ಗದಗ: ಇಲ್ಲಿನ ನಗರಸಭೆ ಆವರಣದಲ್ಲಿ ನಡೆದ ಕಾರ್ಮಿಕ ದಿನಾಚರಣೆ ನಿಮಿತ್ತ ನಗರಸಭೆ ಪೌರಕಾರ್ಮಿಕರಿಗೆ ಹಾಗೂ ಆಶಾ ಕಾರ್ಯಕರ್ತರಿಗೆ ದಿನಸಿ ಕಿಟ್‌ನ್ನು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ವಿತರಿಸಿದರು.
ಬಳಿಕ ಮಾತನಾಡಿದ ಸಚಿವ ಸಿ.ಸಿ. ಪಾಟೀಲ, ಕೋವಿಡ್-19 ಲಾಕ್ ಡೌನ್‌ನಿಂದ ಗದಗ-ಬೆಟಗೇರಿ ನಗರದಲ್ಲಿ ವಾಸಿಸುತ್ತಿರುವ ಬಡವರಿಗೆ, ಅಸಹಾಯಕರಿಗೆ, ಹೊರರಾಜ್ಯ ವಲಸೆ ಕಾರ್ಮಿಕರಿಗೆ ವ್ಯಾಪಾರಸ್ಥರು ಕಿರಾಣಿ ಕಿಟ್ ನೀಡುವ ಮೂಲಕ ಅವರ ಜೀವನಕ್ಕೆ ಆಸರೆಯಾಗಿರುವುದು ಶ್ಲಾಘನೀಯ ಎಂದು ಹೇಳಿದರು.
ಕೋವಿಡ್ 19 ಭೀತಿ ಇಷ್ಟಕ್ಕೆ ಮುಗಿದಿಲ್ಲ. ಲಾಕ್‌ಡೌನ್ ಅವಧಿ ಮುಗಿದ ಬಳಿಕವೂ ಸಾರ್ವಜನಿಕರು ಮುಖಗವಸು ಧರಿಸಬೇಕು. ಸಾರ್ವಜನಿಕ ಸ್ಥಳದಲ್ಲಿ ಪರಸ್ಪರ ಅಂತರ ಕಾಯ್ದುಕೊಳ್ಳಬೇಕು. ಅಗತ್ಯ ಇದ್ದರೆ ಮಾತ್ರ ಮನೆಯಿಂದ ಹೊರ ಬರಬೇಕು. ಕೋವಿಡ್ 19 ನಿಯಂತ್ರಣಕ್ಕಾಗ ರಾಜ್ಯ ಮತ್ತು ಕೇಂದ್ರ ಸರಕಾರದ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಕೋವಿಡ್-19 ವಿರುದ್ಧದ ಯುದ್ಧದಲ್ಲಿ ತಮ್ಮ ಪ್ರಾಣವನ್ನೇ ಪಣಕಿಟ್ಟು, ಜನತೆಯ ಜೀವ ಉಳಿಸಲು ಹೋರಾಡುತ್ತಿರುವ ವೈದ್ಯಾಧಿಕಾರಿಗಳಿಗೆ, ನರ್ಸ್‌ಗಳಿಗೆ, ಆಶಾ ಕಾರ್ಯರ್ತೆಯರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಮೋಹನ ಮಾಳಶೆಟ್ಟಿ ಮಾತನಾಡಿ, ಲಾಕ್‌ಡೌನ್ ಹಿನ್ನೆಲೆಯಲ್ಲಿ ಅವಳಿ ನಗರದ ವ್ಯಾಪಾರಸ್ಥರು ಒಂದಾಗಿ ಸಾಮಾಜಿಕ ಕಳಕಳಿಯಿಂದ 500 ಕಿಟ್ ಗಳನ್ನು ಹಂಚುವ ಯೋಜನೆ, 4 ಸಾವಿರ ಕಿಟ್‌ಗಳನ್ನು ಹಂಚುವತ್ತ ದಾಪುಗಾಲು ಹಾಕುತ್ತಿರುವುದು ಅಭಿನಂದನಾರ್ಹ ಎಂದು ಹೇಳಿದರು.
ವಿಪ ಸದಸ್ಯ ಎಸ್.ವಿ. ಸಂಕನೂರ, ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ಜಿಪಂ ಸಿಇಒ ಆನಂದ, ಎಸ್‌ಪಿ ಯತೀಶ, ಯೋಜನಾಧಿ ಕಾರಿ ರುದ್ರೇಶ, ನಗರಸಭೆ ಪೌರಾಯುಕ್ತ ಮನ್ಸೂರಅಲಿ ಉಪಸ್ಥಿತರಿದ್ದರು.