ಇತಿಹಾಸ ಪ್ರಸಿದ್ಧ ಬಾರಕೂರಿನೆಡೆಗಿನ ಸ್ಥಳೀಯ ಪ್ರವಾಸದ ಸುಂದರ ಅನುಭವ ನನ್ನ ಮನದಲ್ಲಿ ಅಚ್ಚೊತ್ತಿದೆ. ಅಲ್ಲಿ ಗೆಳೆಯರೊಂದಿಗೆ ಕಳೆದ ಸಮಯ ಅಮೂಲ್ಯವಾಗಿತ್ತು. ಬಾರಕೂರಿನ ಧಾರ್ಮಿಕ, ಐತಿಹಾಸಿಕ ಸ್ಥಳ ಪುರಾಣಗಳ ಸಮಗ್ರ ಇತಿಹಾಸದ ವೈಭವ ಒಮ್ಮೆ ಕಣ್ಣಮುಂದೆ ಚಲಿಸಿ ಮಾಯವಾಯಿತು.
ನಮ್ಮ ನಾಡು ದೇವಾಲಯಗಳ ನಾಡೂ ಹೌದು. ಏನೇ ಆದರೂ ಮೊದಲ ಸುತ್ತು ದೇವರಿಗೇ ತಾನೆ! ಬಾರಕೂರಿನಲ್ಲಿನ 365 ದೇವಾಲಯಗಳ ಸತ್ಯದ ಕಥೆಯ ಚರಿತ್ರೆ ಕೇಳಿ ಅದ್ಭುತವಾದುದು ಎಂದೆನಿಸಿತು. ಅಲ್ಲಿನ ರಾಜ ವರ್ಷದಲ್ಲಿ ಒಂದು ದೇವಾಲಯಕ್ಕೆ ಭೇಟಿ ಕೊಟ್ಟರೆ ಮತ್ತೆ ಆ ದೇವಾಲಯವನ್ನು ಆತ ದರ್ಶಿಸುವುದು ಮುಂದಿನ ವರ್ಷವಂತೆ. ಅಷ್ಟು ದೇವಾಲಯಗಳನ್ನು ಹೊಂದಿದ್ದ ವೈಭವದಿಂದ ಮೆರೆಯುತ್ತಿದ್ದ ಬಾರಕೂರಿನ ಇಂದಿನ ಸ್ಥಿತಿ ಮಾತ್ರ ಒಮ್ಮೆ ದಂಗುಬಡಿಸುತ್ತದೆ. ಬಾರಕೂರಿನ ಇತಿಹಾಸವನ್ನು ಅಲ್ಲಿಯ ಶ್ರೀಮಂತಿಕೆಯನ್ನು, ವೈಭವವನ್ನು ಅಲ್ಲಿ ಕಂಗೊಳಿಸುತ್ತಿದ್ದ ಬಾರಕೂರಿನ ಚರಿತ್ರೆಯನ್ನ ಅಲ್ಲಿನ ಪ್ರತೀ ಕಂಬ-ಕಲ್ಲೂಗಳೂ ಸಾರಿ ಹೇಳುವಂತಿದೆ. ಧಾರ್ಮಿಕ ಶ್ರದ್ಧೆ, ಪ್ರಕೃತಿ ವೀಕ್ಷಣೆ, ಶೈಕ್ಷಣಿಕ ಅರಿವು ಜೊತೆಗೆ ಮನರಂಜನೆ, ಶಾಂತಿ ಈ ಮೊದಲಾದ ಉದ್ದೇಶಗಳಿಗಾಗಿ ನಾನು ಇಲ್ಲಿಗೆ ಭೇಟಿಕೊಟ್ಟು ತಿಳಿದ ಇಲ್ಲಿನ ಲೋಕಾನುಭವ ಅದ್ಭುತಗಳೊಂದಿಗೆ ಅನೇಕ.
ಇಲ್ಲಿನ ಕಲ್ಲುಗಳ ರಾಶಿಯಂತಿದ್ದ ಶಾಸನಗಳನ್ನು ನೋಡಿ ನಿಜಕ್ಕೂ ನಾನು ಅಚ್ಚರಿ ಪಟ್ಟೆ. ಮೇಲ್ನೋಟಕ್ಕೆ ಹಾಸು ಕಲ್ಲಿನಂತೆ ಕಾಣುವ ಈ ಶಾಸನಗಳು ಎದ್ದು ನಿಂತಿರುವ ಭಂಗಿ ಚರಿತ್ರೆಗೆ ಮೂಕಸಾಕ್ಷಿಯಾಗಿದ್ದು ಅವುಗಳ ಅದ್ಭುತ ರಚನೆ, ಶಿಲ್ಪಿಯ ಕೆತ್ತನೆಗಳು ವಾವ್… ಒಂದೊಂದು ಕಲ್ಲೂ ಒಂದೊಂದು ಚರಿತ್ರೆಯನ್ನ ಸಾರುತ್ತವೆ. ಆದರೆ, ವಿಪರ್ಯಾಸ ನೋಡಿ, ಆಗಲೇ ಅರಿತದ್ದು ಶಾಸನಗಳ ಬಗ್ಗೆ ಅರಿವಿಲ್ಲದೆ ಸಾವಿರಾರು ವೀರಗಲ್ಲುಗಳು ಕೇವಲ ನಿತ್ಯೋಪಯೋಗಿ ವಸ್ತುವಾಗಿ ದುರ್ಬಳಕೆಯಾಗಿ ಹೋಗಿದ್ದು. ಇದರಿಂದಾಗಿ ಅದೆಷ್ಟೋ ಚರಿತ್ರೆ ಅಳಿದು ಹೋಗಿದ್ದು ನಮ್ಮ ದುರದೃಷ್ಟಕರ ಸಂಗತಿ ಎಂದೇ ಹೇಳಬಹುದು. ಇನ್ನೊಂದು ಕುತೂಹಲಕಾರಿಯಾದ ಐತಿಹಾಸಿಕ ಸ್ಥಳ ಬಾರಕೂರಿನ ಕೋಟೆ. ಕೋಟೆ ಎಂದರೆ ಕಲ್ಲು, ಗೋಡೆಗಳು ಮಾರುದ್ದ ಎದ್ದು ನಿಂತಿರುತ್ತವೆ ಎಂಬ ಕಲ್ಪನೆ ಇದ್ದ ನನ್ನ ಮನದ ಕಲ್ಪನಾ ಕೋಟೆಯ ಚಿತ್ರಣ ಒಮ್ಮೆಲೇ ಕುಸಿದು ಬಿದ್ದು , ಅಲ್ಲಿ ನಾನು ಕಂಡದ್ದು ವಿಶಾಲವಾದ ಮೈದಾನದಲ್ಲಿ ಕೋಟೆ ಇದ್ದಂತಹ ಶಿಲೆ ಕಲ್ಲು ಗಳ ಕುರುಹು ಮತ್ತು ಕಲ್ಲಿನಿಂದ ನಿರ್ಮಿಸಿದ ಚಿಕ್ಕ ಕೋಟೆಯಂತಿದ್ದ ಕೆರೆ ಮಾತ್ರ. ಆಗ ಅನ್ನಿಸಿತು- ತಿರುಗುವ ಕಾಲಚಕ್ರ ನಿಲ್ಲಿಸುವುದಕ್ಕೆ ಯಾರಿಂದ ಸಾಧ್ಯ ಎಂದು. ಆದರೂ ಇಂದಿಗೂ ಆ ಸ್ಥಳದ ಮಹಿಮೆ ನೋಡಿದಾಗ ಪ್ರಕೃತಿಯು ಮಾನವನಿಗೆ ನೀಡಿದ ಸವಾಲಿಗೆ ಇದು ಉತ್ತಮ ನಿದರ್ಶನವಾಗಿ ಕಣ್ಣ ಮುಂದಿದೆ ಎಂದು.
ಕನಸ ದೋಣಿಯಲಿ ಕೂತು ಪ್ರಕೃತಿಯು ಸೊಬಗ ಸೌಂದರ್ಯದಲಿ ನವಿಲಂತೆ ಕುಣಿದು ಹಸಿರ ಸಿರಿಯ ಮಧ್ಯದಲಿ ವಿಶಾಲ ಕೆರೆಯಿದ್ದು ಅದರ ಮಡಿಲಲಿ ನೆಲೆನಿಂತ ವರಾಂಗದಲ್ಲಿರುವ ಜೈನ ಬಸದಿಗೆ ಪ್ರವೇಶಿಸುತ್ತಿದ್ದಂತೆ ಮನ ಅರೆಗಳಿಗೆ ಇಲ್ಲೇ ಲೀನವಾಯಿತು. ಸಾವಿರಾರು ವರ್ಷಗಳ ಸುದೀರ್ಘ ಇತಿಹಾಸ ಹೊಂದಿದ ಗುಡಿ, ಅವುಗಳ ರಚನಾತಂತ್ರ, ಸಾಮರ್ಥ್ಯ ಎಲ್ಲರೂ ಮೆಚ್ಚುವಂಥದ್ದು. ನಮ್ಮ ದೇಗುಲಗಳೇ ನಮ್ಮ ರಾಷ್ಟ್ರದ ಹೆಗ್ಗುರುತು. ಇಂತಹ ದೇಗುಲಗಳ ಅಭ್ಯಾಸದಿಂದ ನಮ್ಮ ಬದುಕು ನಯವಾಗುತ್ತದೆ. ಕವಿಕಂಡ ಸತ್ಯ, ಶಿಲ್ಪಿ ಕಂಡ ಸೌಂದರ್ಯಗಳೇ ನಮ್ಮ ಬಾಳಿನ ಅಲಂಕಾರವೆಂಬ ಮಾತು ನಿಜಕ್ಕೂ ಅದ್ಭುತವೆ!
ಸಮಯ, ಸಮುದ್ರದ ಅಲೆಗಳು, ಕ್ಷಣಗಳು ಯಾರನ್ನೂ ಕಾಯಲಾರವು. ನಾವು ಕಳೆದ ಕ್ಷಣ, ನಾವು ಆಡಿದ ಮಾತು ಎರಡನೇ ಬಾರಿ ಸಿಗಲಾರವು ಎಂಬ ಮಾತು ನನಗೆ ನಿಜವೆನ್ನಿಸಿತು.
ಪ್ರತಿಮಾ ಭಟ್
ದ್ವಿತೀಯ ಬಿಎ, ವಿವೇಕಾನಂದ ಪದವಿ ಕಾಲೇಜು, ಪುತ್ತೂರು