ಭೋಪಾಲ್: ಹಿಜಾಬ್ ಧರಿಸಿ ಕಾಲೇಜಿಗೆ ತೆರಳುವಂತಿಲ್ಲ ಎಂಬ ಕರ್ನಾಟಕ ಸರಕಾರದ ಆದೇಶದ ವಿರುದ್ಧ ಮುಸ್ಲಿಮ್ ವಿದ್ಯಾರ್ಥಿನಿಯರು ಹಲವೆಡೆ ಆಕ್ರೋಶ ವ್ಯಕ್ತಪಡಿಸುತ್ತಿರುವ ಬೆನ್ನಲ್ಲೇ ಸಾರ್ವಜನಿಕವಾಗಿ ಹಿಜಾಬ್ ಧರಿಸುವುದನ್ನು ಸಹಿಸಿಕೊಳ್ಳುವುದಿಲ್ಲ ಎಂದು ವಿವಾದಿತ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಎಚ್ಚರಿಕೆ ನೀಡಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಹಿಜಾಬ್ ವಿವಾದಕ್ಕೆ ದ್ರೌಪದಿ ವಸ್ತ್ರಾಪಹರಣ ತುಲನೆ: ಸ್ವರಾ ಭಾಸ್ಕರ್ ಸಿಕ್ಕಾಪಟ್ಟೆ ಟ್ರೋಲ್
ಪ್ರಜ್ಞಾ ಸಿಂಗ್ ಠಾಕೂರ್ ಮಾಲೇಗಾಂವ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿಯಾಗಿದ್ದು, ಜಾಮೀನಿನ ಮೇಲೆ ಹೊರಗಿರುವುದಾಗಿ ವರದಿ ಹೇಳಿದೆ. ಈಗಿನ ಸನ್ನಿವೇಶದಲ್ಲಿ ಹಿಜಾಬ್ ಧರಿಸಬೇಕಾದ ಅಗತ್ಯವಿಲ್ಲ, ಯಾಕೆಂದರೆ ಹಿಂದೂಗಳು ಮಹಿಳೆಯನ್ನು ಪೂಜಿಸುತ್ತಾರೆ. ಆದರೆ ಯಾರಿಗೆ ತಮ್ಮ ಮನೆಯಲ್ಲಿ ಸುರಕ್ಷಿತವಲ್ಲ ಎಂಬ ಭಾವನೆ ಇದೆಯೋ ಅವರು ಮಾತ್ರ ಹಿಜಾಬ್ ಧರಿಸಬೇಕಾದ ಅಗತ್ಯವಿದೆ ಎಂದು ಪ್ರತಿಪಾದಿಸಿರುವುದಾಗಿ ವರದಿ ತಿಳಿಸಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಹಿಜಾಬ್ ಧರಿಸಬೇಕಾದ ಅಗತ್ಯವಿಲ್ಲ. ಯಾರಿಗೆ ತಮ್ಮ ಮನೆಯಲ್ಲಿ ಸುರಕ್ಷಿತವಲ್ಲ ಎಂಬ ಭಯ ಇದೆಯೋ ಅವರು ಧರಿಸಲಿ. ನಿಮಗೆ ಮದರಸಾ ಇದೆ, ಒಂದು ವೇಳೆ ಅಲ್ಲಿ ಬೇಕಾದರೆ ಹಿಜಾಬ್ ಧರಿಸಬೇಕೆಂದಿದ್ದರೆ ಹಾಕಿಕೊಳ್ಳಿ, ಅದಕ್ಕೆ ನಮ್ಮ ತಕರಾರಿಲ್ಲ. ಹೊರಗಡೆ ಇದು ಹಿಂದು ಸಮಾಜ, ಇಲ್ಲಿ ಹಿಜಾಬ್ ಅಗತ್ಯವಿಲ್ಲ ಎಂದು ಮಧ್ಯಪ್ರದೇಶದ ಭೋಪಾಲ್ ನ ದೇವಾಲಯದಲ್ಲಿ ಆಯೋಜಿಸಿರುವ ಸಮಾರಂಭದಲ್ಲಿ ಈ ಹೇಳಿಕೆ ನೀಡಿರುವುದಾಗಿ ವರದಿ ವಿವರಿಸಿದೆ.
ಹಿಜಾಬ್ ಎಂಬುದು ಪರ್ದಾ. ನಿಮ್ಮನ್ನು ಕೆಟ್ಟ ದೃಷ್ಟಿಯಿಂದ ನೋಡುವವರ ವಿರುದ್ಧ ಪರ್ದಾ ಬಳಸುವಂತಾದ್ದು, ಆದರೆ ಹಿಂದೂಗಳು ಮಹಿಳೆಯರನ್ನು ಪೂಜ್ಯ ಭಾವನೆಯಿಂದ ನೋಡುವುದರಿಂದ ನಿಮ್ಮನ್ನು ಕೆಟ್ಟ ದೃಷ್ಟಿಯಿಂದ ನೋಡುವುದಿಲ್ಲ. ನೀವು ಮನೆಯಲ್ಲೇ ಹಿಜಾಬ್ ಧರಿಸಿ ಎಂದು ಪ್ರಜ್ಞಾ ಠಾಕೂರ್ ತಿಳಿಸಿರುವುದಾಗಿ ವರದಿ ಹೇಳಿದೆ.