Advertisement

ಆಯುಧಪೂಜೆ-ವಿಜಯದಶಮಿ ಎಫೆಕ್ಟ್: ಎರಡೇ ದಿನದಲ್ಲಿ 6,200-6,500 ಟನ್‌ ತ್ಯಾಜ್ಯ ಸೃಷ್ಟಿ

10:25 AM Oct 16, 2021 | Team Udayavani |

ಬೆಂಗಳೂರು: ಆಯುಧ ಪೂಜೆ ಹಾಗೂ ವಿಜಯ ದಶಮಿ ಹಬ್ಬದ ಹಿನ್ನೆಲೆಯಲ್ಲಿ ನಗರದಲ್ಲಿ ಸಾಮಾನ್ಯ ದಿನಗಳಿಗಿಂತ ಹೆಚ್ಚು ತ್ಯಾಜ್ಯ ಸೃಷ್ಟಿಯಾಗಿದ್ದು, ಈ ಮಧ್ಯೆ ಮಳೆ ನಿರಂತರವಾಗಿ ಸುರಿಯುತ್ತಿದೆ. ಪರಿಣಾಮ ನಗರದಲ್ಲಿ “ದಿಢೀರ್‌ ನೆರೆ’ ಜತೆಗೆ ಕಸ ವಿಲೇವಾರಿ ಸಮಸ್ಯೆ ಕೂಡ ಕಾಡುತ್ತಿದೆ.

Advertisement

ಇದು ಪಾಲಿಕೆಗೆ ತಲೆನೋವಾಗಿ ಪರಿಣಮಿಸಿದೆ. ಹಬ್ಬದ ಹಿನ್ನೆಲೆಯಲ್ಲಿ ಸುತ್ತಲಿನ ಗ್ರಾಮಾಂತರ ಪ್ರದೇಶಗಳಿಂದ ಬಾಳೆಕಂದು, ಮಾವಿನ ಎಲೆ, ಬೂದು ಕುಂಬಳಕಾಯಿ ಸಾಕಷ್ಟು ಪ್ರಮಾಣದಲ್ಲಿ ಬಂದಿತ್ತು. ಶುಕ್ರವಾರ ಸಂಜೆಯಾಗುತ್ತಿದ್ದಂತೆ ರೈತರು ಹಾಗೂ ವ್ಯಾಪಾರಿಗಳು ತಂದಿರುವ ವಸ್ತುಗಳನ್ನು ಅಲ್ಲಅಲ್ಲೇ ಬಿಟ್ಟು ಹೋಗಿದ್ದಾರೆ.

ಈ ತ್ಯಾಜ್ಯ ತೆರವುಗೊಳಿಸುವಷ್ಟರಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಇದು ವಿಲೇವಾರಿಗೆ ಅಡತಡೆ ಉಂಟುಮಾಡಿದೆ. ಹಾಗಾಗಿ, ಶನಿವಾರದವರೆಗೆ ಸಮಸ್ಯೆ ಮುಂದುವರಿಯುವ ಸಾಧ್ಯತೆ ಇದೆ. ಕೆ.ಆರ್‌. ಮಾರುಕಟ್ಟೆ, ಮಲ್ಲೇಶ್ವರ, ಮಡಿವಾಳ, ಕೆ.ಆರ್‌. ಪುರ ಸೇರಿದಂತೆ ಪ್ರಮುಖ ಮಾರುಕಟ್ಟೆಗಳಲ್ಲಿ ಈ ತ್ಯಾಜ್ಯ ಕಂಡುಬಂತು. ಈ ನಡುವೆ ರಸ್ತೆ ಬದಿಗಳಲ್ಲಿ ಬಾಳೆಕಂದು, ಮಾವಿನ ಎಲೆ ಬಿದ್ದಿದ್ದರಿಂದ ಮಳೆ ನೀರಿನಲ್ಲಿ ಅದು ಸೇರಿಕೊಂಡು, ಚರಂಡಿಗಳಲ್ಲಿ ನೀರು ಸರಾಗವಾಗಿ ಹರಿಯಲು ಮತ್ತಷ್ಟು ಅಡ್ಡಿ ಉಂಟುಮಾಡಿದ ಘಟನೆಗಳೂ ಅಲ್ಲಲ್ಲಿ ವರದಿಯಾಗಿವೆ.

ಅಂತಹ ಕಡೆಗಳಲ್ಲಿ ಪಾಲಿಕೆ ಸಿಬ್ಬಂದಿ ಮಳೆಯಲ್ಲೇ ಭೇಟಿ ನೀಡಿ, ತೆರವುಗೊಳಿಸಿದರು. ಇನ್ನು ಹಲವೆಡೆ ತ್ಯಾಜ್ಯವನ್ನು ಕಾಂಪ್ಯಾಕ್ಟರ್‌ನಲ್ಲಿ ತುಂಬಿ ನಿಲ್ಲಿಸಲಾಗಿದ್ದು, ಲ್ಯಾಂಡ್‌ಫಿಲ್‌ ಮತ್ತು ತ್ಯಾಜ್ಯ ಸಂಸ್ಕರಣಾ ಘಟಕಗಳಿಗೆ ತೆಗೆದುಕೊಂಡು ಹೋಗಲು ಅಡ್ಡಿಯಾಗಿದ್ದು, ಶನಿವಾರ ಬೆಳಗ್ಗೆ ಹೊತ್ತಿಗೆ ವಿಲೇವಾರಿ ಆಗಲಿದೆ ಎಂದು ಅಧಿಕಾರಿಗಳು “ಉದಯವಾಣಿ’ಗೆ ತಿಳಿಸಿದರು.

ಆಯುಧ ಪೂಜೆ ಹಾಗೂ ವಿಜಯದಶಮಿ ಒಳಗೊಂಡಂತೆ ಎರಡೂ ದಿನಗಳಲ್ಲಿ ಸುಮಾರು 6,200-6,500 ಟನ್‌ ತ್ಯಾಜ್ಯ ಸೃಷ್ಟಿಯಾಗಿದ್ದು, ಇವುಗಳ ತೆರವಿಗೆ ನಗರದಾದ್ಯಂತ ಅಂದಾಜು 591 ಕಾಂಪ್ಯಾಕ್ಟರ್‌ಗಳು ಕಾರ್ಯನಿರ್ವಹಿಸುತ್ತಿವೆ.

Advertisement

ಇದನ್ನೂ ಓದಿ:- ಕೋಟಿಗೊಬ್ಬ-3 ಚಿತ್ರ ವಿಮರ್ಶೆ: ಸತ್ಯ ಶೋಧನೆಯಲ್ಲಿ ದೊರೆತ ಶಿವ ಸಾಂಗತ್ಯ

ಇದು ಸಾಮಾನ್ಯ ದಿನಗಳಿಗೆ ಹೋಲಿಸಿದರೆ, ಶೇ. 30ರಷ್ಟು ಹೆಚ್ಚುವರಿ ಆಗಿದೆ. ಆದರೆ, ಇದರ ವಿಲೇವಾರಿಗೆ ವ್ಯವಸ್ಥಿತ ಯೋಜನೆ ರೂಪಿಸಿದ್ದರಿಂದ ಯಾವುದೇ ಸಮಸ್ಯೆ ಆಗಿಲ್ಲ. ಲ್ಯಾಂಡ್‌ಫಿಲ್‌ನಲ್ಲಿ ಕೂಡ ಮಣ್ಣಿನ ಪದರು ಮಾಡಿ, ಸುರಿಯಲಾಗುತ್ತಿದೆ. ಹಾಗಾಗಿ, ತ್ಯಾಜ್ಯ ವಿಲೇವಾರಿ ವಾಹನಗಳ ಸಂಚಾರ ಕೂಡ ಸರಾಗವಾಗಿದೆ. ಒಂದು ವೇಳೆ ನಿರಂತರ ಮಳೆ ಸುರಿಯುತ್ತಿದ್ದರೆ, ಸಮಸ್ಯೆ ಆಗುತ್ತಿತ್ತು. ಸದ್ಯಕ್ಕೆ ಆ ತೊಂದರೆ ಇಲ್ಲ’ ಎಂದು ಬಿಬಿಎಂಪಿ ವಿಶೇಷ ಆಯುಕ್ತ (ಘನ ತ್ಯಾಜ್ಯ ನಿರ್ವಹಣೆ) ಡಾ.ಹರೀಶ್‌ ಕುಮಾರ್‌ ಸ್ಪಷ್ಟಪಡಿಸಿದರು.

ಆಯುಧ ಪೂಜೆಯ ಹಿನ್ನೆಲೆಯಲ್ಲಿ ಗುತ್ತಿಗೆದಾರರು ತಮ್ಮ ಆಟೋ ಟಿಪ್ಪರ್‌ಗಳು ಹಾಗೂ ಕಾಂಪ್ಯಾಕ್ಟರ್‌ಗಳಿಗೆ ಪೂಜೆ ಸಲ್ಲಿಸಿದ್ದಾರೆ. ಪರಿಣಾಮ ನಗರದಲ್ಲಿ ಗುರುವಾರ ವಾಹನಗಳು ತ್ಯಾಜ್ಯ ವಿಲೇವಾರಿ ಕಾರ್ಯದಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಕೊಂಡಿಲ್ಲ. ಇದರೊಂದಿಗೆ ಪೌರಕಾರ್ಮಿಕರು ರಜೆ ತೆಗೆದುಕೊಂಡಿರುವುದರಿಂದ ರಸ್ತೆಗಳ ಸ್ವತfತಾ ಕಾರ್ಯ, ತ್ಯಾಜ್ಯ ವಿಲೇವಾರಿ ಕಾರ್ಯದಲ್ಲಿ ವ್ಯತ್ಯಯ ಉಂಟಾಗಿತ್ತು ಎನ್ನಲಾಗಿದೆ. ಆದರೆ, ಇದನ್ನು ಅಧಿಕಾರಿಗಳು ತಳ್ಳಿಹಾಕಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next