Advertisement

ಬಾಲ ಕಾರ್ಮಿಕ ಪದ್ಧತಿ ತಡೆಗೆ ಶಿಕ್ಷಣವೇ ಅಸ್ತ್ರ

09:11 PM Jul 03, 2019 | Team Udayavani |

ದೇವನಹಳ್ಳಿ: ಬಡತನದಿಂದ ಪೋಷಕರು ಮಕ್ಕಳನ್ನು ದುಡಿಮೆಗೆ ಹಾಕಿ, ಶಿಕ್ಷಣದಿಂದ ವಂಚಿತರನ್ನಾಗಿ ಮಾಡುತ್ತಿದ್ದಾರೆ. ಪೋಷಕರು ಮಕ್ಕಳಿಗೆ ಶಿಕ್ಷಣ ಕೊಡಿಸುವುರ ಮೂಲಕ ವಿದ್ಯಾವಂತರನ್ನಾಗಿ ಮಾಡಿದರೆ, ಅವರ ಭವಿಷ್ಯ ಉಜ್ವಲವಾಗಲಿದೆ ಎಂದು 5ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎ.ಹರೀಶ್‌ ತಿಳಿಸಿದರು.

Advertisement

ನಗರದ ಗುರು ಭವನದಲ್ಲಿ ತಾಲೂಕು ಆಡಳಿತ, ಜಿಲ್ಲಾ ಬಾಲ ಕಾರ್ಮಿಕ ಯೋಜನೆ ಸೊಸೈಟಿ, ಕಾರ್ಮಿಕ ಇಲಾಖೆಯಿಂದ ನಡೆದ ವಿಶ್ವ ಬಾಲಕ ಕಾರ್ಮಿಕ ವಿರೋಧಿ ದಿನಾಚರಣೆಯನ್ನು ಉದ್ಘಾಟಿಸಿದ ಅವರು ಮಾತನಾಡಿ, ಬಾಲ್ಯ ಮತ್ತು ಕಿಶೋರ ವ್ಯವಸ್ಥೆಯ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ ಕಾಯ್ದೆ) 1986ರ ಅನ್ವಯ ಎಲ್ಲಾ ಉದ್ಯೋಗ ಮತ್ತು ಪ್ರಕ್ರಿಯೆಯಲ್ಲಿ 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಕೆಲಸಕ್ಕೆ ನಿಯೋಜಿಸುವುದು ಹಾಗೂ 18 ವರ್ಷದೊಳಗಿನ ಕಿಶೋರರನ್ನು ಅಪಾಯಕಾರಿ ಕೆಲಸಕ್ಕೆ ನೇಮಿಸಿಕೊಳ್ಳುವುದು ಅಪರಾಧವಾಗಿದೆ. ಶಿಕ್ಷಣಕ್ಕೆ ಮಾರಕವಾಗದಂತೆ ಮಗುವಿನ ಕುಟುಂಬವು ನಡೆಸುವ ಉದ್ದಿಮೆಗಳಲ್ಲಿ ಹಾಗೂ ಬಾಲ ನಟ, ಬಾಲ ನಟಿಯಾಗಿ ಕೆಲಸ ನಿರ್ವಹಿಸಲು ಸೀಮಿತ ಅವಕಾಶವನ್ನು ಮಾತ್ರ ಕಲ್ಪಿಸಲಾಗಿದೆ ಎಂದರು.

ಜೀವನದಲ್ಲಿ ಶಿಕ್ಷಣ ಮುಖ್ಯ: ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಶಿಕ್ಷಣವೇ ಮೂಲ ಅಸ್ತ್ರವಾಗಿದೆ. ಪೋಷಕರು ಮಕ್ಕಳನ್ನು ಶಿಕ್ಷಣವಂತರನ್ನಾಗಿಸಬೇಕು. ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಣ ಬಹಳ ಮುಖ್ಯವಾಗಿದೆ. ಹಣ, ಬಡತನ ಹಾಗೂ ಹಸಿವಿನ ದಾಹಕ್ಕೆ ಮಕ್ಕಳು ದಾರಿ ತಪ್ಪದೇ ಓದಿನತ್ತ ಗಮನಹರಿಸಿ, ಪೋಷಕರಿಗೆ ಗೌರವವನ್ನು ತರಬೇಕು. ಎಲ್ಲಾದರೂ ಬಾಲ ಕಾರ್ಮಿಕರು ಕೆಲಸ ಮಾಡುತ್ತಿದ್ದರೆ ಸಹಾಯವಾಣಿಗೆ ಕರೆ ಮಾಡಿ, ಬಾಲ ಕಾರ್ಮಿಕ ಪದ್ಧತಿಗೆ ಕಡಿವಾಣ ಹಾಕಬೇಕು ಎಂದು ಹೇಳಿದರು.

ಬಾಲ ಕಾರ್ಮಿಕ ಮುಕ್ತ ಸಮಾಜಕ್ಕೆ ಪಣ ತೊಡಿ: ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ನ್ಯಾಯಾಧೀಶ ದಿಲೀಪ್‌ ಕುಮಾರ್‌ ಮಾತನಾಡಿ, ಬಾಲ ಕಾರ್ಮಿಕ ಮುಕ್ತ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಪಣ ತೊಡಬೇಕು. ಮಕ್ಕಳಿಗೆ ಬಾಲ್ಯದಲ್ಲಿ ಉತ್ತಮ ಶಿಕ್ಷಣವನ್ನು ಮೊಟಕುಗೊಳಿಸುವುದು ಸರಿಯಲ್ಲ. ಮಕ್ಕಳ ಜೀವನಕ್ಕೆ ಮಾರಕವಾಗುವ ಕಾರ್ಯವನ್ನು ಮಾಡಬಾರದು. ಮಕ್ಕಳನ್ನು ಹೋಟೆಲ್‌, ಗ್ಯಾರೇಜ್‌, ಇಟ್ಟಿಗೆ ಹೀಗೆ ಹಲವು ಕಾರ್ಖಾನೆ ಕಡೆಗಳಲ್ಲಿ ಕೆಲಸಕ್ಕೆ ತೊಡಗಿಸಿಕೊಳ್ಳುವಂತಿಲ್ಲ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ನ್ಯಾಯಾಲಯ ಆವರಣದಿಂದ ನಗರದ ಪ್ರಮುಖ ಬೀದಿಗಳಲ್ಲಿ ಶಾಲಾ ಮಕ್ಕಳಿಂದ ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ಜಾಗೃತಿ ಮತ್ತು ಅರಿವು ಜಾಥಾ ನಡೆಯಿತು. ಕಾರ್ಯಕ್ರಮದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ ಸಂದೇಶ್‌, ಅಪರ ನ್ಯಾಯ ಸಿವಿಲ್‌ ನ್ಯಾಯಾಧೀಶೆ ಯೋಗೇಶ್ವರಿ, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿ ಸದಸ್ಯ ಕಾರ್ಯದರ್ಶಿ ಹಾಗೂ ಸಹಾಯಕ ಕಾರ್ಮಿಕ ಆಯುಕ್ತ ಎಂ.ಎನ್‌. ದೇವರಾಜು, ತಾಲೂಕು ವಕೀಲರ ಸಂಘದ ಅಧ್ಯಕ್ಷ ಆರ್‌.ಮಾರೇಗೌಡ , ಕಾರ್ಯದರ್ಶಿ ಆನಂದ್‌, ಕಾರ್ಮಿಕ ಇಲಾಖೆ ಅಧಿಕಾರಿ ರವಿ ಕುಮಾರ್‌, ಕ್ಷೇತ್ರ ಶಿಕ್ಷಣಾಧಿಕಾರಿ ಗಾಯತ್ರಿ ದೇವಿ , ಪುರಸಭಾ ಮುಖ್ಯಾಧಿಕಾರಿ ಹನುಮಂತೇಗೌಡ ಹಾಜರಿದ್ದರು.

Advertisement

ಬಾಲ ಕಾರ್ಮಿಕರನ್ನು ನೋಡಿದರೆ ಕೂಡಲೇ 1098ಗೆ ಕರೆ ಮಾಡಿ, ಬಾಲ ಕಾರ್ಮಿಕ ಪದ್ಧತಿಯಿಂದ ಮುಕ್ತಿಗೊಳಿಸಲಾಗುವುದು. ದುಡಿಮೆಗೆ ಬಳಸಿಕೊಂಡವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು.
-ದಿಲೀಪ್‌ ಕುಮಾರ್‌, ನ್ಯಾಯಾಧೀಶ

Advertisement

Udayavani is now on Telegram. Click here to join our channel and stay updated with the latest news.

Next