Advertisement

Udayavani Campaign: ನಮಗೆ ಬಸ್‌ ಬೇಕೇ ಬೇಕು; 300 ಮಕ್ಕಳು, ಮೂರೇ ಬಸ್‌!

12:25 PM Jun 18, 2024 | Team Udayavani |

ಬೆಳ್ತಂಗಡಿ: ಗ್ರಾಮೀಣ ಭಾಗದ ಮಕ್ಕಳು ಗಟ್ಟಿಮುಟ್ಟು. ಹಾಗಾಗಿ ಬಸ್‌ ಏರುವ ಮುನ್ನವೇ ನೇತಾಡಿಕೊಂಡಾದರೂ, ಜೋತಾಡಿಕೊಂಡಾದರೂ ಹೋಗುವಷ್ಟು ಧೈರ್ಯವಿದೆ ಎಂಬುದು ಸಾರಿಗೆ ಇಲಾಖೆಯವರ ತಲೆಯಲ್ಲಿದೆಯೋ ಏನೋ!

Advertisement

ಆದರೆ, ಶಾಲೆ ಕಾಲೇಜಿಗೆ ಹೋಗುವ ಧಾವಂತದಲ್ಲಿ ಮಕ್ಕಳು ಆಯತಪ್ಪಿ ಬಿದ್ದರೆ ರಸ್ತೆಗೆ, ಅದು ಮಿಸ್‌ ಆಗಿ, ಹಿಂದಿನ ಬಸ್ಸಲ್ಲಿ ಹೋಗಿ ಲೇಟಾ ದರೆ ಕ್ಲಾಸಿಂದ ಹೊರಗೆ. ಇದು ಬೆಳ್ತಂಗಡಿ ತಾಲೂಕಿನ ವಿದ್ಯಾರ್ಥಿಗಳ ಸ್ಥಿತಿ.

ಬೆಳ್ತಂಗಡಿ ತಾಲೂಕು ಜಿಲ್ಲೆಯಲ್ಲೇ ಅತೀ ಹೆಚ್ಚು ವಿಸ್ತಾರವನ್ನು ಹೊಂದಿರುವ ತಾಲೂಕು. 81 ಗ್ರಾಮಗಳಿಗೆ ಸಂಬಂಧಿಸಿ ದಂತೆತೀರ ಹಳ್ಳಿಗಾಡಿನಿಂದ ಬರುವ ವಿದ್ಯಾರ್ಥಿಗಳು ಮಾತ್ರವಲ್ಲ. ಬೆಳ್ತಂಗಡಿ, ಧರ್ಮಸ್ಥಳ, ಉಜಿರೆ, ಮಂಗಳೂರು ಮಾರ್ಗವಾಗಿ ಸಂಚರಿಸುವ ಮಕ್ಕಳದ್ದೂ ಇದೇ ಸಂಕಷ್ಟ. ಎಷ್ಟು ಹೋರಾಟ ಮಾಡಿದರೂ ರಸ್ತೆ ತಡೆ ಮಾಡಿದರೂ ಕಿಮ್ಮತ್ತಿಲ್ಲ.

ಬೆಳ್ತಂಗಡಿ ತಾಲೂಕು ಕೇಂದ್ರದಿಂದ ಮಂಗಳೂರು ಮಾರ್ಗವಾಗಿ ಸಂಚರಿಸುವ ಹಾಗೂ ಉಜಿರೆ- ಬೆಳ್ತಂಗಡಿ, ನೆರಿಯ-ಧರ್ಮಸ್ಥಳ, ಕೊಕ್ಕಡ- ಧರ್ಮಸ್ಥಳ, ಧರ್ಮಸ್ಥಳ- ಉಜಿರೆ- ಬೆಳ್ತಂಗಡಿ, ವೇಣೂರು- ಬೆಳ್ತಂಗಡಿ, ಅಳ ದಂಗಡಿ-ಬೆಳ್ತಂಗಡಿ ಬಸ್‌ ಪ್ರಯಾಣ ಕಂಡಾಗ ಮಕ್ಕಳು ಬಿಡಿ ರಸ್ತೆಯಲ್ಲಿ ಹೋಗುವವರು ಒಮ್ಮೆ ಹೌಹಾರಬೇಕು.

ಇಲ್ಲಿನ ಪರಿಸ್ಥಿತಿ ಹೇಗಿದೆ ಎಂದರೆ 300 ಮಕ್ಕಳಿರುವ ಭಾಗದಲ್ಲಿ ಓಡುವುದು ಮೂರೇ ಬಸ್‌. ಮುನ್ನೂರು ಮಕ್ಕಳು ಮತ್ತು ಅಷ್ಟೇ ಸಂಖ್ಯೆಯ ಇತರ ಪ್ರಯಾಣಿಕರನ್ನು ಸಂಭಾಳಿಸುವ ಹೊಣೆ ಆ ಬಸ್‌ ನದ್ದು! ಬಸ್‌ಗೆ ಹತ್ತಲಾಗದವರು ಜೀಪು, ರಿಕ್ಷಾಗಳಲ್ಲಿ ಅಪಾಯಕಾರಿಯಾಗಿ ನೇತಾಡಿಕೊಂಡು ಬರಬೇಕು.

Advertisement

ಬಸ್‌ಗಳಿಗೂ ಮಿತಿ ಮೀರಿದ ಒತ್ತಡ!

ನೆರೆಯ, ಫೆರಿಯಡ್ಕ, ಗಂಡಿ ಬಾಗಿಲು ಇಲ್ಲಿಂದ ಉಜಿರೆ ಮತ್ತು ಬೆಳ್ತಂಗಡಿಗೆ ಹೋಗುವಂತಹ ವಿದ್ಯಾರ್ಥಿಗಳಿಗೆ ಬಸ್ಸುಗಳು ವ್ಯವಸ್ಥೆ ಇದೆ. ಕಕ್ಕಿಂಜೆ-ಬಸ್ತಿ- ಸೋಮಂತಡ್ಕವಾಗಿ ಧರ್ಮಸ್ಥಳ ಸಾಗುವ ರಸ್ತೆಯಲ್ಲಿ ನೂರಕ್ಕೂ ಅಧಿಕ ಮಕ್ಕಳಿದ್ದಾರೆ. ಮತ್ತೂಂದೆಡೆ ಪೆರಿಯಡ್ಕ – ನೆರಿಯ -ಗಂಡಿಬಾಗಿಲು – ಧರ್ಮಸ್ಥಳ ಸಾಗುವ ರಸ್ತೆಯಲ್ಲಿ 80ಕ್ಕೂ ಅಧಿಕ ಮಕ್ಕಳಿದ್ದಾರೆ.

ಈ ಮಾರ್ಗವಾಗಿ ಬೆಳಗ್ಗೆ 8.15ಕ್ಕೆ ಬರುವ ಬಸ್‌ ಆರಂಭದಿಂದ ಬಸ್‌ ನಿಲ್ದಾಣದಿಂದಲೇ ಫುಲ್‌, ಕೊನೆಗೆ ಬಸ್‌ ಸ್ಪೆಪ್‌ವರೆಗೂ ನೇತಾಡಿಕೊಂಡೇ ಬರುತ್ತಾರೆ. ಬಸ್ತಿ, ಕಕ್ಕಿಂಜೆ, ಬೆಂದ್ರಾಳ, ಚಿಬಿದ್ರೆ ನಡುವೆ ಇರುವ ಮಕ್ಕಳಿಗೆ ಬಸ್‌ ವ್ಯವಸ್ಥೆ ಇಲ್ಲ. ಆ ಬಸ್‌ ಮಿಸ್‌ ಆಯಿತೆಂದರೆ ಮತ್ತೆ 9 ಗಂಟೆಗೆ ಬಸ್‌. ಅದು ಉಜಿರೆ ಕಾಲೇಜಿಗೆ 9.30ಕ್ಕೆ ತಲುಪುತ್ತದೆ. ಪದವಿ ತರಗತಿಗಳು 9ಕ್ಕೆ ಆರಂಭವಾಗುತ್ತದೆ. ಅಲ್ಲಿ ತೆರಳಿದರೆ ತರಗತಿಯಿಂದ ಹೊರಗಿರಬೇಕು. ಪ್ರಸಕ್ತ ಕಾಲೇಜಿಗೆ ರಜೆ, ಜೂನ್‌ 24ರಿಂದ ಕಾಲೇಜು ಆರಂಭ ವಾಗುತ್ತದೆ. ಈ ಸಮಸ್ಯೆ ನಿರಂತರ.

ಮಳೆಗಾಲದಲ್ಲಂತೂ ಕೆಸರು ಮಯ, ಸಮವಸ್ತ್ರ ಕೆಸರುಮಯ, ನಾವು ತರಗತಿಗೆ ಹೇಗೆ ತೆರಳುವುದು ಎಂಬುದು ಮಕ್ಕಳ ಅಳಲು. ಇದರ ಬಗ್ಗೆ ಹಲವಾರು ಬಾರಿ ತಿಳಿಸಿದರು ಯಾವುದೇ ರೀತಿಯ ಪ್ರತಿಕ್ರಿಯೆ ಇಲ್ಲ. ಬಸ್ತಿಯಿಂದ ಧರ್ಮಸ್ಥಳಕ್ಕೆ ಬೆಳಗ್ಗೆ ಮತ್ತು ಸಂಜೆ ಕಾಲೇಜು ಮತ್ತು ಶಾಲೆಗೆ ಹೋಗುವ ಹೊತ್ತಿಗೆ ಹೆಚ್ಚುವರಿ ಒಂದು ಬಸ್‌ ಬಿಟ್ಟರೆ ಅನುಕೂಲ ಎನ್ನುತ್ತಾರೆ ಪೋಷಕರು.

ಕಾಲೇಜು ಶುರುವಾದ ಮೇಲೆಯೇ ಬರುವ ಬಸ್‌!

  • ಬೆಳಾಲುನಿಂದ ಉಜಿರೆಗೆ 3 ಬಸ್‌ ಗಳು ಇದ್ದು ಮೂರು ಬಸ್ಸಲ್ಲಿಯೂ ನೇತಾಡಿಕೊಂಡು ಬರುವ ಪರಿಸ್ಥಿತಿ.
  • ಪುತ್ತೂರು ಉಜಿರೆ ಮಾರ್ಗವಾಗಿ ಬರುವ ಬಸ್‌ಗಳು ಸಮಯಕ್ಕೆ ಸರಿಯಾಗಿ ಬರುತ್ತಿಲ್ಲ. ಉಜಿರೆಯಲ್ಲಿ ಶಾಲೆ 9 ಗಂಟೆಗೆ ಆರಂಭವಾದರೆ, ಬಸ್‌ 9.20ಗೆ ಬರುವ ಸ್ಥಿತಿ ಇದೆ.
  • ಮೂಡುಬಿದಿರೆ-ವೇಣೂರು ಮಾರ್ಗವಾಗಿ ಸರಿಯಾದ ಸಂಖ್ಯೆಯಲ್ಲಿ ಬಸ್‌ ವ್ಯವಸ್ಥೆ ಇಲ್ಲ.
  • ಉಜಿರೆ-ಗುರುವಾಯನಕೆರೆ- ನಾರಾವಿ ಮಾರ್ಗವಾಗಿ ಕೇವಲ ಒಂದು ಸರಕಾರಿ ಬಸ್‌ ಇದೆ. ಆ ಮಾರ್ಗವಾಗಿ ಬರುವ ವಿದ್ಯಾರ್ಥಿ ಗಳ ಸಂಖ್ಯೆ ನೂರಾರು ಸಂಖ್ಯೆಯಲ್ಲಿ ದ್ದಾರೆ. ಇಲ್ಲಿ ಖಾಸಗಿ ಬಸ್‌ಗಳೇ ಮಕ್ಕಳನ್ನು ಪೊರೆಯುವುದು.
  • ಧರ್ಮಸ್ಥಳ-ಉಜಿರೆ-ಮಡಂತ್ಯಾರು-ಪುಂಜಾಲಕಟ್ಟೆ ಮಾರ್ಗವಾಗಿ ಬೆಳಗ್ಗೆ 7.30 ರಿಂದ 9 ಗಂಟೆವರೆಗೆ ಇರುವ ಬಸ್‌ ಫುಲ್‌ ರಶ್‌. ಮಕ್ಕಳು, ಉದ್ಯೋಗಿಗಳು ಎಲ್ಲರೂ ಇದರಲ್ಲೇ ಹೋಗಬೇಕು.

ನಿಮ್ಮ ಊರಿನ ಬಸ್‌ ಸಮಸ್ಯೆ ನಮಗೆ ತಿಳಿಸಿ ನೀವೂ ಬಸ್‌ ಸಮಸ್ಯೆ ಎದುರಿಸುತ್ತಿದ್ದೀರಾ? ನಿಮ್ಮ ಮಕ್ಕಳಿಗೆ ತೊಂದರೆ ಆಗುತ್ತಿದೆಯಾ? ಬಸ್‌ ಇಲ್ಲದಿರುವುದು, ನಿಲ್ಲಿಸದಿರುವುದು, ವಿಪರೀತ ರಶ್‌ನಿಂದ ಹತ್ತಲಾಗದೆ ಇರುವುದು, ಟ್ರಿಪ್‌ ಕಟ್‌, ಪರ್ಮಿಟ್‌ ಇದ್ದರೂ ಬಸ್‌ ಓಡಿಸದೆ ಇರುವುದು ಸೇರಿದಂತೆ ಹಲವು ಸಮಸ್ಯೆಗಳಿಂದ ಶಾಲಾ-ಕಾಲೇಜು ಪ್ರಯಾಣಕ್ಕೆ ತೊಂದರೆ ಆಗುತ್ತಿದೆಯಾ? ಅಂತಹ ಸಮಸ್ಯೆ ಇದ್ದರೆ (ಸಾಧ್ಯವಾದರೆ ಫೋಟೋ ಸಹಿತ) ಉದಯವಾಣಿ ಸುದಿನದ ವಾಟ್ಸಾಪ್‌ ನಂಬರ್‌ 6362906065ಗೆ ಕಳುಹಿಸಿ.

-ಚೈತ್ರೇಶ್‌ ಇಳಂತಿಲ

 

Advertisement

Udayavani is now on Telegram. Click here to join our channel and stay updated with the latest news.

Next