ದಾವಣಗೆರೆ : ರೈತ ಮಕ್ಕಳಿಗೆ ಶಿಷ್ಯವೇತನ, ವಿವಿಧ ಸಾಮಾಜಿಕ ಭದ್ರತಾ ಮಾಸಾಶನ ಹೆಚ್ಚಳ ಸೇರಿದಂತೆ ವಿವಿಧ ಯೋಜನೆಗಳ ಮೂಲಕ ನಮ್ಮದು ಮಾತನಾಡುವ ಸರ್ಕಾರವಲ್ಲ, ಕಾರ್ಯ ಮಾಡಿ ತೋರಿಸುವ ಸರ್ಕಾರ ಎಂದು ತೋರಿಸಿಕೊಟ್ಟಿದ್ದೇವೆ ಎಮದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ನಗರದ ಜಿ.ಎಂ.ಐ.ಟಿ. ಕಾಲೇಜು ಆವರಣದಲ್ಲಿ ಇಂದು (ಗುರುವಾರ, ಸೆಪ್ಟೆಂಬರ್ 2) ಕೇಂದ್ರ ಗೃಹ ಸಚಿವ ಅಮಿತ್ ಶಾ ಉಪಸ್ಥಿತಿಯಲ್ಲಿ ನಡೆದ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದ ಅವರು, ರಾಜ್ಯದಲ್ಲಿ ವಿವಿಧ 14 ಜನಪರ ಯೋಜನೆಗಳನ್ನು ಜಾರಿಗೊಳಿಸಿದ್ದೇವೆ. 750 ಗ್ರಾಮಗಳನ್ನು ಸಂಪೂರ್ಣ ವಸತಿಯುಕ್ತ ಗ್ರಾಮಗಳನ್ನಾಗಿ ಮಾಡುವ ಗುರಿ ಹೊಂದಿದ್ದೇವೆ ಎಂದಿದ್ದಾರೆ.
ದೇಶದ ಇತಿಹಾಸದಲ್ಲಿ ಅಮಿತ್ ಶಾ ಕೊಡುಗೆ ಅವಿಸ್ಮರಣೀಯವಾಗಲಿದೆ. ದೇಶದ ಸಮಗ್ರತೆಗೆ, ಏಕತೆ, ಅಖಂಡತೆಗೆ ದುಡಿದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಬಳಿಕ ದಿಟ್ಟ, ಗಟ್ಟಿ ಗೃಹ ಸಚಿವ ಅಮಿತ್ ಶಾ ಆಗಿದ್ದು ಅವರೂ ಸಹ ರೀತಿಯಲ್ಲೇ ದೇಶದಲ್ಲಿರುವ ಜಮ್ಮುಕಾಶ್ಮೀರ ಜಾರಿಯಲ್ಲಿದ್ದ 370ನೇ ವಿಧಿ ರದ್ದು ಪಡಿಸಿ ದೇಶದ ಅಖಂಡತೆಗೆ, ಸಮಗ್ರತೆಗೆ ಸೇರಿಸಿ ದಿಟ್ಟತನ ಪ್ರದರ್ಶಿಸಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇನ್ನು, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಬಜೆಟ್ ಕಾರ್ಯಕ್ರಮಗಳನ್ನು ಮುಂದುವರಿಸಿ, ಸಾಕಾರಗೊಳಿಸಲು ಪಣಗೊಟ್ಟಿದ್ದೇವೆ. ಬಿ.ಎಸ್. ಯಡಿಯೂರಪ್ಪ ರೈತ ಹೋರಾಟಗಾರರು. ರಾಜ್ಯದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸಿದ್ದು ಅವರ ಮಾರ್ಗದರ್ಶನದಲ್ಲಿ ಹಲವು ಕಾರ್ಯಕ್ರಮ ರೂಪಿಸಿ ಮುನ್ನಡೆಯುತ್ತಿದ್ದೇವೆ ಎಂದಿದ್ದಾರೆ.
ಇದನ್ನೂ ಓದಿ : ಅಭಿವೃದ್ಧಿ ಕಾಣದ ಅಶೋಕನ ಕುರುಹು; ಕುರಿದೊಡ್ಡಿಯಾದ ಸನ್ನತಿಬೌದ್ಧ ಶಿಲಾಶಾಸನ ತಾಣ