ಕಾಲಿಂಪಾಂಗ್, ಪಶ್ಚಿಮ ಬಂಗಾಲ : ‘ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನಾವು ಗೆದ್ದು ಮತ್ತೆ ಅಧಿಕಾರಕ್ಕೆ ಬಂದರೆ ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿಧಿಯನ್ನು ರದ್ದು ಮಾಡುವೆವು, ಮತ್ತು ಪ್ರಜೆಗಳ ರಾಷ್ಟ್ರೀಯ ರಿಜಿಸ್ಟ್ರಿ (ಎನ್‌ಆರ್‌ಸಿ) ಯೋಜನೆಯನ್ನು ದೇಶಾದ್ಯಂತ ಜಾರಿಗೆ ತರುವೆವು’ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಇಂದಿಲ್ಲಿ ಚುನಾವಣಾ ರಾಲಿಯೊಂದರಲ್ಲಿ ಹೇಳಿದರು.
‘ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ತಮ್ಮ ಅಲ್ಪಸಂಖ್ಯಾಕ ಮತ ಬ್ಯಾಂಕಿನ ತುಷ್ಟೀಕರಣಕ್ಕಾಗಿ ಭಾರತೀಯ ವಾಯು ಪಡೆ ಪಾಕ್ ಉಗ್ರ ಶಿಬಿರಗಳ ಮೇಲೆ ನಡೆಸಿದ್ದ ಬಾಂಬ್ ದಾಳಿಯನ್ನು ಪ್ರಶ್ನಿಸುತ್ತಿದ್ದಾರೆ. ಮಮತಾ ಅವರು ತಮ್ಮ ಮಿತ್ರ ಪಕ್ಷ ನ್ಯಾಶನಲ್ ಕಾನ್ಫರೆನ್ಸ್‌ನ ಉಮರ್ ಅಬ್ದುಲ್ಲ ಅವರ ಹಾಗೆ ಜಮ್ಮು ಕಾಶ್ಮೀರಕ್ಕೆ ಪ್ರತ್ಯೇಕ ಪ್ರಧಾನಿ ಇರಬೇಕೆಂಬ ಅಭಿಪ್ರಾಯವನ್ನು ಬೆಂಬಲಿಸುತ್ತಾರಾ ಎಂಬುದನ್ನು ಸ್ಪಷ್ಟಪಡಿಸಬೇಕಾಗಿದೆ’ ಎಂದು ಅಮಿತ್ ಶಾ ಹೇಳಿದರು.
ಡಾರ್ಜಿಲಿಂಗ್ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಕೈಗಾರಿಕೋದ್ಯಮಿ ರಾಜು ಸಿಂಗ್ ಬಿಷ್‌ತ್ ಪ್ರಚಾರಾರ್ಥ ನಡೆಸಲಾದ ರಾಲಿಯಲ್ಲಿ ಮಾತನಾಡುತ್ತಿದ್ದ ಅಮಿತ್ ಶಾ, ‘ಪ.ಬಂಗಾಲದ ಸಿಎಂ ಮಮತಾ ಅವರು ಅಸ್ಸಾಂ ಎನ್‌ಆರ್‌ಸಿ ಬಗ್ಗೆ ಹುಯಿಲೆಬ್ಬಿಸುತ್ತಿದ್ದಾರೆ; ಆದರೆ ನಾವು ಈ ಬಾರಿ ಮತ್ತೆ ಗೆದ್ದು ಬಂದರೆ ದೇಶಾದ್ಯಂತ ಎನ್‌ಆರ್‌ಸಿ ಯೋಜನೆಯನ್ನು ಜಾರಿಗೆ ತರುತ್ತೇವೆ’ ಎಂದು ಹೇಳಿದರು.
‘ದೇಶಾದ್ಯಂತ ಎನ್‌ಆರ್‌ಸಿ ತರವುದಕ್ಕೆ ನಾವು ಬದ್ಧರಾಗಿದ್ದೇವೆ. ಅಕ್ರಮ ವಲಸಿಗರನ್ನು ಹೊರ ಹಾಕಿಯೇ ತೀರುತ್ತೇವೆ. ಆದರೆ ಮಮತಾ ಅವರಂತಹವರು ಅಕ್ರಮ ವಲಸಿಗರನ್ನು ತಮ್ಮ ಓಟ್ ಬ್ಯಾಂಕ್ ಮಾಡಿಕೊಂಡಿರುವುದರಿಂದ ಎನ್‌ಆರ್‌ಸಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಾರೆ; ನಮಗೆ ರಾಷ್ಟ್ರೀಯ ಭದ್ರತೆಯೇ ಪರಮೋಚ್ಚ’ ಎಂದು ಶಾ ಹೇಳಿದರು.
‘ನೆರೆ ದೇಶಗಳಲ್ಲಿನ ಹಿಂಸೆ ಕಿರುಕುಳ ತಾಳಲಾರದೆ ಆಸರೆ ಕೋರಿ ಭಾರತಕ್ಕೆ ಬಂದಿರುವ ಪ್ರತಿಯೋರ್ವ ಹಿಂದು ಮತ್ತು ಬೌದ್ಧ ನಿರಾಶ್ರಿತರಿಗೆ ನಾವು ದೇಶದ ಪೌರತ್ವ ನೀಡುವೆವು’ ಎಂದು ಶಾ ಹೇಳಿದರು.