Advertisement

ನಾವಂತು ಪ್ರಯತ್ನಿಸಿದ್ದೇವೆ ನಾವು ಪ್ರಯತ್ನಿಸುತ್ತಿದ್ದೇವೆ

11:02 PM Feb 21, 2020 | Team Udayavani |

ನಗರಸಭೆ ಇರುವುದು ಜನರಿಗೆ ಬೇಕಾದ ಆಡಳಿತ ನೀಡುವುದಕ್ಕಾಗಿ. ಈ ಆಡಳಿತವೆಂಬ ಬಂಡಿಯ ಎರಡು ಚಕ್ರಗಳು ಚುನಾಯಿತ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು. ಇಬ್ಬರೂ ವ್ಯವಸ್ಥಿತವಾಗಿ ಸಮನ್ವಯದಿಂದ ನಡೆದರೆ ಹಲವು ಸಮಸ್ಯೆಗಳು ಬಗೆಹರಿಯುತ್ತವೆ. ಕೆಲವೊಮ್ಮೆ ಅಧಿಕಾರಿಗಳೆಂಬ ಚಕ್ರ ತನ್ನ ಕಡೆಗೆ ಎಳೆಯುವುದೂ ಉಂಟು. ಆ ಸಂದರ್ಭದಲ್ಲಿ ತಮ್ಮ ಅಧಿಕಾರ ಬಲದಿಂದ ಸರಿಪಡಿಸಿ, ಜನ ಪರ ಕಾರ್ಯಗಳನ್ನು ಸಾಧ್ಯವಾಗಿಸಬೇಕಾದ ಉನ್ನತ ಹೊಣೆ ಚುನಾಯಿತ ಜನಪ್ರತಿನಿಧಿಗಳ ಮೇಲಿದೆ. ಕಳೆದ 15 ವರ್ಷಗಳಲ್ಲಿ ಚುನಾಯಿತ ಜನಪ್ರತಿನಿಧಿಗಳು ಇಂದ್ರಾಣಿ ತೀರ್ಥ ನದಿಯ ಸಮಸ್ಯೆ ಪರಿಹರಿಸುವಲ್ಲಿ ಏನೆಲ್ಲ ಪ್ರಯತ್ನ ಮಾಡಿದ್ದಾರೆ ಮತ್ತು ಮಾಡುತ್ತಿದ್ದಾರೆ. ಆದರೂ ಸಮಸ್ಯೆಯೆಂಬ ಆನೆ ಒಂದಿನಿತೂ ಕದಲುತ್ತಿಲ್ಲ. ಅವರೇ ಸುದಿನ ತಂಡ ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ.

Advertisement

ಅಂದ ಹಾಗೆ ಸದಸ್ಯರ ಅಭಿಪ್ರಾಯದ ಪ್ರಾಮಾಣಿಕತೆ ಕುರಿತು ನಾವು ಪ್ರಶ್ನಿಸುತ್ತಿಲ್ಲ. ಅದನ್ನು ಆಯಾ ವಾರ್ಡ್‌ನ ನಾಗರಿಕರೇ ತೂಗಿ ನೋಡಬೇಕು.

ಮಾಜಿ ಸದಸ್ಯರಿಗೆ ಕೇಳಿದ ಪ್ರಶ್ನೆಗಳು
1 ನಿಮ್ಮ ಪ್ರದೇಶದ ಸಮಸ್ಯೆಯ ಗಂಭೀರತೆ ಅರಿವಿಗೆ ಬಂದಿದೆಯೇ?
2 ಹಾಗಾದರೆ ಈ ಸಮಸ್ಯೆ ನಿವಾರಣೆಗೆ ಯಾವ್ಯಾವ ರೀತಿ ಪ್ರಯತ್ನಿಸಿದ್ದೀರಿ?
3 ಎಷ್ಟು ಬಾರಿ ನಗರಸಭೆಯ ಸಾಮಾನ್ಯ ಸಭೆಗಳಲ್ಲಿ ಪ್ರಸ್ತಾವಿಸಿದ್ದೀರಿ? ಪರಿಹಾರಕ್ಕೆ ಆಗ್ರಹಿಸಿದ್ದೀರಿ?
4 ಈ ಸಮಸ್ಯೆ ನಿವಾರಣೆಗೆ ಸಭೆಯಲ್ಲಿ ಪ್ರಸ್ತಾವ ಹಾಗೂ ಪ್ರತಿಭಟನೆ ಹೊರತುಪಡಿಸಿ
ಇನ್ಯಾವ ರೀತಿಯ ಪ್ರಯತ್ನ ಮಾಡಿದ್ದೀರಿ?
5 ನಿಮ್ಮ ಪ್ರದೇಶದ ಸಮಸ್ಯೆ ಪೀಡಿತ ಸಂತ್ರಸ್ತರಿಗೆ ನಿಮ್ಮ ಅವಧಿಯಲ್ಲಿ
ಯಾವ ರೀತಿಯ ಅನುಕೂಲಕರ ಕ್ರಮ ಕೈಗೊಂಡಿದ್ದೀರಿ?

ಕೊಡಂಕೂರು ವಾರ್ಡ್‌
ನಮ್ಮ ಪ್ರಶ್ನೆಗೆ ಅವರ ಉತ್ತರ
– ಸಮಸ್ಯೆ ಬಗ್ಗೆ ಅರಿವು ಇತ್ತು.
– ವೆಟ್‌ವೆಲ್‌ಗ‌ಳಿಗೆ ಪೈಪ್‌ ಅಳವಡಿಸುವ ಸಂದರ್ಭದಲ್ಲಿ ಸಾಕಷ್ಟು ಹೋರಾಟ ಮಾಡಿ ದ್ದೇನೆ. ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿಕೊಂಡು ಸಮಸ್ಯೆ ಬಗ್ಗೆ ಅರಿವು ಮೂಡಿಸಿದ್ದೇನೆ.
– ಎಷ್ಟು ಎನ್ನುವ ಲೆಕ್ಕವಿಲ್ಲ. ಆದರೆ ಪ್ರತಿಯೊಂದು ಸಭೆಯಲ್ಲಿ ಸಹ ಸಮಸ್ಯೆ ಕುರಿತು ಆಗ್ರಹಿಸಿದ್ದೇನೆ.
– ಜಿಲ್ಲಾಧಿಕಾರಿಗಳಿಗೆ, ಪರಿಸರ ಇಲಾಖೆ, ಆರೋಗ್ಯ ಇಲಾಖೆಗೆ ಇಂದ್ರಾಣಿ ನದಿ ಪಾತ್ರದ ಜನರ ಸಮಸ್ಯೆಗಳ ಕುರಿತು ಸಂಪೂರ್ಣ ಚಿತ್ರಣ ನೀಡಲಾಗಿತ್ತು.
– ಆರೋಗ್ಯ ಶಿಬಿರ, ಸೊಳ್ಳೆ ಪರದೆ, ಜನರಿಗೆ ಸ್ವತ್ಛತೆ ಬಗ್ಗೆ ಅರಿವು ಮೂಡಿಸಲಾಗಿದೆ.

ಕೊಡಂಕೂರು ವಾರ್ಡ್‌ ಮೂಲಕ ಹರಿದು ಹೋಗುವ ಇಂದ್ರಾಣಿ ನದಿಗೆ ವೆಟ್‌ವೆಲ್‌ಗ‌ಳ ತ್ಯಾಜ್ಯ ನೀರು ಸೇರುವುದರಿಂದ ಪರಿಸರದ ಬಾವಿಗಳು ಹಾಳಾಗುತ್ತಿರುವ ಕುರಿತು 2008ರಿಂದ 2018ವರೆಗಿನ ಸಾಮಾನ್ಯ ಸಭೆಗಳಲ್ಲಿ ಸಾಕಷ್ಟು ಬಾರಿ ಅಧ್ಯಕ್ಷರ ಹಾಗೂ ಅಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ಆದರೆ ಪರಿಹಾರ ಮಾತ್ರ ಸಿಕ್ಕಿಲ್ಲ. ನಿಟ್ಟೂರು ಎಸ್‌ಟಿಪಿ ಕೇವಲ ಹೆಸರಿಗೆ ಮಾತ್ರ. ಇಲ್ಲಿ ಕೊಳಚೆ ನೀರಿನ ಶುದ್ಧೀಕರಣ ಸರಿಯಾಗಿ ನಡೆಯುತ್ತಿಲ್ಲ.
-ಜಾನಕಿ ಗಣಪತಿ ಶೆಟ್ಟಿಗಾರ್‌, (2008-2018)

Advertisement

ಕೊಡವೂರು ವಾರ್ಡ್‌
ನಮ್ಮ ಪ್ರಶ್ನೆಗೆ ಅವರ ಉತ್ತರ

– ಇಂದ್ರಾಣಿ ನದಿಗೆ ಕೊಳಚೆ ನೀರು ಸೇರುತ್ತಿರುವ ಸಮಸ್ಯೆ ಬಗ್ಗೆ ಸಂಪೂರ್ಣ ಅರಿವಿದೆ. 1997ರಲ್ಲಿ ಈ ವಾರ್ಡ್‌ನ ಸದಸ್ಯೆಯಾದ ಬಳಿಕ ಇಂದಿನವರೆಗೆ ಈ ಕುರಿತು ಸಾಕಷ್ಟು ಹೋರಾಟ ಮಾಡಿದ್ದೇನೆ.
– ಸಾಮಾನ್ಯ ಸಭೆಯಲ್ಲಿ ಹಲವು ಬಾರಿ ಮಾತ ನಾಡಿದ್ದೇನೆ. ಅಧ್ಯಕ್ಷೆಯಾಗಿದ್ದಾಗ ಅಧಿಕಾರಿ ಗಳನ್ನು ಕರೆದೊಯ್ದು ಸಮಸ್ಯೆ ವಿವರಿಸಿದ್ದೆ. ವೆಟ್‌ವೆಲ್‌ಗ‌ಳ ಪಂಪ್‌ ಹಾಳಾದಾಗ ದುರಸ್ತಿ ಮಾಡಿಸಿದ್ದೆ. ನಗರಸಭೆ ಬಜೆಟ್‌ನಲ್ಲಿ ಒಳ ಚರಂಡಿಗಾಗಿ ಪ್ರತ್ಯೇಕ ಹಣಕ್ಕಾಗಿ ಪ್ರಸ್ತಾವಿಸಿದ್ದೆ.
– ಎಷ್ಟು ಎನ್ನುವ ಲೆಕ್ಕವಿಲ್ಲ. ಆದರೆ ಪ್ರತಿ ಸಭೆಯಲ್ಲೂ ಸಮಸ್ಯೆಯನ್ನು ಪ್ರಸ್ತಾವಿಸಿದ್ದೆ. ಅಧಿಕಾರಿಗಳು ಸರಿಮಾಡುವುದಾಗಿ ತಿಳಿಸಿ ಮೌನಕ್ಕೆ ಶರಣಾಗುತ್ತಿದ್ದರು. ಸಮಸ್ಯೆ ಬಗೆಹರಿಸಲು ಅವರಲ್ಲಿ ಯೋಜನೆ ಇಲ್ಲ.
– ಜಿಲ್ಲಾಧಿಕಾರಿಗಳಿಗೆ, ನಗರಸಭೆಗೆ ಸಮಸ್ಯೆ ಕುರಿತು ಸಂಪೂರ್ಣ ಚಿತ್ರಣ ನೀಡಲಾಗಿತ್ತು.
– ಬಾವಿ ನೀರು ಹಾಳಾದ ಮನೆಗಳಿಗೆ ನಲ್ಲಿ ಸಂಪರ್ಕ ಕಲ್ಪಿಸಲಾಗಿದೆ.

ಒಳಚರಂಡಿ 2ನೇ ಹಂತ ಯೋಜನೆ ಜಾರಿ ಕುರಿತ ಸಭೆಯಲ್ಲಿ ಇಂದ್ರಾಣಿ ನದಿ ನಂಬಿಕೊಂಡ ಕುಟುಂಬ ಗಳಿಗಾಗುವ ತೊಂದರೆಯನ್ನು ಮಾಜಿ ಸಚಿವ ದಿ| ವಿ.ಎಸ್‌. ಆಚಾರ್ಯರಿಗೆ ವಿವರಿಸಿದ್ದೆ.
-ಮೀನಾಕ್ಷಿ  ಮಾಧವ ಬನ್ನಂಜೆ (1997-2002, 2008-2018)

– ಸಮಸ್ಯೆಯ ಗಂಭೀರತೆಯ ಬಗ್ಗೆ ಅರಿವಿತ್ತು. ಆದರೆ 2002-2007ರಲ್ಲಿ ಸಮಸ್ಯೆ ಇಷ್ಟು ಭೀಕರತೆ ರೂಪ ಪಡೆದಿರಲಿಲ್ಲ.
– ಶಾರದ ವೆಟ್‌ವೆಲ್‌ನಿಂದ ಕೊಳಚೆ ನೀರು ಇಂದ್ರಾಣಿ ನದಿಗೆ ಹರಿಸುತ್ತಿರುವುದರಿಂದ ನದಿ ಪಾತ್ರದ ಮನೆಗಳ ಬಾವಿಗಳು ಹಾಳಾಗುತ್ತಿರುವ ಕುರಿತು ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು.
– ಲೆಕ್ಕವಿಲ್ಲ. ಆದರೆ ಹೆಚ್ಚಿನ ಸಾಮಾನ್ಯ ಸಭೆಯಲ್ಲಿ ಇಂದ್ರಾಣಿ ಕೂಗು ಕೇಳುತ್ತಿತ್ತು.
– ಪ್ರತಿಭಟನೆ ಅಗತ್ಯವಿರಲಿಲ್ಲ. ಆ ಸಂದರ್ಭ ಕರ್ನಾಟಕ ನೀರು ಸರಬರಾಜು ನಿಗಮದಿಂದ ಶಾರದಾ ವೆಟ್‌ವೆಲ್‌ ಕೆಲಸವಾಗುತ್ತಿತ್ತು.

ಹಲವು ಬಾರಿ ಸಭೆಯಲ್ಲಿ ಪ್ರಸ್ತಾವವಾದರೂ ಅಧಿಕಾರಿಗಳು ಕ್ರಮ ಕೈಗೊಂಡಿರಲಿಲ್ಲ. ನಾನು ಈ ವಾರ್ಡ್‌ ನ್ನು ನಿರ್ವಹಿಸುವಾಗ ಸಮಸ್ಯೆ ಇಷ್ಟೊಂದು ಭೀಕರವಾಗಿರಲಿಲ್ಲ. ಮನೆ ಬಾವಿಗಳೂ ಹಾಳಾಗಿದ್ದರ ಬಗ್ಗೆಯೂ ನಗರಸಭೆ ಗಮನಕ್ಕೆ ತರಲಾಗಿತ್ತು.
-ಕೆ. ಪ್ರಸಾದ್‌,  ಕೊಡವೂರು ವಾರ್ಡ್‌ ಮಾಜಿ ಸದಸ್ಯ.(2002-2007)

ಹಾಲಿ ಸದಸ್ಯರಿಗೆ ಕೇಳಿದ ಪ್ರಶ್ನೆಗಳು
1 ನೀವು ಗೆದ್ದ ಮೇಲೆ (ಚುನಾವಣೆ ಪ್ರಚಾರ ಸಂದರ್ಭ ಬಿಟ್ಟು) ಎಷ್ಟು ಬಾರಿ ನಿಮ್ಮ ಪ್ರದೇಶದ ಸಮಸ್ಯೆ ಪೀಡಿತ ಭಾಗಕ್ಕೆ ತೆರಳಿದ್ದೀರಿ?
2 ಆ ಬಳಿಕ ಸಮಸ್ಯೆ ನಿವಾರಣೆಗೆ ಯಾವ ರೀತಿ ಪ್ರಯತ್ನ ಮಾಡಿದ್ದೀರಿ?
3 ಆಡಳಿತ ಮಂಡಳಿ ಇಲ್ಲ. ಆದರೆ ನಗರಸಭೆ ಪೌರಾಯುಕ್ತರ/ಜಿಲ್ಲಾಧಿಕಾರಿಗಳ ಗಮನ ಸೆಳೆಯಲು ಎಷ್ಟು ಬಾರಿ ಪ್ರಯತ್ನಿಸಿದ್ದೀರಿ? ಅದರ ಪರಿಣಾಮವೇನಾದರೂ ಆಗಿದೆಯ?
4 ನಿಮ್ಮ ಪ್ರದೇಶದ ಸಂತ್ರಸ್ತರ ಆರೋಗ್ಯ ನೆಲೆಯಲ್ಲಿ ಉಚಿತ ತಪಾಸಣಾ ಶಿಬಿರ ಇತ್ಯಾದಿ
ಏನನನ್ನಾದರೂ ಆಯೋಜಿಸಿದ್ದೀರಾ? ಪರಿಣಾಮವೇನು?

ಕೊಡಂಕೂರು ವಾರ್ಡ್‌
ನಮ್ಮ ಪ್ರಶ್ನೆಗೆ ಅವರ ಉತ್ತರ
– ಹಲವು ಬಾರಿ ಭೇಟಿ ನೀಡಿ ಜನರನ್ನು ಸಂಪರ್ಕಿಸಿದ್ದೇನೆ.
–  ನದಿಯಲ್ಲಿ ಬಿದ್ದಿರುವ ಮರಗಳನ್ನು ತೆರವುಗೊಳಿಸಲಾಗಿದೆ. ಬಾವಿ ಹಾಳಾಗಿರುವ ಮನೆಗಳಿಗೆ ನಳ್ಳಿ ನೀರು ನೀಡುವಂತೆ ಶಾಸಕರು ಹಾಗೂ ಪೌರಾ ಯುಕ್ತರಲ್ಲಿ ಮನವಿ ಮಾಡಲಾಗಿದೆ.
– ಅನೇಕ ಬಾರಿ ಸಮಸ್ಯೆ ಬಗ್ಗೆ ಪೌರಾಯುಕ್ತರ ಗಮನಕ್ಕೆ ತರಲಾಗಿದೆ. ಆದರೆ ಪರಿಹಾರ ಸಿಕ್ಕಿಲ್ಲ.
– ವಾರ್ಡ್‌ ಮಟ್ಟದಲ್ಲಿ ಆರೋಗ್ಯ ಶಿಬಿರ ನಡೆಸಲಾಗಿದೆ. ಆದರೆ ಪ್ರತ್ಯೇಕವಾಗಿ ಸಂತ್ರಸ್ತರಿ ಗಾಗಿ ಯಾವುದೇ ಆರೋಗ್ಯ ಶಿಬಿರ ನಡೆಸಿಲ್ಲ.
– ಕೊಡಂಕೂರು ವಾರ್ಡ್‌ನಲ್ಲಿ ಇಂದ್ರಾಣಿ ನದಿ ಹಾದಿ ಹೋಗುವ ಪ್ರದೇಶದ ಹೆಚ್ಚಿನ ಬಾವಿಗಳು ಹಾಳಾಗಿವೆ. ಈ ಬಗ್ಗೆ ನಗರಸಭೆ ಗಮನಕ್ಕೆ ತರಲಾಗಿದೆ. ಆದರೆ ಪರಿಹಾರ ಮಾತ್ರ ಸಿಗುತ್ತಿಲ್ಲ.

ನನ್ನ ವಾರ್ಡ್‌ ಪ್ರದೇಶದಲ್ಲಿ ಬಾವಿ ಹಾಳಾಗಿರುವ ಮನೆಗಳಿಗೆ ನಳ್ಳಿ ನೀರುವ ಪೂರೈಸುವಂತೆ ನಗರ ಸಭೆಗೆ ಮನವಿ ಮಾಡಲಾಗಿದೆ. ಹಲವು ಬಾರಿ ಸಮಸ್ಯೆ ಬಗೆಹರಿಸಲು ಕೋರಿದರೂ ಪ್ರಯೋಜನವಾಗಿಲ್ಲ.
-ಸಂಪಾವತಿ, ನಗರಸಭಾ ಸದಸ್ಯೆ

ಕೊಡವೂರು ವಾರ್ಡ್‌
ನಮ್ಮ ಪ್ರಶ್ನೆಗೆ ಅವರ ಉತ್ತರ

– ಅನೇಕ ಬಾರಿ ಸಮಸ್ಯೆ ಪೀಡಿತ ಪ್ರದೇಶಕ್ಕೆ ತೆರಳಿ ಜನರನ್ನು ಮಾತನಾಡಿಸಿದ್ದೇನೆ. 8 ಬಾರಿ ರೈತ ಮುಖಂಡರ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ.
– ಜಿಲ್ಲಾಧಿಕಾರಿ, ಪೌರಾಯುಕ್ತರಿಗೆ, ಪರಿಸರ, ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸಾರ್ವಜನಿಕರ ಸಮಸ್ಯೆ ವಿವರಿಸಲಾಗಿದೆ. ಇಂದ್ರಾಣಿ ತೀರ್ಥ ಹೋರಾಟ ಸಮಿತಿ ವತಿಯಿಂದ ಪ್ರಧಾನ ಮಂತ್ರಿ ಅವರಿಗೆ ಸಮಸ್ಯೆ ಕುರಿತು ಪತ್ರ ಬರೆಯುವ ಯೋಚನೆ ಇದೆ.
– ನಾನು ಸಹಿತ ಸಾರ್ವಜನಿಕರು ನಗರಸಭೆ ಹಾಗೂ ಜಿಲ್ಲಾಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿ ದರೂ ಪ್ರಯೋಜನವಾಗುತ್ತಿಲ್ಲ. ಪೌರಾಯುಕ್ತರು ಹಾಗೂ ನಗರಸಭೆ ಜನ ಪ್ರತಿನಿಧಿಗಳೊಂದಿಗೆ ಇಲ್ಲಿ ವರೆಗೆ 5 ಬಾರಿ ಅನೌಪಚಾರಿಕ ಸಭೆಗಳು ನಡೆದಿವೆ. ಪ್ರತಿ ಸಭೆಯಲ್ಲೂ ನದಿಗೆ ತ್ಯಾಜ್ಯ ನೀರು ಬಿಡುತ್ತಿರುವುದರ ಕುರಿತು ಗಮನಕ್ಕೆ ತರಲಾಗಿದೆ. ಸಮಸ್ಯೆ ಪರಿಹರಿಸುವುದಾಗಿ ಹೇಳಿ ದಿನ ಮುಂದೆ ಹಾಕುತ್ತಿದ್ದಾರೆ. ಬಾವಿ ನೀರು ಹಾಳಾಗಿರುವ ಕುರಿತು ಸಾಕಷ್ಟು ಬಾರಿ ಅಧಿಕಾರಿಗಳ ಗಮನಕ್ಕೆ ತರಲಾಗಿದೆ.
– ತಪಾಸಣಾ ಶಿಬಿರ ನಡೆಸಲಾಗಿದೆ. ಆದರೆ ಪೀಡಿತ ಪ್ರದೇಶದ ಸಂತ್ರಸ್ತರಿಗಾಗಿ ಪ್ರತ್ಯೇಕವಾಗಿ ಮಾಡಿಲ್ಲ.

ನಮ್ಮ ವಾರ್ಡ್‌ನಲ್ಲಿ ಇಂದ್ರಾಣಿ ನದಿ ಹರಿದು ಹೋಗುವ ಪ್ರದೇಶದಲ್ಲಿ ಯಾವುದೇ ಮನೆಯಲ್ಲಿ ಕಾರ್ಯಕ್ರಮ, ಸಮಾರಂಭ ನಡೆದರೂ ಊಟಕ್ಕೆ ಬರುವವರ ಸಂಖ್ಯೆ ತೀರಾ ಕಡಿಮೆಯಾಗಿದೆ.
-ವಿಜಯ ಕೊಡವೂರು , ನಗರಸಭಾ ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next