ಚನ್ನರಾಯಪಟ್ಟಣ: ತಾಲೂಕಿನ ವಿವಿಧ ದೇವಾಲಯ ಗಳ ಮುಂಭಾಗ ಹಾಗೂ ತಮ್ಮ ಮನೆ ಆವರಣದಲ್ಲಿ ಆಯುಧ ಪೂಜೆಯ ಸಂಭ್ರಮ ಮನೆ ಮಾಡಿದ್ದು ತಮ್ಮ ಬಳಿ ಇರುವ ವಾಹನಗಳು ಹಾಗೂ ಆಯುಧ ವನ್ನು ಪೂಜಿಸುವ ಮೂಲಕ ಮಹಾನವಮಿ ಆಯುಧ ಪೂಜೆಯನ್ನು ಸಾಂಪ್ರದಾಯಿಕವಾಗಿ ಆಚರಣೆ ಮಾಡಿದರು.
ರೈತರು ತಮ್ಮ ಕೃಷಿಗೆ ಬಳಸುವ ಕೃಷಿಪರಿಕರವನ್ನು ಪೂಜೆ ಸಲ್ಲಿಸಿದರೆ, ವಾಹನ ರಿಪೇರಿ ಮಾಡುವ ಅಂಗಡಿ ಮಾಲೀಕರು ತಮ್ಮ ಬಳಿ ಇರುವ ವಸ್ತುಗಳನ್ನು ಸ್ವತ್ಛತೆ ಮಾಡಿ ಅಂಗಡಿಯನ್ನು ಹೂವು ಹಾಗೂ ಬಣ್ಣ ಬಣ್ಣದ ಬಲೂನಿನಿಂದ ಸಿಂಗರಿಸಿ ಪೂಜೆ ಸಲ್ಲಿಸಿದರು. ಇನ್ನು ಹತ್ತಾರು ವಾಹನ ಇಟ್ಟುಕೊಂಡಿರುವವರು ತಮ್ಮ ಮನೆ ಆವರಣದಲ್ಲಿ ಎಲ್ಲವನ್ನೂ ಸಾಲಾಗಿ ನಿಲ್ಲಿಸಿ ಬೂದು ಕುಂಬಳ ನಿಂಬೆಹಣ್ಣು ಬಲಿ ಕೊಟ್ಟು ಪೂಜೆ ಸಲ್ಲಿಸಿದರು.
ಇದನ್ನೂ ಓದಿ;- ಚಿನ್ನದ ಅಂಬಾರಿಯನ್ನ ಹೊತ್ತು ರಾಜಗಾಂಭೀರ್ಯ ಹೆಜ್ಜೆ ಹಾಕಿದ ಕ್ಯಾಪ್ಟನ್ ಅಭಿಮನ್ಯು
ಒಂದೆರಡು ವಾಹನ ಹೊಂದಿರುವವರು ವಾಹನ ಸಿಂಗಾರ ಮಾಡಿ ಇಷ್ಟ ದೇವಾಲಯಕ್ಕೆ ಇಲ್ಲವೆ ಮನೆ ದೇವರು ನೆಲೆಸಿರುವ ಶ್ರೀಕ್ಷೇತ್ರಕ್ಕೆ ತಮ್ಮ ವಾಹನವನ್ನು ತೆಗೆದುಕೊಂಡು ಹೋಗಿ ಪೂಜೆ ಮಾಡಿಸಿದರು. ತಾಲೂಕಿನಲ್ಲಿ ಹೆಚ್ಚು ಮಂದಿ ಗುತ್ತಿಗೆದಾರರಿದ್ದು ಅವರ ಬಳಿ ಜೆಸಿಬಿ, ಕಾಂಕ್ರಿಟ್ ಮಿಕ್ಸರ್ ವಾಹನ, ಲಾರಿ, ಟಿಪ್ಪರ್ ಸೇರಿದಂತೆ ಕಟ್ಟಡ ನಿರ್ಮಾಣ, ರಸ್ತೆ ನಿರ್ಮಾ ಣಕ್ಕೆ ಅಗತ್ಯ ಇರುವ ಯಂತ್ರದ ವಾಹನವನ್ನು ಒಟ್ಟಿಗೆ ನಿಲ್ಲಿಸಿ ಪೂಜೆ ಸಲ್ಲಿಸಿದರು.
ಕೆಲ ಗುತ್ತಿಗೆದಾರರು ತಮ್ಮ ವಾಹನ ಚಾಲಕರಿಗೆ ಹೊಸ ಬಟ್ಟೆ ಹಾಗೂ ಸಿಹಿ ನೀಡುವ ಮೂಲಕ ಆಯುಧ ಪೂಜೆಯನ್ನು ವಿಷೇಶವಾಗಿ ಆಚರಣೆ ಮಾಡಿದರೆ, ಕ್ರಷರ್ ಮಾಲೀಕರು, ಇಟ್ಟಿಗೆ ತಯಾರು ಮಾಡುವ ಕಾರ್ಖಾನೆ ಮಾಲೀಕರು ಕುರಿ ಕೋಳಿ ಬಲಿ ಕೊಟ್ಟು ಆಯುಧ ಪೂಜೆಯನ್ನು ಬಹಳ ವಿಜೃಂಭಣೆ ಯಿಂದ ಆಚರಿಸಲಾಯಿತು.