ಬೆಂಗಳೂರು: ಬಸವರಾಜ ಬೊಮ್ಮಾಯಿ ಸರ್ಕಾರ 28ರಂದು ಒಂದು ವರ್ಷ ಪೂರೈಸುತ್ತಿದೆ. ಇದರ ಅಂಗವಾಗಿ ರಾಜ್ಯಾದ್ಯಂತ ಜನೋತ್ಸವ ಕಾರ್ಯಕ್ರಮ ಮೂರು ದಿನ ನಡೆಯಲಿದೆ. ಕಾಂಗ್ರೆಸ್ ನವರು ವ್ಯಕ್ತಿ ಉತ್ಸವ ಮಾಡುತ್ತಿದ್ದಾರೆ. ಆದರೆ ಬಿಜೆಪಿ ಜನತೆಯ ಹೆಸರಿನಲ್ಲಿ ಕಾರ್ಯಕ್ರಮ ಮಾಡುತ್ತಿದ್ದೇವೆ ಎಂದು ಸಚಿವ ಸುನಿಲ್ ಕುಮಾರ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜುಲೈ 28ರಿಂದ 30ರ ವರೆಗೂ ಜನೋತ್ಸವ ಕಾರ್ಯಕ್ರಮ ನಡೆಯಲಿದೆ. 28ರಂದು ದೊಡ್ಡಬಳ್ಳಾಪುರ ಬಿಜೆಪಿ ಪಕ್ಷದಿಂದ ಕಾರ್ಯಕ್ರಮ ನಡೆಯಲಿದೆ. 29 ಹಾಗೂ 30 ರಂದು ಆಯಾ ಜಿಲ್ಲೆಗಳ ಪ್ರಮುಖ ಸ್ಥಳಗಳಲ್ಲಿ ಜನೋತ್ಸವ ಕಾರ್ಯಕ್ರಮ ನಡೆಯಲಿದೆ ಎಂದರು.
ಜನೋತ್ಸವದ ಮೂಲಕ ಜನರ ಮುಂದೆ ಹೋಗುತ್ತಿದ್ದೇವೆ. ಬಿಜೆಪಿ ಜನರನ್ನು ಮುಂದಿಟ್ಟುಕೊಂಡು ಜನೋತ್ಸವ ಮಾಡುತ್ತಿದ್ದೇವೆ. ಕಾಂಗ್ರೆಸ್ ವ್ಯಕ್ತಿ ಉತ್ಸವ ಮಾಡುತ್ತಿದ್ದಾರೆ. ಕಾಂಗ್ರೆಸ್ ಸಿದ್ದರಾಮಯ್ಯ ಉತ್ಸವ ಮಾಡ್ತಿದ್ದಾರೆ. ನಾವು ವ್ಯಕ್ತಿ ಪೂಜೆ ಮಾಡಲ್ಲ ಎಂದರು.
ಇದನ್ನೂ ಓದಿ:ಕಾಗದದ ಹುಲಿ ಮೋದಿ, ಚೀನಾದ ಎದುರು ಇಲಿಯಾಗುವುದು ಯಾಕೆ?: ದಿನೇಶ್ ಗುಂಡೂರಾವ್
ವಿದ್ಯುತ್ ರಹಿತ ಮನೆಗೆ ಬೆಳಕು ಯೋಜನೆ ಅಡಿ ವಿದ್ಯುತ್ ಕೊಡಲಾಗುತ್ತಿದೆ. ಪರಿಶಿಷ್ಟ ಜಾತಿಗೆ 75 ಯೂನಿಟ್ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಟ್ರಾನ್ಸ್ ಫಾರ್ಮರ್ ಒಂದು ವಾರದಲ್ಲಿ ಬದಲಾವಣೆ ಮಾಡುತ್ತಿದ್ದೇವೆ. ಬೆಂಗಳೂರಿನಲ್ಲಿ ಆಕ್ಯುಪೆನ್ಸಿ ಸರ್ಟಿಫಿಕೇಟ್ ಇಲ್ಲದೆ ಕಟ್ಟಡ ನಿರ್ಮಾಣಕ್ಕೆ ಕ್ಲಿಯರೆನ್ಸ್ ಕೊಡಲ್ಲ ಎಂದು ಹಿಂದಿನ ಕಾಂಗ್ರೆಸ್ ಸರ್ಕಾರ ಮಾಡಿತ್ತು. ನಾವು ಅದನ್ನ ಕೈಬಿಟ್ಟಿದ್ದೇವೆ. ಹೊಸದಾಗಿ 1,500 ಕಿ.ಮೀ ವಿದ್ಯುತ್ ಕೇಬಲ್ ಎಳೆದಿದ್ದೇವೆ. 200 ಕಡೆ ಸಬ್ ಸ್ಟೇಷನ್ ಉನ್ನತೀಕರಣ ಮಾಡಿದ್ದೇವೆ. ಒಂದೊಂದು ಇಲಾಖೆ ಮುಖಾಂತರ ಜನರ ತಲುಪೋ ಕೆಲಸ ಮಾಡುತ್ತಿದ್ದೇವೆ ಎಂದರು.
ಜಮೀರ್‌ಗೆ ನೋಟಿಸ್ ನೀಡಿರೋ ವಿಚಾರವಾಗಿ ಮಾತನಾಡಿದ ಸಚಿವ ಸುನೀಲ್, ಕಾಂಗ್ರೆಸ್ ಜಮೀರ್ ಗೆ ನೋಟಿಸ್ ನೀಡಿದೆ. ಸಿದ್ದರಾಮಯ್ಯ ಹೇಳುವ ಮಾತನ್ನ ಜಮೀರ್ ಮೂಲಕ ಹೇಳಿಸಿದ್ದಾರೆ. ಎಐಸಿಸಿ ಕೊಟ್ಟಿರೋ ನೋಟಿಸ್ ಜಮೀರ್ ಗೆ ಅಲ್ಲ, ಸಿದ್ದರಾಮಯ್ಯ ಅವರಿಗೆ. ಜಾತಿ ಜಾತಿಗಳ ನಡುವೆ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ ಎಂದರು.