ಹೊಸದಿಲ್ಲಿ: ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ವಿರುದ್ಧ ಕೇಳಿ ಬಂದಿರುವ ಆರೋಪದ ಇದರಲ್ಲಿ ದೊಡ್ಡ ಮಟ್ಟದ ಸಂಚು ಇದೆ ಎನ್ನುವ ನ್ಯಾಯವಾದಿ ಉತ್ಸವ್ ಸಿಂಗ್ ಭಾಸಿನ್‌ರ ಪ್ರತಿಪಾದನೆಯ ಮೂಲ ವಿಚಾರದ ಬಗ್ಗೆ ಆಳವಾಗಿ ತನಿಖೆ ನಡೆಸುತ್ತೇವೆ ಎಂದು ಸುಪ್ರೀಂಕೋರ್ಟ್ ಹೇಳಿದೆ. ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ನ್ಯಾಯಪೀಠದ ಮುಂದೆ ನ್ಯಾಯ ವಾದಿ ಉತ್ಸವ್ ಸಿಂಗ್ ಬೈನ್ ಮುಖ್ಯ ನ್ಯಾಯ ಮೂರ್ತಿ ವಿರುದ್ಧ ದೊಡ್ಡ ಸಂಚು ಇದೆ ಎಂದು ಹೇಳಿಕೊಂಡಿರುವ ಬಗ್ಗೆ ಎರಡು ಪ್ರತ್ಯೇಕ ಮೊಹರು ಮಾಡಿದ ಲಕೋಟೆಗಳಲ್ಲಿ ವಿವರಗಳನ್ನು ಸಲ್ಲಿಸಿದ್ದಾರೆ. ಅದನ್ನು ಪರಿಗಣಿಸಿರುವ ನ್ಯಾಯ ಪೀಠ ಗುರುವಾರ ವಿಚಾರಣೆ ಮುಂದುವರಿಸಲಿದೆ.
“ನ್ಯಾಯಾಂಗದಲ್ಲಿ ಲಾಬಿ ಮಾಡುವವರು ಸಕ್ರಿಯವಾಗಿರು ತ್ತಾರೆ ಎಂದರೆ ಸಂಸ್ಥೆಯ ಅಸ್ವಿತ್ವಕ್ಕೆ ಬೆದರಿಕೆ. ಹೀಗಾಗಿ, ಪ್ರಕರಣದ ಹಿಂದೆ ದೊಡ್ಡ ಸಂಚು ಇದೆ ಎನ್ನುವ ವಿಚಾರದ ಮೂಲದ ಬಗ್ಗೆ ತನಿಖೆ ನಡೆಸಲಿದ್ದೇವೆ. ಸಂಸ್ಥೆಯಲ್ಲಿ ಲಾಬಿ ಮಾಡುವವರಿಗೆ ಅವಕಾಶವೇ ಇಲ್ಲ’ ಎಂದು ನ್ಯಾಯಮೂರ್ತಿಗಳಾದ ಆರ್.ಎಫ್. ನಾರಿಮನ್ ಮತ್ತು ದೀಪಕ್ ಗುಪ್ತ ಅವರನ್ನೊಳಗೊಂಡ ಪೀಠ ಸ್ಪಷ್ಟವಾಗಿ ಹೇಳಿದೆ. ಇದೇ ವೇಳೆ ನ್ಯಾಯವಾದಿ ಬೈನ್‌ರ ಹೇಳಿಕೆಗೂ ನ್ಯಾ.ಎಸ್.ಎ.ಬೋಬೆx ನೇತೃತ್ವದಲ್ಲಿ ಲೈಂಗಿಕ ಕಿರುಕುಳ ಆರೋಪದ ಬಗೆಗಿನ ತನಿಖೆಗೂ ಯಾವುದೇ ಸಂಬಂಧವಿಲ್ಲ ಎಂದು ನ್ಯಾಯಪೀಠ ಸ್ಪಷ್ಟನೆ ನೀಡಿದೆ.
ದಾಖಲೆ ಸಂಗ್ರಹಿಸಿ: ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದಲ್ಲಿ ಸಿಬಿಐ, ಇಂಟೆಲಿಜೆನ್ಸ್ ಬ್ಯೂರೋ, ಹೊಸದಿಲ್ಲಿ ಪೊಲೀಸ್ ಆಯುಕ್ತರ ಜತೆಗೆ ಮಧ್ಯಾಹ್ನ ಸಭೆ ನಡೆಸಲಾಯಿತು. ಈ ಸಂದರ್ಭದಲ್ಲಿ ಮುಖ್ಯ ನ್ಯಾಯ ಮೂರ್ತಿ ವಿರುದ್ಧ ಸಂಚು ನಡೆಸಲಾಗಿದೆ ಎಂಬ ವಾದದ ಬಗ್ಗೆ ಇದೆ ಎಂದು ಹೇಳಲಾಗಿರುವ ದಾಖಲೆಗಳನ್ನು ಸಂಗ್ರಹಿಸಲು ಇಂಟೆಲಿ ಜೆನ್ಸ್ ಬ್ಯೂರೋ, ಸಿಬಿಐಗೆ ನ್ಯಾ| ಅರುಣ್ ಮಿಶ್ರಾ ಆದೇಶ ನೀಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಉಸ್ತುವಾರಿಯಲ್ಲಿ ವಿಶೇಷ ತನಿಖಾ ತಂಡದ ಮೂಲಕ ತನಿಖೆ ನಡೆಸಬೇಕು ಎಂಬ ಅಟಾರ್ನಿ ಜನರಲ್ ಕೆ.ಕೆ. ವೇಣು ಗೋಪಾಲ್ ಮನವಿಯನ್ನು ತಿರಸ್ಕರಿಸಲಾಗಿತ್ತು.
ಮೇ 23ಕ್ಕೆ ವಿಚಾರಣೆ: ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿ ರುವ ಮಹಿಳೆಗೆ ನೀಡಲಾಗಿರುವ ಜಾಮೀನನ್ನು ರದ್ದು ಮಾಡಬೇಕು ಎಂದು ಹೊಸದಿಲ್ಲಿಯ ಚೀಫ್ ಮೆಟ್ರೋ ಪಾಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟ್ ಮುಂದೆ ಸಲ್ಲಿಕೆ ಮಾಡಲಾಗಿರುವ ಅರ್ಜಿ ಮೇ 23ಕ್ಕೆ ವಿಚಾರಣೆಗೆ ಬರಲಿದೆ. ಈ ಬಗ್ಗೆ ಹೊಸದಿಲ್ಲಿ ಪೊಲೀಸರು ಅರ್ಜಿ ಸಲ್ಲಿಸಿದ್ದಾರೆ.