ಶಿವಮೊಗ್ಗ: ರಾಜ್ಯದ ಜನತೆಗೆ ರಂಜಾನ್ ಶುಭಾಶಯ ಕೋರುತ್ತೇನೆ. ಹಿಂದೂ ಮುಸ್ಲಿಂ ಒಂದೇ ತಾಯಿಯ ಮಕ್ಕಳಂತೆ ಬದುಕಬೇಕೆನ್ನುವುದು ನಮ್ಮ ಅಪೇಕ್ಷೆ. ಇದಕ್ಕೆ ಎಲ್ಲರೂ ಕೂಡ ಸಹಕಾರ ನೀಡಬೇಕು ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು.
ನಾನು ಹಿಂದೆ ಹೇಳಿದಂತೆ ರಾಜ್ಯದಲ್ಲಿ ಜಿಲ್ಲಾವಾರು ಪ್ರವಾಸ ಪ್ರಾರಂಭವಾಗುತ್ತಿದೆ. ರಾಜ್ಯದಲ್ಲಿ 150 ಸ್ಥಾನ ಗುರಿಯಿಟ್ಟು, ಒಬ್ಬೊಬ್ಬರು ಒಂದೊಂದು ಜಿಲ್ಲಾ ಪ್ರವಾಸ ಮಾಡುತ್ತಿದ್ದೇವೆ. ವಾರಕ್ಕೊಂದು ಜಿಲ್ಲೆಗೆ ಹೋಗಿ ಪಕ್ಷದ ಸಂಘಟನೆಯನ್ನು ಬಲಪಡಿಸುತ್ತೇವೆ. ಮುಂಬರುವ ವಿಧಾನಸಭೆಯಲ್ಲಿ 150 ಸ್ಥಾನ ಗೆಲ್ಲುವ ಗುರಿಯೊಂದಿಗೆ ನಮ್ಮನ್ನು ನಾವು ತೊಡಗಿಸಿಕೊಂಡಿದ್ದೇವೆ. ಮೋದಿಯವರ ಆಶಯ ಹಾಗೂ ಒಳ್ಳೆಯ ಕೆಲಸವನ್ನು ಜನರ ಮುಂದಿಡುತ್ತೇವೆ. 150 ಕ್ಷೇತ್ರ ಗೆಲ್ಲಲು ಶಕ್ತಿ ಮೀರಿ ಪ್ರಯತ್ನ ಮಾಡುತ್ತೇವೆ. ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಸಹ ಗೆಲ್ಲಲು ವಿಶೇಷ ಪ್ರಯತ್ನ ಮಾಡುತ್ತೇವೆ ಎಂದರು.
ವಿಮಾನ ನಿಲ್ದಾಣಕ್ಕೆ ಯಡಿಯೂರಪ್ಪ ಹೆಸರು ವಿಚಾರದ ಬಗ್ಗೆ ಮಾತನಾಡಿದ ಅವರು, ನಾನು ಈಗಾಗಲೇ ನನ್ನ ಹೆಸರು ಇಡಬೇಡಿ ಎಂದು ಹೇಳಿದ್ದೇನೆ. ಯಾವ ಕಾರಣಕ್ಕೂ ಬೇಡ. ನನ್ನ ಹೆಸರು ಸೂಕ್ತ ಅಲ್ಲ. ಸ್ವಾತಂತ್ರ್ಯ ಹೋರಾಟಗಾರರು, ಬೇರೆ ಯಾರದ್ದಾದರೂ ಇಡಲು ಮನವಿ ಮಾಡಿದ್ದೇನೆ. ಸ್ವಾತಂತ್ರ್ಯ ಹೋರಾಟಗಾರರು ಸೇರಿದಂತೆ ಪ್ರಮುಖರು ಬಹಳಷ್ಟು ಜನ ಇದ್ದು, ಅವರ ಹೆಸರಿಡಲಿ ಎಂದರು.
ಇದನ್ನೂ ಓದಿ:ಶಿವಸೇನೆ ಸಂಸದ ರಾಹುಲ್ ಶೆವಾಲೆ ವಿರುದ್ಧ ರೇಪ್ ಆರೋಪ ಮಾಡಿದ ಯುವತಿ
ಸಚಿವ ಸಂಪುಟ ವಿಸ್ತರಣೆ ವಿಚಾರದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಸಿಎಂ ಬೊಮ್ಮಾಯಿ ನಾಳೆ ದೆಹಲಿಗೆ ಹೋಗುತ್ತಿದ್ದಾರೆ. ಇದರ ಬಗ್ಗೆ ಅಲ್ಲಿಯೇ ಸಮಾಲೋಚನೆ ಮಾಡಬಹುದು. ಮೇ.2ನೇ ತಾರೀಕು ಅಮಿತ್ ಶಾ ಬೆಂಗಳೂರಿಗೆ ಬರುತ್ತಿದ್ದಾರೆ. ಅ ಸಮಯದಲ್ಲಾದರೂ ಚರ್ಚೆ ಮಾಡಿ, ಅಂತಿಮಗೊಳಿಸುತ್ತಾರೆ ಎಂದರು.