ಶ್ರೀರಂಗಪಟ್ಟಣ: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮಹದೇವಪುರ ಗ್ರಾಮಕ್ಕೆ 28 ಕೋಟಿ ರೂ. ಕುಡಿಯುವ ನೀರಿನ ಕಾಮಗಾರಿಗೆ ಬಜೆಟ್‌ನಲ್ಲಿ ಮೀಸಲಿಟ್ಟಿದ್ದರಿಂದ ಅವರಿಗೆ ಗಂಗೆ ಕೊಟ್ಟ ಭಗೀರಥ ಎಂಬ ಪ್ರಶಸ್ತಿ ನೀಡಲು ನಿರ್ಧರಿಸಿದ್ದೇವೆ ಎಂದು ತಾಲೂಕಿನ ಮಹದೇವಪುರ ಗ್ರಾಮಸ್ಥದ ಮುಖಂಡ ಕೆಂಪೇಗೌಡ ಹೇಳಿದರು.
ಪಟ್ಟಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿ, ಕುಮಾರಸ್ವಾಮಿ ಅವರು ಲೋಕಸಭೆ ಚುನಾವಣೆ ಬಳಿಕ ಮಹದೇವಪುರದಲ್ಲಿ ಗ್ರಾಮ ವಾಸ್ತವ್ಯ ಮಾಡುವುದಾಗಿ ಹೇಳಿದ್ದಾರೆ. ಆ ಸಂದರ್ಭದಲ್ಲಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಜೆಡಿಎಸ್ ಸರ್ಕಾರದಲ್ಲಿ ಮಹದೇವಪುರ ಗ್ರಾಮದ ಕಾವೇರಿ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣವಾಗಿದೆ. ರಸ್ತೆಗಳು ಅಭಿವೃದ್ಧಿ ಕಂಡಿವೆ ಎಂದರು.
ಈ ಬಾರಿ ಬಜೆಟ್‌ನಲ್ಲಿ ಮಹದೇವಪುರ ಬಹುಗ್ರಾಮ ಕುಡಿಯುವ ಯೋಜನೆಗೆ 28 ಕೋಟಿ ರೂ. ಮಂಜೂರು ಮಾಡಿದ್ದು ಚುನಾವಣೆ ನೀತಿ ಸಂಹಿತೆಯ ನಂತರ ಅವರು ಕಾಮಗಾರಿಗೆ ಚಾಲನೆ ನೀಡುವರು. ಮಹದೇವಪುರಕ್ಕೆ ಗ್ರಾಮ ವಾಸ್ತವ್ಯಕ್ಕೆ ಮುಖ್ಯ ಮಂತ್ರಿ ಕುಮಾರಸ್ವಾಮಿ ಆಗಮಿಸಲು ತಿಳಿಸಿದ್ದು ಬಂದ ದಿನದಂದು ಅವರಿಗೆ ಗಂಗೆ ಕೊಟ್ಟ ಭಗೀರಥ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ತಿಳಿಸಿದರು.
ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ನಿಖೀಲ್ ಕುಮಾರಸ್ವಾಮಿ ಗೆಲುವು ನಿಶ್ಚಿತ. ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಅವರಿಗೆ 30 ಸಾವಿರಕ್ಕೂ ಹೆಚ್ಚು ಮತಗಳು ಲಭಿಸಲಿದ್ದು, ಎಚ್.ಡಿ. ಕುಮಾರಸ್ವಾಮಿ ಅವರು ಅತ್ಯಂತ ಕಡಿಮೆ ಅವಧಿಯಲ್ಲಿ ಜಿಲ್ಲೆಗೆ 8,500 ಕೋಟಿ ಯಷ್ಟು ದಾಖಲೆ ಪ್ರಮಾಣದ ಅನುದಾನ ನೀಡಿದ್ದು, ಜನರು ಜೆಡಿಎಸ್ ಸರ್ಕಾರದಲ್ಲಿ ನೀಡಿರುವ ಅಭಿವೃದ್ಧಿ ಕಾರ್ಯಗಳನ್ನು ಗುರುತಿಸಿದ್ದು, ಲೋಕಸಭಾ ಜೆಡಿಎಸ್ ಅಭ್ಯರ್ಥಿ ನಿಖೀಲ್ ಕುಮಾರಸ್ವಾಮಿಯತ್ತ ಮತ ಹಾಕಿದ್ದಾರೆ ಆದ್ದರಿಂದ 2 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಅವರು ಗೆಲುವು ಸಾದಿಸಲಿದ್ದಾರೆ ಎಂದು ಹೇಳಿದರು. ರಾಮಲಿಂಗೇಗೌಡ, ಸುರೇಶ್, ಶಿವು, ಎಂ.ಸಿ.ರವಿಕುಮಾರ್ ಇತರರು ಇದ್ದರು.