Advertisement

ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನೇಕಾರರ ಪ್ರತಿಭಟನೆ

01:24 PM Jun 14, 2019 | Suhan S |

ಹುಬ್ಬಳ್ಳಿ: ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕೈಮಗ್ಗ ನೇಕಾರರು ವಿದ್ಯಾನಗರದ ಕೈಮಗ್ಗ ಅಭಿವೃದ್ಧಿ ನಿಗಮದ ಪ್ರಧಾನ ಕಚೇರಿ ಮುಂಭಾಗದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

Advertisement

ಸಂಘದ ಉಪಾಧ್ಯಕ್ಷ ಎನ್‌.ಜೆ. ಮಾಳವದೆ ಮಾತನಾಡಿ, ಗುಣಮಟ್ಟದ ನೆಪದಲ್ಲಿ ನೇಕಾರರಿಗೆ ವಿನಾಕಾರಣ ಕಿರುಕುಳ ನೀಡಲಾಗುತ್ತಿದೆ. ನೇಯ್ದ ಬಟ್ಟೆಯನ್ನು ಖರೀದಿ ಮಾಡದಿರುವುದು ನೇಕಾರರಿಗೆ ದೊಡ್ಡ ಸಮಸ್ಯೆಯಾಗಿದ್ದು, ನಷ್ಟ ಅನುಭವಿಸುವಂತಾಗಿದೆ. ನೇಕಾರರಿಗೆ ಉದ್ಯೋಗ ನೀಡದೆ ಹೊರಗಿನಿಂದ ಬಟ್ಟೆ ಖರೀದಿ ಮಾಡುತ್ತಿರುವುದು ನಿಯಮ ಬಾಹಿರವಾಗಿದೆ ಎಂದು ಆರೋಪಿಸಿದರು.

ನಿಗಮದ ವ್ಯವಸ್ಥಾಪಕ ನಿರ್ದೇಶಕ ರಾಮಚಂದ್ರ ಸುಮಾರು 80 ಕೋಟಿ ರೂ. ಮೌಲ್ಯದ ಬಟ್ಟೆಯನ್ನು ಹೊರಗಿನಿಂದ ಖರೀದಿ ಮಾಡಿದ್ದಾರೆ. ನಷ್ಟದ ಹೆಸರಲ್ಲಿ ಹಲವು ಮಗ್ಗಗಳನ್ನು ಮುಚ್ಚಿಸಲಾಗಿದೆ. ವ್ಯವಸ್ಥಾಪಕ ನಿರ್ದೇಶಕರು ನೇಕಾರರ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ. ಇಂತಹ ಎಂಡಿಯನ್ನು ಕೂಡಲೇ ವರ್ಗಾವಣೆ ಮಾಡಬೇಕು ಎಂದರು.

ಸಂಘದ ಉಪಾಧ್ಯಕ್ಷ ವಿಠಪ್ಪ ಗೋರಂಟ್ಲಿ ಮಾತನಾಡಿ, ಕಳೆದ ಒಂದು ವರ್ಷದಿಂದ ನೇಕಾರರಿಗೆ ನೀಡುತ್ತಿದ್ದ ಇನ್ಸೆಂಟಿವ್‌ ಸ್ಥಗಿತಗೊಂಡಿದೆ. ಮಕ್ಕಳಿಗೆ ವಿದ್ಯಾರ್ಥಿ ವೇತನ ಬರುತ್ತಿಲ್ಲ. ಆರೋಗ್ಯದ ಬಗ್ಗೆ ಯಾವುದೇ ಚಿಂತನೆ ಮಾಡುತ್ತಿಲ್ಲ. ನಿಗಮದಲ್ಲಿದ್ದ ಎಸ್‌ಇಪಿ ಹಣ ಸರಕಾರಕ್ಕೆ ವಾಪಸ್‌ ಕಳುಹಿಸುವ ಮೂಲಕ ಕೈಮಗ್ಗ ನೇಕಾರರ ವಿರೋಧಿ ಧೋರಣೆ ಅನುಸರಿಸಲಾಗುತ್ತಿದೆ. ನೇಕಾರರಿಂದ ನಿಗಮಕ್ಕೆ ಯಾವುದೇ ನಷ್ಟವಾಗಿಲ್ಲ. ಅಧಿಕಾರಿಗಳ ದುಂದುವೆಚ್ಚ ಹಾಗೂ ನಿರ್ಲಕ್ಷ್ಯದಿಂದ ನಿಗಮ ನಷ್ಟದಲ್ಲಿದೆ ಎಂದು ಹೇಳಿದರು.

ಜಿಲ್ಲಾಧ್ಯಕ್ಷ ನಾಗಪ್ಪ ಬನ್ನಿಗಿಡದ, ಬಸವರಾಜ ಗಣಪಾ, ಸುರೇಶ ಗಣಮುಖೀ ಇನ್ನಿತರರಿದ್ದರು.

180 ಕೋಟಿ ನಷ್ಟದಲ್ಲಿದೆ ಕೈಮಗ್ಗ ಅಭಿವೃದ್ಧಿ ನಿಗಮ:

 ಕೈಮಗ್ಗ ಅಭಿವೃದ್ಧಿ ನಿಗಮ ಕಳೆದ ವರ್ಷ ಸುಮಾರು 2 ಕೋಟಿ ರೂ. ನಷ್ಟ ಅನುಭವಿಸಿದ್ದು, ಇದುವರೆಗೆ ಸುಮಾರು 180 ಕೋಟಿ ರೂ. ನಷ್ಟದಲ್ಲಿದೆ ಎಂದು ಕೈಮಗ್ಗ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ರಾಮಚಂದ್ರ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಕಚೇರಿ ಸಿಬ್ಬಂದಿಗೆ 2 ತಿಂಗಳಿನಿಂದ ವೇತನ ನೀಡಿರಲಿಲ್ಲ. ಸರ್ಕಾರದಿಂದ ಒಂದಿಷ್ಟು ಹಣ ಬಂದ ಕಾರಣ ಅವರಿಗೆ ವೇತನ ಪಾವತಿಸಲಾಗಿದೆ. ಇತ್ತೀಚೆಗೆ ಸರ್ಕಾರದಿಂದ 28 ಕೋಟಿ ಬಂದಿತ್ತು. ಇದರಲ್ಲಿ ನಿವೃತ್ತ ನೌಕರರಿಗೆ ಸೌಲಭ್ಯ ಕಲ್ಪಿಸಬೇಕೆಂದು ಸೂಚಿಸಿದ್ದರಿಂದ ಅದಕ್ಕೆ ಬಳಸಿಕೊಳ್ಳಲಾಗಿದೆ. ನಿಗಮದ ಅಭಿವೃದ್ಧಿಗೆ ಅಗತ್ಯ ಕ್ರಮಕ್ಕೆ ಚಿಂತನೆ ನಡೆದಿದೆ. ಸರ್ಕಾರದ 2017ರ ನಿಗಮದ ಮರುವಿನ್ಯಾಸದ ಪ್ರಕಾರ ನಷ್ಟದಲ್ಲಿರುವ ಘಟಕಗಳನ್ನು ಬಂದ್‌ ಮಾಡಲು ಸೂಚಿಸಿದೆ. ಅದರಂತೆ ರಾಜ್ಯದಲ್ಲಿದ್ದ 52 ಪ್ರಿಯದರ್ಶಿನಿ ಮಳಿಗೆ ಪೈಕಿ 26 ಹಾಗೂ ವಿವಿಧ ಘಟಕ ಸ್ಥಗಿತಗೊಳಿಸಲಾಗಿದೆ. ಅಲ್ಲಿನ ಸಿಬ್ಬಂದಿ ಬೇರೆಡೆಗೆ ನಿಯೋಜಿಸಲಾಗಿದೆ ಎಂದರು.
Advertisement
Advertisement

Udayavani is now on Telegram. Click here to join our channel and stay updated with the latest news.

Next