Advertisement

D. K. Shivakumar ಅಕ್ರಮ ಆಸ್ತಿ ಗಳಿಕೆ ಪ್ರಕರಣವನ್ನು ಗೆದ್ದೇ ಗೆಲ್ಲುವೆ: ಯತ್ನಾಳ್

06:46 PM Oct 21, 2024 | Team Udayavani |

ಕಲಬುರಗಿ: ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತಡ ಮಾಡಿದರೂ ನಾನು ಸುಪ್ರೀಂಕೋರ್ಟ್ ಮೆಟ್ಟಿಲು ಹತ್ತಿ ಹೋರಾಡುತ್ತಿದ್ದು, ಗೆದ್ದೇ ಗೆಲ್ಲುತ್ತೇನೆ ಎಂದು ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸೋಮವಾರ(ಅ21) ಹೇಳಿಕೆ ನೀಡಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿ, ತಾವು ಬಹಳ ದಿನದಿಂದ ಅವನ ವಿರುದ್ದ ಹೋರಾಟ ಮಾಡುತ್ತಿದ್ದೇನೆ. ಸಿಬಿಐ ನನಗಿಂತ ಮೊದಲೇ ಸುಪ್ರೀಂ ಕೋರ್ಟ್ ಗೆ ಹೋಗಬೇಕಿತ್ತು, ತಡ ಮಾಡಿದ್ದಾರೆ. ಮುಖ್ಯವಾಗಿ ನನಗೆ ಸುಪ್ರೀಂ ಕೋರ್ಟ್ ನಲ್ಲಿ ಟಾಪ್ ವಕೀಲರು ಸಿಗದಂತೆ ಮಾಡಿದ್ದು, ಟಾಪ್ 17 ವಕೀಲರನ್ನು ಡಿಕೆಶಿ ಎಂಗೇಜ್ ಮಾಡಿ ಬಿಟ್ಟಿದ್ದಾರೆ. ನಾನು ರಾಯಚೂರು ಮೂಲದ ಒಬ್ಬ ವಕೀಲರನ್ನು ಕರೆದುಕೊಂಡು ಹೋಗಿದ್ದೇನೆ. ಕರ್ನಾಟಕದ ವಕೀಲರ ತಾಕತ್ತು ಏನು ಅಂತ ನಾವು ತೋರಿಸುತ್ತೇವೆ. ಪ್ರಕರಣ ಬಹಳ ಆಳವಿದೆ. ನಾವು ಗೆಲ್ಲುವುದು ನಿಶ್ಚಿತ ಎಂದು ಪುನರುಚ್ಚರಿಸಿದರು.

ಸಮಾರಂಭವೊಂದರಲ್ಲಿ ಸ್ವಾಮಿಯೊಬ್ಬರು ಕೆಲವೇ ದಿನಗಳಲ್ಲಿ ಡಿಕೆಶಿ ಸಿಎಂ ಆಗುತ್ತಾನೆ ಎಂದು ಹೇಳಿದ್ದಾರೆ. ಆದರೆ ಸ್ವಾಮಿಗಳು ದಕ್ಷಿಣೆ ಹೆಚ್ಚು ಕೊಟ್ಟವರ ಪರ ಹೇಳಿಕೆ ನೀಡುತ್ತಾರೆ ಎಂದು ಟಾಂಗ್ ನೀಡಿದರು.

ಬಿಎಸ್‌ವೈ ಹೇಳಿಕೆಗೆ ನಾನೇಕೆ ಪ್ರತಿಕ್ರಿಯೆ ಕೊಡಲಿ
ರಾಜ್ಯದ ಮೂರು ಕ್ಷೇತ್ರಗಳ ಉಪಚುನಾವಣೆ ಸಂಬಂಧವಾಗಿ ಶಿಗ್ಗಾವಿಯಲ್ಲಿ ಬಸವರಾಜ ಬೊಮ್ಮಾಯಿ ಮಗನಿಗೆ ಟಿಕೆಟ್ ಕೊಟ್ಟಿದ್ದಾರೆ. ಸಂಡೂರಿನಲ್ಲಿ ನಮ್ಮ ಪಕ್ಷದ ಕಾರ್ಯಕರ್ತನಿಗೆ ಟಿಕೆಟ್ ಕೊಡಲಾಗಿದೆ.ಚನ್ನಪಟ್ಟಣ ಜೆಡಿಎಸ್ ಕ್ಷೇತ್ರ ಎಂಬುದಾಗಿ ಮಾಜಿ ಸಿಎಂ ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ. ಆದರೆ ಅವರ ಹೇಳಿಕೆ ಬಗ್ಗೆ ನಾನ್ಯಾಕೆ ಪ್ರತಿಕ್ರಿಯೆ ಕೊಡಲಿ?, ನನಗೆನು ಮಾಡಲು ಕೆಲಸ ಇಲ್ವಾ ?ಅವರು ಪಾರ್ಲಿಮೆಂಟ್ ಬೋರ್ಡ್ ಮೆಂಬರ್ ಇದ್ದಾರೆ. ಅವರಿಗೆ ಕರೆದು ಕೇಳಿರಬೇಕು ಅದಕ್ಕ ಹೇಳಿದ್ದಾರೆ ಎಂದು ವ್ಯಂಗ್ಯವಾಡಿದರು.

ಮೂಡಾ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ
ಮೂಡಾಗಿಂತ ಭಯಾನಕ ಪ್ರಕರಣಗಳು ನಮ್ಮ ರಾಜ್ಯದಲ್ಲಿ ಸಾಕಷ್ಟಿವೆ. ತಾವು ಮೂಡಾ ಕೇಸ್‌ಗೆ ಅಷ್ಟು ಮಹತ್ವ ಕೊಡೊದಿಲ್ಲ. ಮೂಡಾಗಿಂತ, ಎಸ್ಟಿ ಜನಾಂಗದ 183 ಕೋಟಿ ರೂ. ನುಂಗಿ ಹಾಕಿದ್ದಾರಲ್ವಾ? ಅದು ದೊಡ್ಡದಿದೆ. ಪ.ಜಾ.,ಪ.ಪಂಗಡಕ್ಕೆ ಮೀಸಲಿಟ್ಟ ಹಣ ಗ್ಯಾರಂಟಿಗೆ ಕೊಟ್ಟಿದ್ದಾರೆ. ಸಿಎಂ ಸಿದ್ದರಾಮಯ್ಯ ದಲಿತ ಹಿಂದುಳಿದವರ ರಕ್ಷಣೆ ಮಾಡುತ್ತೇನೆ ಅಂತಾರೆ, ಅವರ ಹಣವನ್ನೇ ದುರ್ಬಳಕೆ ಮಾಡಿದ್ದಾರೆ. ನಾವು ಹಾಲುಮತದ ಸಮುದಾಯವನ್ನು ಶ್ರೇಷ್ಠ ಮತ ಎನ್ನುತ್ತೇವೆ. ಆದರೆ ಸಿದ್ದರಾಮಯ್ಯ ನಾನು ಮುಸ್ಲಿಂ ಆಗಿ ಹುಟ್ಟ ಬೇಕಿತ್ತು ಎನ್ನುತ್ತಾರೆ ಇದು ಹೇಗೆ ಎಂದರು.

Advertisement

ಹೊಸ ಅಧ್ಯಕ್ಷರ ಎದುರು ಹೇಳುತ್ತೇವೆ
ಪಕ್ಷದೊಳಗಿನ ಸಮಸ್ಯೆಗಳನ್ನು ಹೊಸ ಅಧ್ಯಕ್ಷರು ಬಂದ ನಂತರ ಅವರ ಎದುರು ಹೇಳುತ್ತೇವೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಅವಧಿ ಮುಗಿದಿದೆ ಹೊಸ ಅಧ್ಯಕ್ಷರು ಬಂದ ನಂತರ ನಾವು ಏನು ಹೇಳಬೇಕು ಹೇಳುತ್ತೇವೆ ಎಂದರು. ವಂಶ ರಾಜಕಾರಣದ ಬಗ್ಗೆ ಮೋದಿ ಹೊರತುಪಡಿಸಿದರೆ ನಾನೇ ಮಾತನಾಡುವವನು. ಶಿಗ್ಗಾವಿಯಲ್ಲಿ ಅಂತಹ ಅಭ್ಯರ್ಥಿಯೇ ಇಲ್ಲ. ಅಲ್ಲಿ ಪಕ್ಷ ಇನ್ನೂ ಬೆಳೆಯಬೇಕಾಗಿದೆ ಹಾಗಾಗಿ ಬೊಮ್ಮಾಯಿ ಮಗನಿಗೆ ಟಿಕೆಟ್ ಕೊಡಲಾಗಿದೆ. ಕಾರ್ಯಕರ್ತರು ಸ್ವಂತ ಬಲದ ಮೇಲೆ ಗೆಲ್ಲುತ್ತಾರೆ ಎನ್ನುವ ವಿಶ್ವಾಸ ಬರುವವರೆಗೆ ಕುಟುಂಬ ರಾಜಕಾರಣ ಇದ್ದಿದ್ದೆ ಎಂದರು.

ಸಾಹಿತಿಗಳ ಪ್ರಶಸ್ತಿಯಂತೆ ಸೈಟು ವಾಪಸ್
ಈ ಹಿಂದೆ ಕೆಲವು ಸಾಹಿತಿಗಳು ಪ್ರಶಸ್ತಿ ವಾಪಸ್ಸು ಕೊಡೋದು ಶುರುವಾಗಿತ್ತು. ಅದೇ ತೆರನಾಗಿ ಸಿಎಂ ಪತ್ನಿ ಹಾಗೂ ಎಐಸಿಸಿ ಅಧ್ಯಕ್ಷರ ಪುತ್ರ ಸಚಿವ ಪ್ರಿಯಾಂಕ್ ಖರ್ಗೆ ಸರ್ಕಾರಕ್ಕೆ ಸೈಟು ಜಮೀನು ವಾಪಾಸ್ ಕೊಟ್ಟಿದ್ದಾರೆ. ಪ್ರಶಸ್ತಿ ವಾಪಸ್ಸು ಕೊಟ್ಟವರು ಲಪುಟರು. ವಾಪಾಸ್ ಕೊಟ್ಟವರು ಒಳ್ಳೆ ಮನುಷ್ಯರಲ್ಲ. ಅಕ್ರಮವಾಗಿ ತೆಗೆದುಕೊಂಡಿದ್ದಾರೆ. ಅಕ್ರಮವಾಗಿ ತೆಗೆದುಕೊಂಡಿಲ್ಲ ಎಂದಾದ ಮೇಲೆ ವಾಪಸ್ಸು ಯಾಕೆ ಕೊಟ್ಟರು. ಅವರು ನ್ಯಾಯಾಲಯದಲ್ಲಿ ಹೋರಾಟ ಮಾಡಬೇಕಿತ್ತು? ಖರ್ಗೆ ಮಗನನ್ನು ಮತ್ತು ಸಿದ್ದರಾಮಯ್ಯನ ತೆಗೆಯೋ ಧೈರ್ಯ ಕಾಂಗ್ರೆಸ್ ನಲ್ಲಿ ಯಾರಿಗೂ ಇಲ್ಲ ಎಂದರು.

ರೈತರ ಮಾರಣ ಹೋಮ ಸರಕಾರದ ಗುರಿ
ಜಿಲ್ಲೆಯ ಚಿಂಚೋಳಿಯಲ್ಲಿರುವ ತಮ್ಮ ಒಡೆತನದ ಸಕ್ಕರೆ ಕಾರ್ಖಾನೆ ಅನುಮತಿ ನೀಡದೇ ಇರೋದನ್ನು ನೋಡಿದರೆ ರೈತರ ಮಾರಣ ಹೋಮ ಮಾಡೋದೆ ಸರಕಾರದ ಗುರಿ ಎಂಬುದು ಕಾಣುತ್ತದೆ. ಸಕ್ಕರೆ ಕಾರ್ಖಾನೆ ಈಗಲೂ ಶುರುವಾಗದಿದ್ದರೆ ಕಲಬುರಗಿ ಜಿಲ್ಲೆಯ ನಾಲ್ಕೈದು ತಾಲೂಕಿನಲ್ಲಿ ಮಾರಣ ಹೋಮ ಆಗುತ್ತದೆ, ರಾಜಕೀಯ ಮಾಡೋದಿದ್ದರೆ ತಮ್ಮ ಜತೆ ಮಾಡಿರಿ, ನಮಗೆ ನೀವು ಬಯ್ಯಿರಿ, ನಾವು ನಿಮಗ್ ಬೈಯುತ್ತೇವೆ. ಆದರೆ ಪ್ರಧಾನಿ ಮೋದಿಗೆ ಬೈದರೆ ನಾ ಸುಮ್ಮನೆ ಕೂಡುವ ಮಗ ಅಲ್ಲ. ಸಚಿವ ಪ್ರಿಯಾಂಕ್ ಖರ್ಗೆ ಅವರೇನಾದರೂ ಮೋದಿ ಅವರ ಬಗ್ಗೆ ಬಾಯಿ ಬಿಟ್ಟರೆ ನಾನು ಡೋಸ್ ಕೊಡುವುದು ಗ್ಯಾರಂಟಿ. ಸಚಿವ ಈಶ್ವರ ಖಂಡ್ರೆ ಅವರೂ ಮೋದಿ ಬಗ್ಗೆ ಹಗುರಾಗಿ ಮಾತನಾಡಿದ್ದರಿಂದ ಈಗಾಗಲೇ ಡೋಸ್ ಕೊಟ್ಟಿದ್ದೇನೆ. ತಮಗೆಲ್ಲ ತಾಕತ್ತಿದ್ದರೆ 850 ಕೋ.ರೂ ಕೊಟ್ಟು ಚಿಂಚೋಳಿ ಸಕ್ಕರೆ ಕಾರ್ಖಾನೆ ಖರೀದಿಸಿ ರೈತರ ಉದ್ಧಾರ ಮಾಡಿ. ಈಶ್ವರ ಖಂಡ್ರೆ- ಖರ್ಗೆ ನಿಮ್ಮಲ್ಲಿ ದುಡ್ಡಿಲ್ವಾ? ಹತ್ತು ವರ್ಷಗಳಿಂದ ಕಾರ್ಖಾನೆ ಟೆಂಡರ್ ಕರೆಯುತ್ತಲೇ ಇದ್ದರೂ ಯಾರೂ ತೆಗೆದುಕೊಳ್ಳಲಿಲ್ಲ. ಆದಕ್ಕೆ ತಾವು ತೆಗೆದುಕೊಂಡಿದ್ದು. ನೀವೆಲ್ಲ ದೊಡ್ಡ-ದೊಡ್ಡ ರಾಜಕಾರಣಿಗಳು ದುಬೈ- ಕೊಲ್ಕತಾ, ಮುಂಬಯಿಯಲ್ಲಿ ಆಸ್ತಿ ಮಾಡುತ್ತೀರಿ. ಕಲಬುರಗಿಯಲ್ಲಿ ಕಾರ್ಖಾನೆ ಮಾಡಲಿಕ್ಕಾಗುವುದಿಲ್ವವೇ ಎಂದು ತಿರುಗೇಟು ನೀಡಿದರು.

ಚಿಂಚೋಳಿಯಲ್ಲಿ ತಮ್ಮ ಸಕ್ಕರೆ ಕಾರ್ಖಾನೆ ಶುರುವಾಗಲು ಯಾವುದೇ ಕಾನೂನು ತೊಡಕಿಲ್ಲ. ಸಚಿವ ಈಶ್ವರ ಖಂಡ್ರೆ ಅವರ ರಾಜಕೀಯದಿಂದ ಇದೆಲ್ಲ ನಡೆಯುತ್ತಿದೆ. ಕಲಬುರಗಿ, ಬೀದರ್ ಕಾರ್ಖಾನೆ ಮಾಲಕರು ಸರಿಯಾಗಿ ದುಡ್ಡು ಕೊಡುತ್ತಿರಲಿಲ್ಲ. ಅದರೆ ನಾನು ಕೊಟ್ಟಿದ್ದೆ. ಆದರೆ ಸಚಿವ ಶಿವಾನಂದ ಪಾಟೀಲ್ ಸಕ್ಕರೆ ಕಾರ್ಖಾನೆಗಳ ಮುಂದೆ ಕಾಟ ಶುರು ಮಾಡುವುದಾಗಿ ಹೇಳಿದ್ದ. ಅದಕ್ಕೆ ತಾವು ಡಬಲ್ ಕಾಟ ಕೊಡು ಎಂದು ಹೇಳಿದ್ದೇ ಎಂದು ಯತ್ನಾಳ ವ್ಯಂಗ್ಯವಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next