Advertisement

ನಮ್ಮೊಂದಿಗೆ ಬಾರದವರನ್ನೂ ಒಟ್ಟಿಗೆ ಕರೆದೊಯ್ಯುತ್ತೇವೆ

12:23 PM Mar 12, 2018 | Team Udayavani |

ಬೆಂಗಳೂರು: ದೇಶದ ಅಭಿವೃದ್ಧಿ ಹಾಗೂ ಕೌಶಲಾಭಿವೃದ್ಧಿಯಲ್ಲಿ ಬಂದವರ ಜತೆಯಾಗಿ ಮತ್ತು ಬಾರದವರನ್ನು ಬಿಟ್ಟು ಮುಂದೆ ಸಾಗುವ ಪ್ರಶ್ನೆಯೇ ಇಲ್ಲ. ನಮ್ಮೊಂದಿಗೆ ಬಾರದವರನ್ನು ಒಟ್ಟಿಗೆ ಕರೆದೊಯ್ಯುತ್ತೇವೆ. ಬಾರದೇ ಇದ್ದರೂ ಬರುವಂತೆ ಮಾಡುವ ತಾಕತ್ತು ಸರ್ಕಾರಕ್ಕಿದೆ ಎಂದು ಕೇಂದ್ರ ಸಚಿವ ಅನಂತ್‌ ಕುಮಾರ್‌ ಹೆಗಡೆ ಹೇಳಿದರು.

Advertisement

ನಗರದ ಖಾಸಗಿ ಹೋಟೆಲ್‌ನಲ್ಲಿ ಭಾನುವಾರ ಕೇಂದ್ರ ಕೌಶಲಾಭಿವೃದ್ಧಿ ಇಲಾಖೆ ಹಾಗೂ ರಾಷ್ಟ್ರೀಯ ಕೌಶಲಾಭಿವೃದ್ಧಿ ನಿಗಮದಿಂದ ಹಮ್ಮಿಕೊಂಡಿದ್ದ “ಬೆಟರ್‌ಪ್ಲೆಸ್‌’ ದಿ ಜರ್ನಿ ಆಫ್ ರೂರಲ್‌ ಯೂಥ್‌ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ನೀವು ನಮ್ಮೊಂದಿಗೆ ಬಂದರೆ ಸ್ವಾಗತ, ಬಾರದೆ ಇದ್ದರೆ ನಿಮ್ಮನ್ನು ಬಿಟ್ಟು ಸ್ವಾತಂತ್ರ್ಯ ಹೋರಾಟ ಮಾಡಲಿದ್ದೇವೆ. ನಮ್ಮ ಮಾರ್ಗವೇ ಬೇರೆ.

ನಿಮ್ಮ ಮಾರ್ಗವೇ ಬೇರೆ ಎಂಬ ಭಾವನೆಯಲ್ಲಿ ಮುಂದೆ ಸಾಗುತ್ತೇವೆ ಎಂದು ವೀರ ಸಾವರ್ಕರ್‌ ಹೇಳುತ್ತಿದ್ದರು. ಈಗ ಹಾಗಲ್ಲ. ಎಲ್ಲರೂ ನಮ್ಮೊಂದಿಗೆ ಬರಬೇಕು. ಬಾರದೇ ಇದ್ದರೂ ಅವರನ್ನು ನಮ್ಮೊಂದಿಗೆ ಕರೆದುಕೊಂಡು ಹೋಗುವ ಸಾಮರ್ಥ್ಯ ಕೇಂದ್ರ ಸರ್ಕಾರಕ್ಕಿದೆ. ಉದ್ಯಮಿಗಳು, ಶಿಕ್ಷಣ ಸಂಸ್ಥೆಗಳು, ಉದ್ಯಮಶೀಲರು ಎಲ್ಲರೂ ಒಂದಾಗಿ ದೇಶ ಕಟ್ಟಬೇಕು. ಒಂದೇ ಪಥದಲ್ಲಿ ಸಾಗಬೇಕು,’ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಭಾರತಕ್ಕೆ ನಾವೆಲ್ಲರೂ ಒಟ್ಟಾಗಿ ಸಾಗಬೇಕಿದೆ. ವರ್ತಮಾನದ ಗಳಿಕೆಗಾಗಿ ಕೌಶಲಾಭಿವೃದ್ಧಿ ಅಲ್ಲ. ಭವಿಷ್ಯದ ಭಾರತಕ್ಕಾಗಿ ಕೌಶಲಾಭಿವೃದ್ಧಿ ಅಗತ್ಯವಿದೆ. ಈ ನಿಟ್ಟಿನಲ್ಲಿ ಎಲ್ಲಾ ಸಂಸ್ಥೆಗಳು, ಉದ್ಯಮ ಹಾಗೂ ಉದ್ಯಮಿಗಳು ಚಿಂತಿಸಬೇಕು. ದೇಶದಲ್ಲಿ ಇರುವ ಎಲ್ಲರಿಗೂ ನಗರ ಪ್ರದೇಶದಲ್ಲೇ ಉದ್ಯೋಗ ಸೃಷ್ಟಿಸಲು ಸಾಧ್ಯವಿಲ್ಲ. ಹೊಸ ತಂತ್ರಜ್ಞಾನ ಮತ್ತು ನವೀನ ಅವಕಾಶಗಳೊಂದಿಗೆ ಜನರು ಇರುವಲ್ಲಿಯೇ ಅವಕಾಶಗಳನ್ನು ಸೃಷ್ಟಿಸಬೇಕಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಕೃಷಿಕರು, ಬಡಗಿಯರು, ನೇಕಾರರು, ಚಮ್ಮಾರರು ಸೇರಿ ದೇಶದ ಶೇ.30ರಷ್ಟು ಜನರು ಕೌಶಲತೆಯಿಂದಲೇ ಜೀವನ ನಡೆಸುತ್ತಿದ್ದಾರೆ. ಜತೆಗೆ ಅನೇಕರಿಗೆ ಉದ್ಯೋಗವನ್ನೂ ನೀಡುತ್ತಿದ್ದಾರೆ. ಶೇ.30ರಷ್ಟು ಜನರಿಗೆ ಆಧುನಿಕತೆಗೆ ತಕ್ಕಂತೆ ತಮ್ಮ ಕೌಶಲತೆ ವೃದ್ಧಿಸಿಕೊಂಡು ಉಪಯೋಗಿಸುವ ತರಬೇತಿ ನೀಡುವ ಕೆಲಸ ಆಗಬೇಕು ಎಂದರು.

Advertisement

ಎಲ್ಲಾ ಭಾಷೆಯ ಮಾತೃಭಾಷೆಯಾದ ಸಂಸ್ಕೃತವನ್ನು ಅರ್ಥಮಾಡಿಕೊಳ್ಳಲು ಕಷ್ಟಪಡುತ್ತೇವೆ. ಇಂಗ್ಲಿಷ್‌ ಇಂದಿನ ಕಮ್ಯೂನಿಕೇಷನ್‌ ಭಾಷೆಯಾಗಿದೆ. ಇದೇ ನಿಜವಾದ ಸ್ಕಿಲ್‌ ಗ್ಯಾಪ್‌. ನಮ್ಮೊಳಗಿರುವ ಕೌಶಲತೆಯ ಕಂದಕವನ್ನು ಮೊದಲು ಮುಚ್ಚಬೇಕು. ಇಲ್ಲಿ ಅಯೋಗ್ಯರು ಯಾರೂ ಇಲ್ಲ. ಎಲ್ಲರೂ ಯೋಗ್ಯರೇ ಮತ್ತು ಒಂದಲ್ಲೊಂದು ಕೆಲಸ ಮಾಡುತ್ತಿದ್ದಾರೆ. ಆ ಕೆಲಸದಲ್ಲೇ ಪ್ರಾವೀಣ್ಯತೆ ಸಾಧಿಸಲು ಬೇಕಾದ ತಂತ್ರಗಾರಿಕೆಯನ್ನು ಕಲಿಸಿಕೊಡಬೇಕು ಎಂದರು.

ನಮ್ಮ ದೃಷ್ಟಿ ಬದಲಾದರೆ ದೃಶ್ಯವೂ ಬದಲಾಗುತ್ತದೆ. ಅನಕ್ಷರಸ್ಥರು, ಹಿಂದುಳಿದವರು ಅಥವಾ ಗ್ರಾಮೀಣ ಭಾಗದಿಂದ ಬಂದಿದ್ದಾರೆ ಎಂದು ಅವರನ್ನು ನಿರ್ಲಕ್ಷ್ಯ ಮಾಡುವುದು ಸರಿಯಲ್ಲ. ಅವರೊಳಗಿರುವ ಜೀವನ ಕೌಶಲತೆಯನ್ನು ಪತ್ತೆ ಹಚ್ಚಬೇಕು. ಭೂಮಿಯೊಳಗಿರುವ ವಜ್ರಕ್ಕೆ ಲೇಪಕೊಟ್ಟಾಗ ಮಾರುಕಟ್ಟೆಯಲ್ಲಿ ಮೌಲ್ಯ ಹೆಚ್ಚಾಗುತ್ತದೆ. ಹಾಗೆಯೇ ನಮ್ಮೊಳಗಿರುವ ಶಕ್ತಿ, ಸಾಮರ್ಥ್ಯ ಮತ್ತು ಕೌಶಲತೆಗೆ ರೂಪಕೊಡಬೇಕೆಂದು ಹೇಳಿದರು.

ಕೂಕರ್‌ ಸಿಎಂಒ ವಿನೀತ್‌ ಸೆಘಲ್‌, ಬಿಗ್‌ಬಾಸ್ಕೆಟ್‌ ಸಂಸ್ಥೆಯ ಎಚ್‌ಆರ್‌ ಮುಖ್ಯಸ್ಥ ಟಿ.ಎನ್‌.ಹರಿ, 1ಬ್ರಿಡ್ಜ್  ಸಿಇಒ ಮದನ್‌ ಪಡಕಿ, ಬೆಟರ್‌ಪ್ಲೆಸ್‌ ಸಿಇಒ ಪ್ರವೀಣ್‌ ಅಗರವಾಲ್‌, ರಾಷ್ಟ್ರೀಯ ಕೌಶಲಾಭಿವೃದ್ಧಿ ಮಂಡಳಿಯ ಸಿಇಒ ಮನೀಷ್‌ ಕುಮಾರ್‌ ಮೊದಲಾದವರು ಉಪಸ್ಥಿತರಿದ್ದರು.

ಹಾನರೆಬಲ್‌ ಚೀಫ್ ಮಿನಿಸ್ಟರ್‌!: ಕಾರ್ಯಕ್ರಮದಲ್ಲಿ ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವರ ಅಭಿನಂದನೆ ಸಂದರ್ಭದಲ್ಲಿ ಕಾರ್ಯಕ್ರಮದ ನಿರೂಪಕಿ ಬಾಯಿತಪ್ಪಿನಿಂದ ಅನಂತ್‌ ಕುಮಾರ್‌ ಹೆಗಡೆಯವರನ್ನು “ಹಾನರೆಬಲ್‌ ಚೀಫ್ ಮಿನಿಸ್ಟರ್‌’ (ಗೌರವಾನ್ವಿತ ಮುಖ್ಯಮಂತ್ರಿಗಳೇ) ಎಂದು ಸಂಭೋದಿಸಿದರು. ನಿರೂಪಕಿಯ ಮಾತು ಕೇಳಿ ಗಲಿಬಿಲಿಯಾದ ಸಚಿವ ಅನಂತ್‌ ಕುಮಾರ್‌ ಹೆಗಡೆ, ತಕ್ಷಣ ನಿರೂಪಕಿಯತ್ತ ನೋಡಿದರು. ತನ್ನ ತಪ್ಪಿನ ಅರಿವಾದ ನಿರೂಪಕಿ ಕ್ಷಮೆಯಾಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next