಖ್ಯಮಂತ್ರಿಗಳ ಬಳಿ ಮಾತನಾಡಿ ಚಾಲನೆ ದೊರಕಿಸಿಕೊಟ್ಟಿದ್ದೇನೆ. ದಾಸೋಹವನ್ನು ಕಾಯಕವನ್ನಾಗಿಸಿಕೊಂಡಿರುವ ನನ್ನ ಮನೆ ಬಡ ಜನರಿಗೋಸ್ಕರ ಸದಾ ತೆರೆದಿರುತ್ತದೆ ಎಂದರು.
ಇದೇ ಸಂದರ್ಭದಲ್ಲಿ ದೇವಸ್ಥಾನ ನವೀಕರಣಕ್ಕೆ ನೆರವು ನೀಡಿದ ಶಾಸಕ ನಡಹಳ್ಳಿ, ಗುತ್ತಿಗೆದಾರ ಸುರೇಶಗೌಡ ಪಾಟೀಲ, ದೇವಸ್ಥಾನದ ಅಧ್ಯಕ್ಷ ನಾಗರಾಜ ತೊಂಡಿಹಾಳ, ಕೊಟ್ಟೂರಸ್ವಾಮಿ ಕೆಂಭಾವಿಮಠ ದಂಪತಿಯನ್ನು ಸನ್ಮಾನಿಸಲಾಯಿತು.
ಈ ವೇಳೆ ಪುರಸಭೆ ಸದಸ್ಯರಾದ ಸಂಗಮ್ಮ ದೇವರಳ್ಳಿ, ಸಹನಾ ಬಡಿಗೇರ, ಸದಾನಂದ ಮಾಗಿ, ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ಗೌರಮ್ಮ ಹುನಗುಂದ (ಬಲದಿನ್ನಿ), ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷೆ ನೀಲಮ್ಮ ಚಲವಾದಿ, ಬಿ.ಜಿ. ಜಗ್ಗಲ್, ಬಸಮ್ಮ ಸಿದರಡ್ಡಿ, ಶಾಂತಾ ಧೂಪದ, ಶಿಲ್ಪಾ ಶರ್ಮಾ, ಎಸ್. ಎಸ್.ಬಾಣಲದಿನ್ನಿ, ಬಿ.ಎಸ್. ಹೂಗಾರ, ಸಂಗಯ್ಯ ಮಠಪತಿ, ಎ.ಜಿ. ಗಂಗನಗೌಡರ, ಬಸಲಿಂಗಯ್ಯ ಹಿರೇಮಠ ಇದ್ದರು.
ಪುರಸಭೆ ಮಾಜಿ ಸದಸ್ಯ ಮನೋಹರ ತುಪ್ಪದ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ದೇವಸ್ಥಾನ ಅರ್ಚಕ ಕಿಟ್ಟು ಅಗ್ನಿಹೋತ್ರಿ ವಿಶೇಷ ಪೂಜೆ ನಡೆಸಿಕೊಟ್ಟರು.